ಕರ್ನಾಲ್ ನಲ್ಲಿ ರೈತರ ವಿರುದ್ಧ ಪೊಲೀಸ್ ಕ್ರಮವನ್ನು ಸಮರ್ಥಿಸಿಕೊಂಡ ಖಟ್ಟರ್
ಚಂಡಿಗಡ,ಆ.29: ಕರ್ನಾಲ್ನಲ್ಲಿ ಪ್ರತಿಭಟನಾನಿರತ ರೈತರ ವಿರುದ್ಧ ಪೊಲೀಸ್ ಕ್ರಮವನ್ನು ಸಮರ್ಥಿಸಿಕೊಂಡಿರುವ ಹರ್ಯಾಣ ಮುಖ್ಯಮಂತ್ರಿ ಮನೋಹರಲಾಲ ಖಟ್ಟರ್ ಅವರು, ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದಾಗಿ ಭರವಸೆಯನ್ನು ನೀಡಲಾಗಿತ್ತಾದರೂ ಪೊಲೀಸರತ್ತ ಕಲ್ಲುತೂರಾಟ ನಡೆದಿತ್ತು ಮತ್ತು ಹೆದ್ದಾರಿಯನ್ನು ತಡೆಯಲಾಗಿತ್ತು ಎಂದು ಹೇಳಿದ್ದಾರೆ.
ಕರ್ನಾಲ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು,ರೈತರು ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದರೆ ಯಾರೂ ಆಕ್ಷೇಪಿಸುತ್ತಿರಲಿಲ್ಲ. ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದಾಗಿ ಅವರು ಮೊದಲು ಭರವಸೆಯನ್ನು ನೀಡಿದ್ದರು. ಆದರೆ ಪೊಲೀಸರತ್ತ ಕಲ್ಲುತೂರಾಟ ನಡೆಸಿದರೆ ಮತ್ತು ಹೆದ್ದಾರಿಯನ್ನು ತಡೆದರೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಪೊಲೀಸರು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದರು.
ಕರ್ನಾಲ್ನಲ್ಲಿ ನಡೆದಿದ್ದ ಬಿಜೆಪಿ ಸಭೆಯು ರಾಜ್ಯಮಟ್ಟದ್ದಾಗಿತ್ತು ಮತ್ತು ಅದನ್ನು ಪ್ರತಿಭಟಿಸಲು ರೈತರು ನೀಡಿದ್ದ ಕರೆಯನ್ನು ತಾನು ಖಂಡಿಸುತ್ತೇನೆ ಎಂದು ಹೇಳಿದ ಖಟ್ಟರ್,ಯಾವುದೇ ಕಾರಣದಿಂದ ಯಾವುದೇ ಸಂಘಟನೆಯ ಕಾರ್ಯಕ್ರಮಕ್ಕೆ ಅಡ್ಡಿಯನ್ನುಂಟು ಮಾಡುವುದು ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದರು.
ರವಿವಾರ ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಅವರು ಲಾಠಿ ಪ್ರಹಾರದಿಂದ ಗಾಯಗೊಂಡು ಕರ್ನಾಲ್ ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೈತರನ್ನು ಭೇಟಿಯಾದರು. ರೈತರ ವಿರುದ್ಧ ಪೊಲೀಸ್ ದೌರ್ಜನ್ಯವನ್ನು ಅವರು ಖಂಡಿಸಿದರು.
ಲಾಠಿ ಪ್ರಹಾರದ ಹಿನ್ನೆಲೆಯಲ್ಲಿ ಮುಂದಿನ ಕ್ರಮದ ಬಗ್ಗೆ ಚರ್ಚಿಸಲು ಸೋಮವಾರ ಕರ್ನಾಲ್ನಲ್ಲಿ ರೈತ ಸಂಘಟನೆಗಳು ಸಭೆ ನಡೆಸಲಿವೆ ಎಂದು ಹರ್ಯಾಣ ಬಿಕೆಯು(ಚದುನಿ) ಮುಖ್ಯಸ್ಥ ಗುರ್ನಾಮ್ ಸಿಂಗ್ ಚದುನಿ ಸುದ್ದಿಗಾರರಿಗೆ ತಿಳಿಸಿದರು.