ಮಧ್ಯಪ್ರದೇಶ: ‘ಜೈ ಶ್ರೀ ರಾಮ್’ಘೋಷಣೆ ಕೂಗುವಂತೆ ಬಲವಂತಪಡಿಸಿದ ಇಬ್ಬರ ಬಂಧನ

Update: 2021-08-29 16:32 GMT

ಹೊಸದಿಲ್ಲಿ, ಅ. 29: ಮುಸ್ಲಿಂ ಗುಜರಿ ವ್ಯಾಪಾರಿ ಒಬ್ಬರು ‘ಜೈ ಶ್ರೀ ರಾಮ್’ಎಂದು ಘೋಷಣೆಗಳನ್ನು ಕೂಗುವಂತೆ ಇಬ್ಬರು ವ್ಯಕ್ತಿಗಳು ಬಲವಂತಪಡಿಸಿದ ಘಟನೆ ಮಧ್ಯಪ್ರದೇಶದ ಉಜ್ಜೈನಿ ಜಿಲ್ಲೆಯ ಸೆಕ್ಲಿ ಗ್ರಾಮದಲ್ಲಿ ಶನಿವಾರ ನಡೆದಿದೆ. ಈ ಘಟನೆಯ ಎರಡು ವೀಡಿಯೊ ರವಿವಾರ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಇಬ್ಬರೂ ಆರೋಪಿಗಳನ್ನು ಪೊಲೀಸರು ರವಿವಾರ ಬಂಧಿಸಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಒಂದು ವೀಡಿಯೊದಲ್ಲಿ ಗುಜರಿ ವ್ಯಾಪಾರಿಯ ಮಿನಿ ಟ್ರಕ್ ನಿಂದ ಇಬ್ಬರು ಗುಜರಿ ಸಾಮಗ್ರಿಗಳನ್ನು ಕೆಳಗೆ ಎಸೆಯುತ್ತಿರುವುದು ಹಾಗೂ ಮತ್ತೊಮ್ಮೆ ಗ್ರಾಮ ಪ್ರವೇಶಿಸದಂತೆ ಬೆದರಿಕೆ ಒಡ್ಡುತ್ತಿರುವುದು ದಾಖಲಾಗಿದೆ. ಇನ್ನೊಂದು ವೀಡಿಯೊದಲ್ಲಿ ‘ಜೈ’ ಶ್ರೀರಾಮ್ ಎಂದು ಘೋಷಣೆ ಕೂಗುವಂತೆ ಬಲವಂತಪಡಿಸುತ್ತಿರುವುದು ದಾಖಲಾಗಿದೆ.

ಗುಜರಿ ವ್ಯಾಪಾರಿ ಮಹಿದ್ಪುರದ ನಿವಾಸಿ ಅಬ್ದುಲ್ ರಶೀದ್ ಅವರು ಶನಿವಾರ ಝಾರ್ದಾ ಪೊಲೀಸ್ ಠಾಣಾ ವ್ಯಾಪ್ತಿಯ ಸಿಕ್ಲಿ ಗ್ರಾಮಕ್ಕೆ ತೆರಳಿ ತನ್ನ ಮಿನಿ ಟ್ರಕ್ ನಲ್ಲಿ ಗುಜರಿ ಸಾಮಗ್ರಿಗಳನ್ನು ಸಂಗ್ರಹಿಸುವ ಸಂದರ್ಭ ಈ ಘಟನೆ ನಡೆದಿದೆ.

ಈ ಗ್ರಾಮದಲ್ಲಿ ಗುಜರಿ ವ್ಯಾಪಾರ ಮಾಡದಂತೆ ಹಾಗೂ ಇಲ್ಲಿಂದ ತೆರಳುವಂತೆ ಕೆಲವರು ರಶೀದ್ ಅವರಿಗೆ ಬೆದರಿಕೆ ಒಡ್ಡಿದ್ದರು. ಅಲ್ಲಿಂದ ತೆರಳಿದಾಗ ಪಿಪ್ಪಿಯಾ ಧುಮಾದಲ್ಲಿ ಇಬ್ಬರು ವ್ಯಕ್ತಿಗಳು ಅವರನ್ನು ಅಡ್ಡಗಟ್ಟಿ ‘ಜೈ ಶ್ರೀ ರಾಮ್’ ಘೋಷಣೆಗಳನ್ನು ಕೂಗುವಂತೆ ಬಲವಂತಪಡಿಸಿದರು ಎಂದು ಮಹಿದ್ಪುರದ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News