ಈ.ಡಿ.ಯಿಂದ ರಾಜಕೀಯ ನಾಯಕರಿಗೆ ಪ್ರೇಮಪತ್ರ: ಶಿವಸೇನೆ ಅಣಕ

Update: 2021-08-30 16:28 GMT

ಮುಂಬೈ,ಆ.30: ಜಾರಿ ನಿರ್ದೇಶನಾಲಯ(ಈ.ಡಿ.)ವು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತನ್ನ ಮುಂದೆ ವಿಚಾರಣೆಗೆ ಹಾಜರಾಗುವಂತೆ ಮಹಾರಾಷ್ಟ್ರದ ಸಚಿವ ಅನಿಲ್ ಪರಬ್ ಅವರಿಗೆ ನೋಟಿಸನ್ನು ಜಾರಿಗೊಳಿಸಿರುವ ಹಿನ್ನೆಲೆಯನ್ನು ಸೋಮವಾರ ಕೇಂದ್ರವನ್ನು ಗೇಲಿ ಮಾಡಿದ ಶಿವಸೇನೆ ಸಂಸದ ಸಂಜಯ ರಾವುತ್ ಅವರು,ಈ.ಡಿ.ಹೊರಡಿಸಿರುವ ನೋಟಿಸ್ ‘ಡೆತ್ ವಾರಂಟ್’ಅಲ್ಲ, ಅದು ರಾಜಕೀಯ ನಾಯಕರಿಗೆ ‘ಲವ್ ಲೆಟರ್’ ಆಗಿದೆ ಎಂದು ಹೇಳಿದರು.

ಮಹಾವಿಕಾಸ ಅಘಾಡಿಯ ಬಲಿಷ್ಠವಾದ ಗೋಡೆಯನ್ನು ಭೇದಿಸಲು ವಿಫಲ ಯತ್ನಗಳ ಬಳಿಕ ಇಂತಹ ಪ್ರೇಮಪತ್ರಗಳು ಬರುವುದು ಹೆಚ್ಚಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದ ರಾವುತ್,ಬಿಜೆಪಿ ನಾಯಕರು ಪರಬ್ ಅವರನ್ನು ಗುರಿಯಾಗಿಸಿಕೊಂಡಿದ್ದಾರೆ. ಪರಬ್ ನೋಟಿಸಿಗೆ ಉತ್ತರಿಸಲಿದ್ದಾರೆ ಮತ್ತು ಈ.ಡಿ.ಯೊಂದಿಗೆ ಸಹಕರಿಸಲಿದ್ದಾರೆ ಎಂದರು.

ಮಹಾರಾಷ್ಟ್ರದ ಮಾಜಿ ಗೃಹಸಚಿವ ಅನಿಲ್ ದೇಶಮುಖ ಮತ್ತು ಇತರರ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ಈ.ಡಿ.ಪರಬ್ ಅವರಿಗೆ ಸೂಚಿಸಿದೆ. ಬಿಜೆಪಿಯ ವ್ಯಕ್ತಿಯೋರ್ವರು ಈ.ಡಿ.ಯಲ್ಲಿ ಕೆಲಸ ಮಾಡುತ್ತಿದ್ದಾರೆ ಅಥವಾ ಈ.ಡಿ.ಅಧಿಕಾರಿಯೋರ್ವರು ಬಿಜೆಪಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದೂ ರಾವತ್ ಕುಟುಕಿದರು.

ಕೋವಿಡ್ ನಿರ್ಬಂಧಗಳಿಂದಾಗಿ ಮಹಾರಾಷ್ಟ್ರದಲ್ಲಿ ಮುಚ್ಚಿರುವ ದೇವಸ್ಥಾನಗಳನ್ನು ಪುನಃ ತೆರೆಯುವಂತೆ ಪ್ರತಿಭಟನೆಗಳನ್ನು ನಡೆಸುತ್ತಿರುವುದಕ್ಕಾಗಿ ಬಿಜೆಪಿಯನ್ನು ತರಾಟೆಗೆತ್ತಿಕೊಂಡ ಅವರು,’ಮುಂಬರುವ ಹಬ್ಬಗಳ ಮುನ್ನ ಮತ್ತು ಸಾಂಕ್ರಾಮಿಕದ ಹರಡುವಿಕೆ ಬಗ್ಗೆ ಎಚ್ಚರಿಕೆ ವಹಿಸುವಂತೆ ಕೇಂದ್ರದ ನಿರ್ದೇಶಗಳನ್ನು ರಾಜ್ಯ ಸರಕಾರವು ಪಾಲಿಸುತ್ತಿದೆ. ಕೇಂದ್ರ ಸರಕಾರವೂ ‘ಹಿಂದುತ್ವವಾದಿ’ಯಾಗಿದೆ ಎಂದು ನಾವು ನಂಬಿದ್ದೇವೆ ’ ಎಂದರು.
ಹರ್ಯಾಣದಲ್ಲಿ ರೈತರ ಮೇಲೆ ಲಾಠಿಪ್ರಹಾರದ ಕುರಿತು ಪ್ರಶ್ನೆಗೆ ರಾವುತ್,ರೈತರ ರಕ್ತವನ್ನು ಚೆಲ್ಲಾಡಿದ್ದಕ್ಕೆ ಬಿಜೆಪಿ ಬೆಲೆಯನ್ನು ತೆರಬೇಕಾಗುತ್ತದೆ ಎಂದು ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News