ಗೋಹತ್ಯೆಗಾಗಿ ಬಂಧಿತರಾಗಿದ್ದ ಸೋದರರ ವಿರುದ್ಧ 'ಹಿಂದುಗಳಿಗೆ ಕಿರಿಕಿರಿ' ಮಾಡಿದ್ದಾರೆಂದು ಎನ್‌ಎಸ್‌ಎ ಹೇರಿದ್ದ ಪೊಲೀಸರು

Update: 2021-08-30 15:31 GMT

ಹೊಸದಿಲ್ಲಿ,ಆ.30:ಉತ್ತರ ಪ್ರದೇಶದಲ್ಲಿ 2020,ಆಗಸ್ಟ್‌ವರೆಗೆ 139 ಜನರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ)ಯನ್ನು ಹೇರಲಾಗಿದ್ದು,ಈ ಪೈಕಿ 76 ಜನರು ಗೋಹತ್ಯೆ ಆರೋಪಿಗಳಾಗಿದ್ದರು. ಸೀತಾಪುರ ಜಿಲ್ಲೆಯ ಇಮಲಿಯಾ ಗ್ರಾಮದ ಮೂವರು ಸಹೋದರರ ವಿರುದ್ಧದ ಪ್ರಕರಣವು ಇವುಗಳಲ್ಲಿ ಸೇರಿದೆ. 

ಗೋಹತ್ಯೆ ಆರೋಪದಲ್ಲಿ ಬಂಧಿಸಲ್ಪಟ್ಟಿದ್ದ ತಮ್ಮ ಮೇಲೆ ಎನ್‌ಎಸ್‌ಎ ಹೇರಿದ್ದನ್ನು ಪ್ರಶ್ನಿಸಿ ಅವರು ಅಲಹಾಬಾದ್ ಉಚ್ಚ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದು,ಈ ವರ್ಷದ ಆ.5ರಂದು ನ್ಯಾಯಾಲಯವು ಅವರನ್ನು ಎನ್‌ಎಸ್‌ಎ ಅಡಿ ಬಂಧಿಸಿದ್ದನ್ನು ರದ್ದುಗೊಳಿಸಿದೆ. ಎನ್‌ಎಸ್‌ಎ ಅಡಿ ಆರೋಪಿಯನ್ನು ಗರಿಷ್ಠ ಒಂದು ವರ್ಷ ಬಂಧನದಲ್ಲಿರಿಸಬಹುದು. ವಿಪರ್ಯಾಸವೆಂದರೆ ನ್ಯಾಯಾಲಯದ ತೀರ್ಪು ಹೊರಬಿದ್ದಾಗ ಅವರು ಅದಾಗಲೇ ಈ ಅವಧಿಯನ್ನು ಪೂರ್ಣಗೊಳಿಸಿದ್ದರು ಎಂದು ಅಪೂರ್ವ ಮಂಧಾನಿ Theprint.in ಗೆ ಬರೆದ ಲೇಖನದಲ್ಲಿ ಉಲ್ಲೇಖಿಸಿದ್ದಾರೆ.

2020,ಆ.12ರಂದು ಪರ್ವೇಝ್(33) ಮತ್ತು ಇರ್ಫಾನ್(21)ರನ್ನು ಬಂಧಿಸಿದ್ದ ಪೊಲೀಸರು ಮರುದಿನ ಅವರ ಹಿರಿಯ ಸೋದರ ರಹಮತುಲ್ಲಾ (40)ನನ್ನು ಬಂಧಿಸಿದ್ದರು. ಬಂಧಿತರಿಂದ 60 ಕೆಜಿ ಗೋಮಾಂಸ,ಹತ್ಯೆಗೆ ಬಳಸಿದ್ದ ಸಾಧನಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ಹೇಳಿದ್ದರು. ಒಂದು ತಿಂಗಳ ನಂತರ ಅವರು ನ್ಯಾಯಾಂಗ ಬಂಧನದಲ್ಲಿ ಇದ್ದಾಗಲೇ ಅವರ ವಿರುದ್ಧ ಉ.ಪ್ರ.ಗ್ಯಾಂಗ್‌ಸ್ಟರ್ಸ್ ಮತ್ತು ಸಮಾಜವಿರೋಧಿ ಚಟುವಟಿಕೆಗಳ (ತಡೆ) ಕಾಯ್ದೆ ಹಾಗೂ ಎನ್‌ಎಸ್‌ಎ ಅನ್ನು ಹೇರಲಾಗಿತ್ತು.

ಈ ಮೂವರು ಸೋದರರು ‘ಹಿಂದು ಸಮುದಾಯಕ್ಕೆ ಕಿರಿಕಿರಿ ’ನೀಡುತ್ತಿದ್ದರಿಂದ ಅವರ ವಿರುದ್ಧ ಎನ್‌ಎಸ್‌ಎ ಹೇರಿದ್ದನ್ನು ಪೊಲೀಸರು ಸಮರ್ಥಿಸಿಕೊಂಡಿದ್ದರೆ,ತಾವು ರಾಜಕೀಯದ ಬಲಿಪಶುಗಳಾಗಿದ್ದೇವೆ ಎಂದು ಆರೋಪಿಗಳು ಹೇಳಿದ್ದಾರೆ.

ಎನ್‌ಎಸ್‌ಎ ಅಡಿ ಬಂಧನದಲ್ಲಿದ್ದಾಗಲೇ ನ್ಯಾಯಾಲಯವು ಈ ಮೂವರು ಸೋದರರಿಗೆ 2020,ಆ.27ರಂದು ಗೋಹತ್ಯೆ ಕಾನೂನಿನಡಿ ದಾಖಲಾಗಿದ್ದ ಎಫ್‌ಐಆರ್‌ನಲ್ಲಿ ಮತ್ತು 2020,ನ.11ರಂದು ಗ್ಯಾಂಗಸ್ಟರ್ಸ್ ಕಾಯ್ದೆಯಡಿಯ ಎಫ್‌ಐಆರ್‌ನಲ್ಲಿ ಜಾಮೀನು ನೀಡಿತ್ತು.
ನ್ಯಾಯಾಧೀಶರು ಆ.5ರಂದು ಹೊರಡಿಸಿರುವ ಆದೇಶದಲ್ಲಿ ಪ್ರಾಸಿಕ್ಯೂಷನ್ ಪ್ರಕರಣದಲ್ಲಿಯ ಕೆಲವು ಲೋಪಗಳನ್ನು,ವಿಶೇಷವಾಗಿ ಯಾವುದೇ ಸಾರ್ವಜನಿಕ ಸ್ವತಂತ್ರ ಸಾಕ್ಷಿಗಳ ಅನುಪಸ್ಥಿತಿಯನ್ನು ಬೆಟ್ಟು ಮಾಡಿದ್ದಾರೆ.

ಪಶುವೈದ್ಯರು ಕೇವಲ ಮಾಂಸವನ್ನು ನೋಡಿ ಅದು ಬೀಫ್ ಎಂದು ದೃಢಪಡಿಸಿದ್ದರು ಮತ್ತು ಅದನ್ನು ಸಾಬೀತುಗೊಳಿಸಲು ವಿಧಿವಿಜ್ಞಾನ ವರದಿಯನ್ನು ಸಲ್ಲಿಸಲಾಗಿರಲಿಲ್ಲ ಎನ್ನುವುದನ್ನೂ ನ್ಯಾಯಾಲಯವು ಬೆಟ್ಟು ಮಾಡಿದೆ.

ಸಹೋದರರ ವಿರುದ್ಧ ಎನ್‌ಎಸ್‌ಎ ಹೇರಿದ್ದ ಆದೇಶದಲ್ಲಿ,ಆರೋಪಿಗಳು ಜಾಮೀನು ಪಡೆಯಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಮತ್ತು ಅವರಿಗೆ ಜಾಮೀನು ನೀಡಿದರೆ ಇಂತಹುದೇ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಅವರ ಚಟುವಟಿಕೆಗಳು ಸಾರ್ವಜನಿಕ ಸುವ್ಯವಸ್ಥೆಯ ನಿರ್ವಹಣೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ ಮತ್ತು ಗ್ರಾಮದಲ್ಲಿ ಕೋಮು ಸೌಹಾರ್ದತೆಯನ್ನು ಹಾಳು ಮಾಡುತ್ತದೆ ಎಂದು ಹೇಳಲಾಗಿತ್ತು. ಆರೋಪಿಗಳು ಹೇಯ ಅಪರಾಧವನ್ನು ಮಾಡಿದ್ದಾರೆ ಮತ್ತು ಹಿಂದು ಸಮುದಾಯಕ್ಕೆ ಕಿರಿಕಿರಿಯನ್ನುಂಟು ಮಾಡಿದ್ದಾರೆ. ಗೋಮಾಂಸ ಪತ್ತೆ ಮತ್ತು ಆರೋಪಿಗಳ ಬಂಧನದ ಸುದ್ದಿ ಹರಡುತ್ತಿದ್ದಂತೆ ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿ ಉದ್ವಿಗ್ನಗೊಂಡಿತ್ತು ಮತ್ತು ಕೋಮು ಸಾಮರಸ್ಯಕ್ಕೆ ಭಂಗವುಂಟಾಗಿತ್ತು ಎಂದೂ ಎನ್‌ಎಸ್‌ಎ ಅಡಿ ಬಂಧನದ ಆದೇಶವನ್ನು ಹೊರಡಿಸಿದ್ದ ಜಿಲ್ಲಾಧಿಕಾರಿಗಳು ಸಮರ್ಥಿಸಿಕೊಂಡಿದ್ದರು.

ಕಳೆದ ವರ್ಷದ ಆ.24ರಂದು ಎನ್‌ಎಸ್‌ಎ ಆದೇಶದ ವಿರುದ್ಧ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದ ಅಹವಾಲಿನಲ್ಲಿ ಈ ಸೋದರರು,ಪೊಲೀಸರು ತಮ್ಮನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ರಾಜಕೀಯ ದುರುದ್ದೇಶ ತಮ್ಮ ಬಂಧನದ ಹಿಂದಿನ ಕಾರಣವಾಗಿದೆ. ತಾವಾಗಲೀ ತಮ್ಮ ಕುಟುಂಬದ ಯಾರೇ ಆಗಲಿ ಮುಂಬರುವ ಚುನಾವಣೆಗಲ್ಲಿ ಸ್ಪರ್ಧಿಸದಂತೆ ಮಾಡುವುದು ಇದರ ಉದ್ದೇಶವಾಗಿದೆ ಎಂದು ಹೇಳಿದ್ದರು.
ತಾವು ರಾಜಕೀಯದ ಬಲಿಪಶುಗಳಾಗಿದ್ದೆವೆ ಎಂಬ ತಮ್ಮ ಆರೋಪಕ್ಕೆ ಈ ಸೋದರರು ಈಗಲೂ ಅಂಟಿಕೊಂಡಿದ್ದಾರೆ.

ತಮ್ಮನ್ನು ಒಂದು ವರ್ಷ ಅನ್ಯಾಯವಾಗಿ ಜೈಲಿನಲ್ಲಿಟ್ಟಿದ್ದಕ್ಕೆ ತಮಗೆ ಪರಿಹಾರ ದೊರೆಯಬೇಕು ಎಂದು ಹೇಳಿದ ಪರ್ವೇಝ್,ರಾಜ್ಯ ಸರಕಾರವು ಮುಸ್ಲಿಮರನ್ನು ಗುರಿಯಾಗಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಉಚ್ಚ ನ್ಯಾಯಾಲಯದ ತೀರ್ಪು ಹೊರಬಿದ್ದಾಗ ಅವರು ಅದಾಗಲೇ ಒಂದು ವರ್ಷವನ್ನು ಬಂಧನದಲ್ಲಿ ಕಳೆದಿದ್ದರಿಂದ ಅವರು ಸಲ್ಲಿಸಿದ್ದ ಅರ್ಜಿಯು ನಿಷ್ಪ್ರಯೋಜಕವಾಗಿದೆ. ರಾಜ್ಯ ಸರಕಾರದ ಸೂಚನೆಯಂತೆ ಅವರನ್ನು ಬಂಧಿಸಲಾಗಿದ್ದರಿಂದ ಅವರು ಪರಿಹಾರಕ್ಕೆ ಅರ್ಹರಾಗಿದ್ದಾರೆ ಎಂದು ಈ ಸೋದರರ ಪರ ವಾದಿಸಿದ್ದ ವಕೀಲ ನರೇಂದ್ರ ಗುಪ್ತಾ ತಿಳಿಸಿದರು.

ಈ ವರ್ಷದ ಆ.13ರಂದು ಈ ಸೋದರರು ಬಂಧಮುಕ್ತಗೊಂಡಿದ್ದಾರಾದರೂ ಅವರ ಕಾನೂನು ಹೊರಾಟವಿನ್ನೂ ಮುಗಿದಿಲ್ಲ. ಗೋಹತ್ಯೆ ಕಾನೂನು ಮತ್ತು ಗ್ಯಾಂಗಸ್ಟರ್ಸ್ ಕಾಯ್ದೆಯಡಿ ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣಗಳಲ್ಲಿ ಅವರಿನ್ನೂ ವಿಚಾರಣೆಯನ್ನು ಎದುರಿಸಬೇಕಿದೆ.

ಕೃಪೆ: Theprint.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News