×
Ad

ಲಸಿಕೆಯ ಪರಿಣಾಮಕಾರಿತ್ವಕ್ಕಾಗಿ ಕೋವಿಶೀಲ್ಡ್ ಡೋಸ್ ನೀಡಿಕೆಯ ಅಂತರ ಹೆಚ್ಚಳ: ಕೇರಳ ಹೈಕೋರ್ಟ್‌ಗೆ ಕೇಂದ್ರದ ವಿವರಣೆ

Update: 2021-08-27 23:57 IST

ತಿರುವನಂತಪುರ, ಆ.27: ಕೋವಿಶೀಲ್ಡ್ ಲಸಿಕೆಯ ಪರಿಣಾಮಕಾರಿತ್ವವನ್ನು ಹೆಚ್ಚಿಸುವ ಕಾರಣಕ್ಕಾಗಿ ಅದರ ಎರಡು ಡೋಸ್ ನೀಡಿಕೆಯ ನಡುವಿನ ಅಂತರವನ್ನು 84 ದಿನಗಳ ಅವಧಿಗೆ ಶಿಫಾರಸುಮಾಡಲಾಗಿದೆ ಎಂದು ಕೇಂದ್ರ ಸರಕಾರ ಕೇರಳ ಹೈಕೋರ್ಟ್‌ಗೆ ಗುರುವಾರ ತಿಳಿಸಿದೆ.

ಕೊರೋನ ಸೋಂಕಿನ ವಿರುದ್ಧ ಉತ್ತಮ ರಕ್ಷಣೆಯನ್ನು ಪಡೆಯಲು ಲಸಿಕೆ ನಿರ್ವಹಣೆ ಕುರಿತ ರಾಷ್ಟ್ರೀಯ ತಜ್ಞ ಸಮಿತಿಯ ಶಿಫಾರಸನ್ನು ಆಧರಿಸಿ ಕೋವಿಶೀಲ್ಡ್ ಲಸಿಕೆ ನೀಡಿಕೆಯ ಅಂತರವನ್ನು ಹೆಚ್ಚಿಸಲಾಗಿದೆಯೆಂದು ಕೇಂದ್ರ ಸರಕಾರ ತಿಳಿಸಿದೆ.

ಕಿಟೆಕ್ಸ್ ಗಾರ್ಮೆಂಟ್ಸ್ ಲಿಮಿಟೆಡ್ ಸಂಸ್ಥೆಯು ತನ್ನ ಉದ್ಯೋಗಿಗಳಿಗೆ ಕೋವಿಶೀಲ್ಡ್ ಲಸಿಕೆಯನ್ನು ಎರಡನೇ ಡೋಸ್ ಅನ್ನು ಮೊದಲ ಡೋಸ್ ಪಡೆದು 84 ದಿನ ಪೂರ್ತಿಯಾಗುವ ಮುನ್ನವೇ ನೀಡಲು ಅನುಮತಿ ನೀಡಬೇಕೆಂದು ಕೋರಿ ನ್ಯಾಯಾಲಯದ ಮೊರೆ ಹೋಗಿತ್ತು.

ಕೇಂದ್ರ ಆರೋಗ್ಯ ಸಚಿವಾಲಯವು ಮೇ 13ರಂದು ಪ್ರಕಟಿಸಿದ ಮಾರ್ಗಸೂಚಿಯೊಂದರಲ್ಲಿ ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್‌ಗಳ ನಡುವಿನ ಅಂತರವನ್ನು 12 ವಾರಗಳಿಂದ 16 ವಾರಗಳಿಗೆ ವಿಸ್ತರಿಸಿತ್ತು.

ಕೇರಳ ಹೈಕೋರ್ಟ್ ಆಗಸ್ಟ್ 25ರಂದು ಕೇಂದ್ರ ಸರಕಾರಕ್ಕೆ ನೋಟಿಸ್ ನೀಡಿ, ಕೋವಿಶೀಲ್ಡ್ ಡೋಸ್‌ಗಲ ನಡುವಿನ ಅಂತರವನ್ನು 84 ದಿನಗಳ ಅವಧಿಗೆ ವಿಸ್ತರಿಸಿರುವುಕ್ಕೆ ಅದರ ಪರಿಣಾಮಕಾರಿತ್ವಕ್ಕಾಗಿಯೇ ಅಥವಾ ಲಸಿಕೆಗಳ ಲಭ್ಯತೆಯ ಕಾರಣಕ್ಕಾಗಿಯೇ ಎಂದು ಪ್ರಶ್ನಿಸಿತ್ತು.

ವೈಜ್ಞಾನಿಕ ಅಧ್ಯಯನವನ್ನು ಆಧರಿಸಿ ಲಸಿಕೆ ನೀಡಿಕೆಯ ಮಧ್ಯಂತರದ ಅವಧಿಯನ್ನು ನಿಗದಿಪಡಿಸಲಾಗಿದೆ ಎಂದು ಕೇಂದ್ರ ಸರಕಾರದ ಪರ ವಕೀಲ ದಯಾ ಸಿಂಧು ಶ್ರೀಹರಿ ತಿಳಿಸಿದ್ದಾರೆಂದು ‘ದಿ ಹಿಂದೂಸ್ತಾನ್ ಟೈಮ್ಸ್’ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News