ರಹಮತ್ ತರೀಕೆರೆಯವರ ಜನಸಂಸ್ಕೃತಿಗಳ ಅಧ್ಯಯನ ಮತ್ತು ಪ್ರಮೇಯಗಳು

Update: 2021-08-28 19:30 GMT

ಸಾತ್ವಿಕ ಸಿಟ್ಟು, ಕರುಣೆ, ವಿಷಾದ, ಲಜ್ಜೆ ಮತ್ತು ಗಿಲ್ಟುಗಳಿಲ್ಲದ ಮನುಷ್ಯ ಭೂಮಿಗೆ ಭಾರವಾಗುತ್ತಾನೆ ಎಂಬ ಪ್ರಜ್ಞೆ ಕಾಡುತ್ತಿರುವುದರಿಂದಲೇ ತರೀಕೆರೆ ಅವರು ಒಂದು ದಿನವೂ ಸುಮ್ಮನಿರದೆ ದುಡಿದಿದ್ದಾರೆ. ತಮ್ಮ 28 ವರ್ಷಗಳ ವಿದ್ವತ್ ಪ್ರಯಾಣದಲ್ಲಿ ಸುಮಾರು 40 ಕೃತಿಗಳನ್ನು ಕನ್ನಡಿಗರಿಗೆ ಕೊಟ್ಟಿದ್ದಾರೆ. ಮಾನವೀಯ ಮನಸ್ಸು, ಸೂಕ್ಷ್ಮ ಪ್ರಜ್ಞೆ ಇದ್ದು ಕಠಿಣ ಪರಿಶ್ರಮದ ಶಿಸ್ತು ರೂಢಿಸಿಕೊಂಡರೆ ಯಾರು ಬೇಕಾದರೂ ರಹಮತ್ ತರೀಕೆರೆ ಆಗಬಹುದು ಎಂಬ ಸರಳ ಮಾರ್ಗವನ್ನು ಅವರು ತೋರಿಸಿಕೊಟ್ಟಿದ್ದಾರೆ.


ಭಾಗ-1


 ರಹಮತ್ ತರೀಕೆರೆಯವರು ನಮ್ಮ ಕಾಲದ ಅತ್ಯಂತ ಸೂಕ್ಷ್ಮ ಸಂವೇದನೆಯ ಸಂಶೋಧಕರು. ಸಂಶೋಧನೆ ಮತ್ತು ಸಾಹಿತ್ಯ ವಿಮರ್ಶಾ ವಲಯಗಳಿಗೆ ಜನಪ್ರಿಯತೆಯನ್ನು ತಂದುಕೊಟ್ಟ ವಿದ್ವಾಂಸರು. ಅವರ ವಿದ್ವತ್ತು ಸಾಹಿತ್ಯ ತತ್ವ-ವಿಮರ್ಶೆ, ಸಂಶೋಧನೆ- ಸಂಶೋಧನಾ ವಿಧಾನ, ತಿರುಗಾಟದ ಕಥನ ಮತ್ತು ಪ್ರಬಂಧ, ಸಂಸ್ಕೃತಿ ಮೀಮಾಂಸೆ, ಸಂಪಾದನೆ- ಸಂದರ್ಶನ ಮುಂತಾದ ಏರಿಯಾಗಳಲ್ಲಿ ಹರಿದು ಸಾಗುತ್ತದೆ. ಕಳೆದ ಮೂರು ದಶಕಗಳಿಂದ ನಾಡಿನ ಅಸಂಖ್ಯಾತ ತರುಣ-ತರುಣಿಯರು ತರೀಕೆರೆಯವರಿಂದ ಪ್ರಭಾವಿತರಾಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಕನ್ನಡ ವಿವಿಯಲ್ಲಿ ಪಿಎಚ್.ಡಿ. ಅಧ್ಯಯನ ಮಾಡಿದ್ದಾರೆ. ನಾಡಿನ ಹಲವು ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಮಾಡುತ್ತಿರುವ ಅಸಂಖ್ಯಾತರಿಗೆ, ವಿಷಯಗಳ ಆಯ್ಕೆ, ಅಧ್ಯಯನ ವಿಧಾನಗಳ ಕುರಿತು ನಿರಂತರವಾಗಿ ನೆರವಾಗುತ್ತಿದ್ದಾರೆ. ವಿದ್ವತ್ ಕ್ಷೇತ್ರದಲ್ಲಿ ತುಸುವೇ ಆಸಕ್ತಿ ಇದ್ದವರನ್ನೂ ಗುರುತಿಸಿ ಬೆಳೆಸಲು ಪ್ರಯತ್ನಿಸುತ್ತಾರೆ. ಚಿಂತನೆಗಳು ಲೋಕ ಚಿಂತನೆಗಳ ಪರಿಧಿಗೇರದಿದ್ದರೆ ಅವು ನಿರರ್ಥಕ ಎಂಬುದನ್ನು ಜೀವನ್ಮರಣದಂತೆ ಗ್ರಹಿಸಿ, ಭಾವಿಸಿ ಬರೆವ ಕಾರಣಕ್ಕೆ ಅವರ ಬರಹಗಳಲ್ಲಿ ವರ್ತಮಾನವೆಂಬುದು ಗೈರು ಹಾಜರಾಗುವುದಿಲ್ಲ. ಗಾಯಗೊಂಡ ವರ್ತಮಾನಕ್ಕೆ ಬೇಕಾದ ಮದ್ದುಗಳ ಮೂಲ ಎಲ್ಲಿದೆ ಎಂಬುದನ್ನು ಹುಡುಕುವ ಪ್ರಯತ್ನದ ಭಾಗವಾಗಿಯೇ ತರೀಕೆರೆಯವರ ಬರಹಗಳು ರೂಪುಗೊಂಡಿವೆ. ಮದ್ದುಗಳನ್ನು ಅವರು ಲೈಬ್ರರಿಗಳಲ್ಲಿ ಹುಡುಕಿದ್ದಕ್ಕಿಂತ ಜೀವಂತ ಜನಸಮುದಾಯಗಳಲ್ಲಿ ಹುಡುಕಿದ್ದೇ ಹೆಚ್ಚು. ಹೊಸಪೇಟೆಯ ತಮ್ಮ ಬಡಾವಣೆಯಿಂದ ವಿಶ್ವವಿದ್ಯಾನಿಲಯಕ್ಕೆ ಹೋಗುವ 14 ಕಿಲೋಮೀಟರುಗಳ ಪ್ರಯಾಣದಲ್ಲಿ ಸಿಗುವ ಗಾಳೆಮ್ಮನಗುಡಿ, ಮಲ್ಲಪ್ಪನಗುಡಿ, ಕಾಮಾಲಾಪುರ ಮುಂತಾದ ಜನರ ಜಾಗಗಳು ವಿಶ್ವವಿದ್ಯಾನಿಲಯಗಳ ವಿದ್ವತ್ತನ್ನು ಗೇಲಿ ಮಾಡುವ ಕನ್ನಡಿಗಳಂತೆ ಕೆಲಸ ಮಾಡಿವೆ. ಅಲ್ಲಿನ ಜನರ ಬದುಕಿನ ದಾರುಣತೆ, ಸಂಭ್ರಮ, ಕೂಡಿ ಕಳೆದುಹೋಗುವ ಪರಿ ಮತ್ತು ಪ್ರತಿ ಕೃಷಿ ಸೀಸನ್ನಿನಲ್ಲಿ ಹೊಲದ ಕೆಲಸ ಮಾಡುವಾಗ ಹಾವು ಕಚ್ಚಿ ಮರಣ ಹೊಂದುವ ರೈತಮಕ್ಕಳು, ಕೂಲಿ ಕಾರ್ಮಿಕರ ಕುಟುಂಬಗಳ ದುರಂತಗಾಥೆಗಳನ್ನು ಬಿಟ್ಟುಕೊಟ್ಟು ವಿಶ್ವವಿದ್ಯಾನಿಲಯಗಳಲ್ಲಿ ನಡೆಸುವ ವಿದ್ವತ್ ಚಿಂತನೆಗಳು ಅವರಿಗೆ ನಿರರ್ಥಕ ಅನ್ನಿಸಿವೆ. ಕಬ್ಬು, ಕಬ್ಬಿಣದ ಅದಿರು, ಮರಳು ತುಂಬಿಕೊಂಡು ರಸ್ತೆಗಳಲ್ಲಿ ಓಡಾಡುವ ಲಾರಿಗಳ ಚಕ್ರಕ್ಕೆ ಸಿಲುಕಿ ಸತ್ತ ಹಾವು, ಪ್ರಾಣಿಗಳನ್ನು ನಿರ್ಲಕ್ಷಿಸಿದ ವಿದ್ವಾಂಸ ಮನುಷ್ಯನಾಗಲು ಸಾಧ್ಯವೇ ಎಂಬ 'ಗಿಲ್ಟು' ಅವರನ್ನು ಸದಾ ಕಾಡಿದಂತಿದೆ.

ಜನರ ತೆರಿಗೆಯ ಹಣದಲ್ಲಿ ಬದುಕು ನಡೆಸುತ್ತಿರುವವರಿಗೆ, ಮಿಲಿಯಾಂತರ ವರ್ಷಗಳಿಂದ ಕಾಪಾಡಿಕೊಂಡು ಬಂದ ನಿಸರ್ಗದ ಸಂಪತ್ತುಗಳ ಮೇಲೆ ಅತ್ಯಾಚಾರ ಮಾಡಿ ಬದುಕುತ್ತಿರುವ ಜನರಿಗೆ, ಅದನ್ನು ನೋಡಿಯೂ ತಟಸ್ಥವಾಗುಳಿಯುವ ಸಮುದಾಯಗಳಿಗೆ, ತಾರತಮ್ಯಗಳು, ಶ್ರೇಷ್ಠ- ಕನಿಷ್ಠಗಳೆಂಬ ಪ್ರಜ್ಞೆಯನ್ನು ಪೋಷಿಸುತ್ತಿರುವವರಿಗೆ ಹುಟ್ಟಬೇಕಾದ 'ಗಿಲ್ಟು' ಹುಟ್ಟದೆ ಹೋದ ಕಾರಣಕ್ಕೆ ನಮ್ಮ ಸಂಸ್ಕೃತಿಗಳು ಸಿಕ್ಕಾಪಟ್ಟೆ ಹಿಪಾಕ್ರೆಟಿಕ್ ಆಗಿವೆ ಮತ್ತು ನರಕದಲ್ಲಿ ಬಿದ್ದು ಬೇಯುತ್ತಿವೆ ಎಂಬ ತಿಳುವಳಿಕೆಯಿಂದಲೇ ತರೀಕೆರೆಯವರ ಚಿಂತನೆಗಳು ಪ್ರಾರಂಭವಾಗುತ್ತವೆ. ಸಾತ್ವಿಕ ಸಿಟ್ಟು, ಕರುಣೆ, ವಿಷಾದ, ಲಜ್ಜೆ ಮತ್ತು ಗಿಲ್ಟುಗಳಿಲ್ಲದ ಮನುಷ್ಯ ಭೂಮಿಗೆ ಭಾರವಾಗುತ್ತಾನೆ ಎಂಬ ಪ್ರಜ್ಞೆ ಕಾಡುತ್ತಿರುವುದರಿಂದಲೇ ಅವರು ಒಂದು ದಿನವೂ ಸುಮ್ಮನಿರದೆ ದುಡಿದಿದ್ದಾರೆ. ತಮ್ಮ 28 ವರ್ಷಗಳ ವಿದ್ವತ್ ಪ್ರಯಾಣದಲ್ಲಿ ಸುಮಾರು 40 ಕೃತಿಗಳನ್ನು ಕನ್ನಡಿಗರಿಗೆ ಕೊಟ್ಟಿದ್ದಾರೆ. ಮಾನವೀಯ ಮನಸ್ಸು, ಸೂಕ್ಷ್ಮ ಪ್ರಜ್ಞೆ ಇದ್ದು ಕಠಿಣ ಪರಿಶ್ರಮದ ಶಿಸ್ತು ರೂಢಿಸಿಕೊಂಡರೆ ಯಾರು ಬೇಕಾದರೂ ರಹಮತ್ ತರೀಕೆರೆ ಆಗಬಹುದು ಎಂಬ ಸರಳ ಮಾರ್ಗವನ್ನು ಅವರು ತೋರಿಸಿಕೊಟ್ಟಿದ್ದಾರೆ.


ವಿದ್ವತ್ ವಲಯಗಳಲ್ಲಿ ಕೆಲಸ ಮಾಡುತ್ತಿರುವ ಜನರು ನಾಡಿನ ವರ್ತಮಾನದ ತಲ್ಲಣಗಳಿಗೆ ಬೇಕಾದ ಜ್ಞಾನವನ್ನು ಸೃಷ್ಟಿಸದೆ ಹೋದರೆ ಆಗುವ ಅನಾಹುತಗಳನ್ನು ಅಂದಾಜು ಮಾಡಲಾಗದು. ಅದರಲ್ಲೂ ಉನ್ನತ ಶಿಕ್ಷಣ ವ್ಯವಸ್ಥೆ ಕೆಟ್ಟು ಹೋದರೆ ಸಮಾಜದ ಸಂಪೂರ್ಣ ವ್ಯವಸ್ಥೆಗಳು ತಲೆ ಎತ್ತಲಾರದ ದೈನೇಸಿ ಸ್ಥಿತಿಗೆ ಬಂದು ತಲುಪುತ್ತವೆ. ಅಂತಹ ಸಮಾಜಗಳಲ್ಲಿ ಬಹಳ ಸುಲಭವಾಗಿ ತಾಲಿಬಾನಿಗಳು, ಲೂಟಿಕೋರರು, ದ್ವೇಷವಾದಿಗಳು ಹುಟ್ಟಿಕೊಂಡು ಸಮಾಜವನ್ನು ಸೀಳುನಾಯಿಗಳಂತೆ ಹರಿದು ಮುಕ್ಕಿಬಿಡುತ್ತಾರೆ. ಕಳೆದ ಶತಮಾನದ ಆರಂಭದ ದಶಕಗಳ ಅಮೆರಿಕದ ವಿಶ್ವವಿದ್ಯಾನಿಲಯಗಳು ವರ್ತಮಾನಕ್ಕೆ ಬೇಕಾದ ಸ್ವತಂತ್ರ ವಿದ್ವತ್ತು ಇಲ್ಲದೆ ಬಸವಳಿದು ಹೋಗಿದ್ದವು. ಉನ್ನತ ಶಿಕ್ಷಣ ಮತ್ತಷ್ಟು ಕುಸಿಯಲು ಬಿಡದೆ ಎಚ್ಚೆತ್ತುಕೊಂಡ ಆ ದೇಶ ತನ್ನ ಸಂಪೂರ್ಣ ಗಮನವನ್ನು ಉನ್ನತ ಶಿಕ್ಷಣದ ಕಡೆ ಕೇಂದ್ರೀಕರಿಸಿತು. ವಿದ್ವಾಂಸರ ಸಂಶೋಧನೆಗಳು ಹೆಚ್ಚು ಪ್ರಜಾತಾಂತ್ರಿಕವಾಗಿರುವಂತೆ ನೋಡಿಕೊಳ್ಳಲಾಯಿತು. ಅಲ್ಲಿಂದಾಚೆಗೆ ಆ ದೇಶದ ಗತಿಯೇಬದಲಾಗಿ ಹೋಯಿತು. ನಮ್ಮಲ್ಲಿ ಚಿಂತಕರು, ವಿದ್ವಾಂಸರನ್ನು ದುರುಳೀಕರಿಸಿ ನೋಡುವ ಅಪಾಯಕಾರಿ ಸ್ಥಿತಿ ನಿರ್ಮಾಣ ವಾಗಿದೆ. ಅದರಿಂದ ವ್ಯವಸ್ಥೆ ಬುಡವಿಲ್ಲದೆ ಕುಸಿದು ಹೋಗುತ್ತಿದೆ.
  ಡಿ.ಆರ್. ನಾಗರಾಜ್ ಅವರು ಕನ್ನಡ ವಿದ್ವತ್ತು ತೆಳುವಾಗುತ್ತಿರುವ ಕುರಿತು ವ್ಯಾಕುಲಗೊಂಡು ಬರೆದರು, ಮಾತನಾಡಿದರು. ಜ್ಞಾನ ಸೃಷ್ಟಿಯ ಕೆಲಸದಲ್ಲಿ ತೊಡಗಿದ ಜನ ರಟ್ಟುಗಳಂತೆ ತೆಳುವಾದರೆ, ಗೋಡೆಗಳಂತೆ ನಿರ್ಜೀವಗೊಂಡರೆ ನಾಡುಗಳು ಹೇಗೆ ವಿನಾಶದ ಹಾದಿ ಹಿಡಿಯುತ್ತವೆ ಎಂಬುದನ್ನು ಹಲವು ರೂಪಕಗಳ ಮೂಲಕ ವಿವರಿಸಿದರು. ಸಮಾಜದ ಜ್ಞಾನ ವ್ಯವಸ್ಥೆಯೂ ಒಳಗೊಂಡಂತೆ ಎಲ್ಲವೂ 'ಅವಸರ್ಪಿಣಿ' ಸ್ಥಿತಿಯಲ್ಲಿವೆ ಎಂದರು. ಅವಸರ್ಪಿಣಿ ಎಂದರೆ ಯಮಸಾಹಸ ಮಾಡಿ ಏಣಿ ಹತ್ತುವ ಹಾವು ಆಯತಪ್ಪಿದರೆ ಧೊಪ್ಪನೆ ನೆಲಕ್ಕೆ ಬೀಳುತ್ತದೆ. ಹಾಗೆಯೇ ಸಮಾಜವು ಕೂಡ. ಸಮಾಜದ ಸರ್ವ ಅಂಗಗಳೂ ಕುಸಿಯತೊಡಗುತ್ತವೆ. ಈ ಪ್ರಕ್ರಿಯೆಯನ್ನು ಜೈನ ಮೀಮಾಂಸೆಯು ಅವಸರ್ಪಿಣಿ ಕಾಲ ಎನ್ನುತ್ತದೆ ಎಂದು ಡಿ. ಆರ್. ವಿವರಿಸುತ್ತಾರೆ. ವಿದ್ವತ್ ವಲಯದ ಮೀಡಿಯೋಕ್ರಸಿಯ ಕುರಿತು ಕ್ರೋಧಗೊಂಡು ಮಾತನಾಡುವಾಗ ತನ್ನ ಮನೆಗೆ ತಾನೇ ಬೆಂಕಿಯ ಕಲ್ಲುಗಳನ್ನು ಎಸೆಯಲು ಹಿಂದೆ ಮುಂದೆ ನೋಡುತ್ತಿರಲಿಲ್ಲ. ಈ ವಿಚಾರದಲ್ಲಿ ಅವರು ತುಸು ಅನಾರ್ಕಿಸ್ಟರೆ. ಧರೆ ಉರಿಯುತ್ತಿದೆ ನೋಡಿ ಎನ್ನಬಲ್ಲರು, ಆದರೆ ಕಟ್ಟುವ ಕಾಯಕದ ಕುರಿತು ಅಷ್ಟೊಂದು ಆಸ್ಥೆ ವಹಿಸಲಾಗಲಿಲ್ಲ ಅವರಿಗೆ. ವಿಸ್ಮತಿ ಚಿಂತನೆಗಳೂ ಸೇರಿದಂತೆ ಅನೇಕ ಪ್ರಮೇಯಗಳು ಅಕಡೆಮಿಕ್ ಪಂಜರ ದಾಟಿ ಹೊರಬರಲಿಲ್ಲ. ಸಣ್ಣ ವಯಸ್ಸಿಗೆ ಬಂದೆರಗಿದ ಸಾವು ಅವರ ಕನಸುಗಳನ್ನು ಕಿತ್ತುಕೊಂಡಿತು.


  ಡಿ. ಆರ್. ಜ್ಞಾನ ಸೃಜನೆಯಲ್ಲಿ ವಿದ್ವಾಂಸರ ತಪ್ಪೆಷ್ಟಿದೆಯೋ ಅಷ್ಟೇ ಪ್ರಮಾಣದಲ್ಲಿ ವಿದ್ಯಾರ್ಥಿಗಳದೂ ತಪ್ಪಿದೆ ಎಂದು ಭಾವಿಸಿದ್ದರು. ಈ ವಿಚಾರದಲ್ಲಿ ಅವರು ಅಲ್ಲಮನ ಪೀಠದಲ್ಲಿ ಕುಳಿತ ಚನ್ನಬಸವಣ್ಣನಂತೆ ಕಾಣುತ್ತಿದ್ದರು. ತರೀಕೆರೆಯವರು ಸಹ ಡಿ.ಆರ್. ಅವರಂತೆಯೇ ವ್ಯಾಕುಲಗೊಂಡಿದ್ದರೂ ತನ್ನ ನಿಲುವುಗಳನ್ನು ಅನಾರ್ಕಿಯಾಗುವ ಹಾದಿಯ ಕಡೆಗೆ ಬಿಡಲಿಲ್ಲ. ಬದಲಾಗಿ, ಸರಿ ಮಾಡುವುದು ಹೇಗೆ? ಕಟ್ಟುವುದು ಹೇಗೆ? ಎಂದು ಯೋಚಿಸುತ್ತಾರೆ. ಅನೇಕ ಸಾರಿ ಅಷ್ಟೊಂದು ಪ್ರತಿಭಾವಂತರಲ್ಲದ ವಿದ್ಯಾರ್ಥಿಗಳಿಗೂ ಮಾರ್ಗದರ್ಶನ ಮಾಡಿ, ಮೈ ಬಗ್ಗಿಸಿ ದುಡಿಸಿ ಅವರನ್ನು ಗೆಲುವಿನ ಗೆರೆ ಮುಟ್ಟಿಸಲು ಪ್ರಯತ್ನಿಸಿದ್ದಾರೆ. ಪ್ರತಿಭೆಯೆಂಬುದು ಜನ್ಮಜಾತವಲ್ಲ ಎಂಬ ಸಮಾಜವಾದಿ ಆಶಯದಲ್ಲಿ ನಂಬಿಕೆ ಇಟ್ಟು ವಿದ್ಯಾರ್ಥಿಗಳನ್ನು ಪಳಗಿಸಿ ಅಧ್ಯಯನ ಮಾಡಿಸುವ ವಿಧಾನದ ಹಿಂದೆಯೂ ಒಂದು ರಾಜಕೀಯ ತತ್ವವಿದೆ. ತರೀಕೆರೆಯವರು ತಮ್ಮ ಸಂಶೋಧನೆಗಳಿಗೆ ಮಾಡಿಕೊಂಡ ಟಿಪ್ಪಣಿಗಳು, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವಾಗ ಎದುರಾದ ಸಿಕ್ಕುಗಳನ್ನು ಬಿಡಿಸುವಾಗ ರೂಪಿಸಿಕೊಂಡ ವಿಧಾನಗಳು, ಗಾಯಗೊಂಡ ವರ್ತಮಾನಕ್ಕೆ ಕಂಡು ಹಿಡಿಯಬೇಕಾದ ಮದ್ದಿನ ಫಾರ್ಮುಲಾಗಳೆಲ್ಲ ಸೇರಿ ಅವರ ಮೆಥೆಡಾಲಜಿಗಳು ರೂಪುಗೊಂಡಿವೆ. ಸಂಶೋಧನೆಯ ವಿಧಾನಗಳ ಕುರಿತೇ 'ಸಾಂಸ್ಕೃತಿಕ ಅಧ್ಯಯನ', 'ಕನ್ನಡ ಸಂಶೋಧನೆ; ತಾತ್ವಿಕ ವಿಚಾರ', 'ಸಂಶೋಧನ ಮೀಮಾಂಸೆ'ಗಳೆಂಬ ಮೂರು ಮುಖ್ಯ ಕೃತಿಗಳನ್ನು ರಚಿಸಿದ್ದಾರೆ. ಇವು ಹೊಸ ಸಂಶೋಧಕರ ಅಧ್ಯಯನಗಳಿಗೆ ಬೇಕಾಗುವ ನಕಾಶೆಯಂತೆ ಕೆಲಸ ಮಾಡುತ್ತಿವೆ. ಚಾರಣಿಗನೊಬ್ಬ ತಾನು ನಡೆವ ಬೆಟ್ಟ, ಕಣಿವೆ, ಕಾನನಗಳಲ್ಲಿ ನಕಾಶೆಯಿಲ್ಲದೆ ನಡೆಯಲಾರ. ನಕಾಶೆ ಎಂಬುದು ಮುಂದೆ ಹಾದು ಹೋದವರ ತ್ಯಾಗ, ಶ್ರಮಗಳಿಂದ ರೂಪುಗೊಂಡ ವಿಜ್ಞಾನದ ತಾರ್ಕಿಕ ಫಲ. ಕರ್ವಾಲೊ ಕಾದಂಬರಿಯ ಪ್ರಭಾಕರನ ಕ್ರೋನಾ ಮೀಟರಿನಂತೆ ಈ ನಕಾಶೆಯು ಕೆಲಸ ಮಾಡುತ್ತದೆ. ಸಂಶೋಧನಾ ವಿಧಾನಗಳೂ ಹಾಗೆಯೇ. ಗ್ಯಾರೇಜಿಗೆ ಬಂದ ಸೈಕಲ್ಲು, ಬೈಕು ಅಥವಾ ಕಾರು ಯಾವುದಾದರೂ ಇರಲಿ ಅದರ ಮಾಡೆಲ್ಲು ನೋಡಿ ಜಾಕು, ಸ್ಪಾನರು, ರಿಂಚು, ಸ್ಕ್ರೂ ಡ್ರೈವರು ತೆಗೆದು ಕೂರುವ ಕಸುಬುದಾರ ಮೆಕ್ಯಾನಿಕ್‌ನಂತೆ ತರೀಕೆರೆಯವರೂ ಕಾಣಿಸುತ್ತಾರೆ.
ಸಂಶೋಧನೆಗೆ ನಿರ್ದಿಷ್ಟ ತಾತ್ವಿಕ ಚೌಕಟ್ಟು ಇರಬೇಕಾಗುತ್ತದೆ. ಆದರೆ ದೊಡ್ಡ ಸಂಶೋಧಕರು ತಮ್ಮ ಜಿಜ್ಞಾಸೆಗಳ ಮೂಲಕವೇ ಹೊಸ ಹೊಸ ತಾತ್ವಿಕ ವಿಧಾನಗಳನ್ನು ರೂಪಿಸುತ್ತಾರೆ. ಸಂಶೋಧನೆಗಳ ತಾತ್ವೀಕರಣದ ಕುರಿತು ಪ್ರಸ್ತಾಪಿಸುವ ಮುಖ್ಯ ವಿಚಾರಗಳಿವು, ''ಚಿಂತನೆ ವಿಶ್ಲೇಷಣೆಗಳು ಒಂದು ಹಂತದ ನಂತರ, ನಿರ್ದಿಷ್ಟತೆಯಿಂದ ಸಾಮಾನ್ಯೀಕರಣದತ್ತ, ಮೂರ್ತತೆಯಿಂದ ಅಮೂರ್ತದತ್ತ, ಸರಳ ಹಂತದಿಂದ ಸೂಕ್ಷ್ಮ ಮತ್ತು ಸಂಕೀರ್ಣ ಹಂತದತ್ತ ಚಲಿಸುತ್ತವೆ. ಈ ಕೆಲಸದ ಹಿಂದೆ ಕೂಡ ಯಾವುದಾದರೂ ಸಿದ್ಧಾಂತ ಅಥವಾ ವಾದ ಹಿನ್ನೆಲೆಯಾಗಿ ಇರಬಹುದು. ಆದರೆ ಇಲ್ಲಿ ಯಾರೋ ಒಬ್ಬರು ಹಾಕಿಕೊಟ್ಟ ಹಾದಿಯಲ್ಲಿ ನಡೆಯುವ ವಿಧೇಯತೆಗಿಂತ, ತನ್ನದೇ ಆದ ಹಾದಿಯನ್ನು ಹುಡುಕುವ ತುಡಿತ ಮುಖ್ಯ; .....ಈ ಚರ್ಚೆಗೆ ಕೇವಲ ತಾತ್ವಿಕ ಪರಿಣತಿ ಸಾಲದು. ವಿಶಾಲ ಅಧ್ಯಯನ, ವೈವಿಧ್ಯವಾದ ಜೀವನಾನುಭವ, ಕಣ್ಮುಂದೆ ಸಂಭವಿಸುತ್ತಿರುವ ಬದಲಾವಣೆಗಳನ್ನು ಗಮನಿಸುವ ಸೂಕ್ಷ್ಮತೆ, ರಾಜಕೀಯ ಪ್ರಜ್ಞೆಯಲ್ಲಿ ಅವನ್ನು ಅರ್ಥಮಾಡಿಕೊಳ್ಳುವ ಜೀವಂತಿಕೆ-ಇವೆಲ್ಲ ಬೇಕಾಗುತ್ತವೆ. ಹೀಗಾಗಿ ಇದು ಮೇಲ್ನೋಟಕ್ಕೆ ಅಕಡೆಮಿಕ್ ಆದ ತತ್ವಶಾಸ್ತ್ರೀಯವಾದ ಕೆಲಸ. ಆದರೆ, ನಿಜವಾಗಿ ನೋಡಿದರೆ ಇದು ಅಧ್ಯಯನಗಳಾಚೆ ಹೋಗಿ ಬದುಕುವ ಸಂಗತಿ ಕೂಡ''. ಸಂಶೋಧನೆಗಳಲ್ಲಿ ಸಮಸ್ಯೀಕರಣ ಹಾಗೂ ತಾತ್ವೀಕರಣ ಎಂಬ ಬರಹದಲ್ಲಿ ತರೀಕೆರೆಯವರು ಪ್ರಸ್ತಾಪಿಸುವ ಮಾತುಗಳಿವು. ತನ್ನ ಸಂಶೋಧನೆಯ ದಾರಿ ಯಾವುದು ಎಂಬುದರ ಕುರಿತು ಅವರಿಗೆ ಸ್ಪಷ್ಟ ಅರಿವು ಇದೆ. ನಾವು ನಡೆಸುತ್ತಿರುವ ಬದುಕು ನಿರುದ್ದಿಶ್ಯವಲ್ಲ. ವರ್ತಮಾನದ ರಸಿಗೆಗೂಡಿದ ರಣಗಾಯಗಳಿಗೆ ಮದ್ದು ಹುಡುಕದೆ ಪಂಚೇಂದ್ರಿಯಗಳನ್ನು ಕೊಂದುಕೊಂಡು ಕೂರುವವರು ಮನುಷ್ಯರಾಗಲಾರರು ಅಂದ ಮೇಲೆ ಬೌದ್ಧಿಕ ಚಿಂತನೆಗಳನ್ನು ನಡೆಸುವ ಜವಾಬ್ದಾರಿ ಹೊತ್ತವರು ಸುಮ್ಮನಿದ್ದರೆ ಅದು ನಾಡದ್ರೋಹವಾಗುತ್ತದೆ. ಹೊಣೆಯರಿತು ದುಡಿವವರು ನಿರ್ದಿಷ್ಟ ತಾತ್ವಿಕ ಚೌಕಟ್ಟನ್ನು ರೂಪಿಸಿಕೊಳ್ಳಲೇಬೇಕಾಗುತ್ತದೆ.

Writer - ನೆಲ್ಲುಕುಂಟೆ ವೆಂಕಟೇಶ್

contributor

Editor - ನೆಲ್ಲುಕುಂಟೆ ವೆಂಕಟೇಶ್

contributor

Similar News