×
Ad

ಕೋವಿಡ್ ನಿಂದ ಅನಾಥರಾಗಿ ಗ್ರಾಮಸ್ಥರು ನೀಡಿದ್ದನ್ನು ತಿಂದು ಬದುಕುತ್ತಿರುವ ಐವರು ಮಕ್ಕಳು

Update: 2021-08-27 22:14 IST
photo: twitter.com/ndtvfeed

ಭೋಪಾಲ,ಆ.27: ಮಧ್ಯಪ್ರದೇಶದ ಭಿಂದ್ ಜಿಲ್ಲೆಯ ಅಮಹಾ ಗ್ರಾಮದಲ್ಲಿ ಕೋವಿಡ್ನಿಂದಾಗಿ ಹೆತ್ತವರನ್ನು ಕಳೆದುಕೊಂಡು ಅನಾಥರಾಗಿರುವ ಐವರು ಒಡಹುಟ್ಟಿದವರು ಬದುಕುಳಿಯಲು ಗ್ರಾಮಸ್ಥರ ಕರುಣೆಯನ್ನೇ ನೆಚ್ಚಿಕೊಂಡಿದ್ದಾರೆ.


ಮೂವರು ಸೋದರಿಯರು ಮತ್ತು ಇಬ್ಬರು ಸೋದರರ ಪೈಕಿ ಅತ್ಯಂತ ಕಿರಿಯ ಮಗುವಿಗೆ ಏಳು ತಿಂಗಳ ಪ್ರಾಯವಾಗಿದ್ದರೆ 10ರ ಹರೆಯದ ಬಾಲಕಿ ಎಲ್ಲರಿಗಿಂತ ಹಿರಿಯವಳಾಗಿದ್ದಾಳೆ. ವಾಲ್ಮೀಕಿ ಸಮುದಾಯಕ್ಕೆ ಸೇರಿದ ಈ ಮಕ್ಕಳ ತಲೆಯ ಮೇಲೊಂದು ಸರಿಯಾದ ಸೂರೂ ಇಲ್ಲ,ರುದ್ರಭೂಮಿ ಸಮೀಪದ ಭಾಗಶಃ ಬಿದ್ದುಹೋಗಿರುವ ಶೆಡ್ವೊಂದರಲ್ಲಿ ವಾಸವಿರುವ ಅವರು ಮಳೆ ಬಿದ್ದಾಗ ರುದ್ರಭೂಮಿಯಲ್ಲಿನ ತಗಡಿನ ಶೆಡ್ನಲ್ಲಿ ಆಶ್ರಯ ಪಡೆಯುತ್ತಾರೆ.
ಈ ಮಕ್ಕಳ ತಂದೆ ರಾಘವೇಂದ್ರ ವಾಲ್ಮೀಕಿ ಫೆಬ್ರವರಿಯಲ್ಲಿ ಮತ್ತು ತಾಯಿ ಗಿರಿಜಾ ಜೂನ್ನಲ್ಲಿ ಮೃತಪಟ್ಟಿದ್ದಾರೆ. ಇಬ್ಬರೂ ಕೊರೋನವೈರಸ್ಗೆ ಬಲಿಯಾಗಿದ್ದರು. ಆಗಿನಿಂದಲೂ ಈ ಮಕ್ಕಳು ತಮ್ಮ ಬದುಕನ್ನು ತಾವೇ ನೋಡಿಕೊಳ್ಳಬೇಕಾಗಿದೆ.


‘ನಮ್ಮ ಹೆತ್ತವರು ಸೋಂಕಿಗೆ ಬಲಿಯಾಗಿದ್ದಾರೆ. ನಮಗೆ ತಿನ್ನಲು ಏನೂ ಇಲ್ಲ,ಹೀಗಾಗಿ ಪ್ರತಿದಿನ ಗ್ರಾಮಸ್ಥರಿಂದ ಆಹಾರ ಮತ್ತು ಹಾಲನ್ನು ಪಡೆಯುತ್ತಿದ್ದೇವೆ,ಅವರು ನಮಗೆ ಬಟ್ಟೆಗಳನ್ನೂ ಒದಗಿಸಿದ್ದಾರೆ. ನಮಗೆ ಮನೆ,ಆಹಾರ,ಕುಡಿಯುವ ನೀರು ಮತ್ತು ಶಿಕ್ಷಣವನ್ನು ಒದಗಿಸುವಂತೆ ನಾವು ಸರಕಾರವನ್ನು ಕೊರುತ್ತೇವೆ ’ಎಂದು ಹಿರಿಯವಳಾದ ನಿಷಾ ಹೇಳಿದಳು.


ಹೆತ್ತವರು ಮೃತಪಟ್ಟಾಗಿನಿಂದಲೂ ನಿಷಾ ಒಡಹುಟ್ಟಿದವರ ಪಾಲಿಗೆ ತಂದೆ ಮತ್ತು ತಾಯಿ ಇಬ್ಬರೂ ಆಗಿದ್ದಾಳೆ. ಗ್ರಾಮದಲ್ಲಿಯೇ ಈ ಮಕ್ಕಳ ಅಜ್ಜ ವಾಸವಿದ್ದರೂ,ಆತ ಅವರ ಬಗ್ಗೆ ಕಾಳಜಿ ವಹಿಸಿಲ್ಲ ಎಂದು ಸ್ಥಳೀಯರು ತಿಳಿಸಿದರು.
ಮಧ್ಯಪ್ರದೇಶ ಸರಕಾರದಿಂದ ಈ ಮಕ್ಕಳಿಗೆ ಸಿಗಬಹುದಾದ ಯಾವುದೇ ನೆರವಿಗೆ ಗುರುತು ಚೀಟಿ ಮತ್ತು ದಾಖಲೆಗಳ ಕೊರತೆಯು ಅಡ್ಡಿಯಾಗಿದೆ. ಕಳೆದ ಮೇ ತಿಂಗಳಲ್ಲಿ ಕೋವಿಡ್ ಸಂದರ್ಭದಲ್ಲಿ ಅನಾಥರಾದ 1,001 ಮಕ್ಕಳಿಗೆ ಹಣಕಾಸು ಮತ್ತು ಆಹಾರ ಭದ್ರತೆ,ಶಿಕ್ಷಣ ಸೌಲಭ್ಯವನ್ನು ಒದಗಿಸಲು ವಿಶೇಷ ಯೋಜನೆಯೊಂದನ್ನು ಆರಂಭಿಸಲಾಗಿದೆ. ಸ್ಥಳೀಯ ಅಧಿಕಾರಿಗಳು ಈ ಮಕ್ಕಳ ಬವಣೆಯ ಬಗ್ಗೆ ಮಾಹಿತಿ ನೀಡಿದ್ದರೂ ಅವರು ಈ ಯೋಜನೆಯ ವ್ಯಾಪ್ತಿಗೊಳಪಟ್ಟಿಲ್ಲ.


‘ನಾವು ಅಧಿಕಾರಿಗಳಿಗೆ ತಿಳಿಸಿದೆವು,ಆದರೆ ಏನೂ ಆಗಿಲ್ಲ. ಮಾಜಿ ಸಚಿವ ಗೋವಿಂದ ಸಿಂಗ್ ಅವರೂ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು ಮತ್ತು ಆಗ ಕೆಲವು ದಾಖಲೆಗಳನ್ನು ಸಿದ್ಧಪಡಿಸಲಾಗಿತ್ತು. ಈ ಮಕ್ಕಳ ಬದುಕು ಈಗ ಈ ದಾಖಲೆಗಳನ್ನು ಅವಲಂಬಿಸಿದೆ ’ಎಂದು ಅವರನ್ನು ನೋಡಿಕೊಳ್ಳುತ್ತಿರುವ ಗ್ರಾಮಸ್ಥರಲ್ಲೋರ್ವರಾದ ಸಚಿನ್ ಶರ್ಮಾ ತಿಳಿಸಿದರು.


ಈ ಮಕ್ಕಳನ್ನು ನೋಡಿದರೆ ಗ್ರಾಮಸ್ಥರ ಮನಸ್ಸು ಮಿಡಿಯುತ್ತದೆ,ತಮ್ಮಿಂದ ಸಾಧ್ಯವಿರುವಷ್ಟು ನೆರವನ್ನು ಅವರು ನೀಡುತ್ತಿದ್ದಾರೆ. ಆದರೆ ಇದು ಸರಕಾರದ ವೈಫಲ್ಯವಾಗಿದೆ ಎಂದು ನರೇಂದ್ರ ಕೌರವ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News