ಐದು ವರ್ಷಗಳ ನಂತರವೂ ನಾಪತ್ತೆಯಾಗಿರುವ ನಜೀಬ್ ಅಹ್ಮದ್ ಗಾಗಿ ಕಾಯುತ್ತಿರುವ ತಾಯಿ

Update: 2021-08-30 16:39 GMT
file photo : PTI

ಹೊಸದಿಲ್ಲಿ,ಆ.30: ಸೋಮವಾರ ಬಲವಂತದ ಕಣ್ಮರೆಗಳ ಸಂತ್ರಸ್ತರ ಅಂತರಾಷ್ಟ್ರೀಯ ದಿನವಾಗಿದ್ದು,ದಿಲ್ಲಿಯ ಜೆಎನ್ಯು ವಿದ್ಯಾರ್ಥಿ ನಜೀಬ್ ಅಹ್ಮದ್ ನಾಪತ್ತೆಯಾಗಿ ಸುಮಾರು ಐದು ವರ್ಷಳು ಕಳೆದಿದ್ದರೂ ಅವರ ತಾಯಿ ಫಾತಿಮಾ ನಫೀಸ್ ಈಗಲೂ ಮಗನ ಮರಳುವಿಕೆಗಾಗಿ ಕಾಯುತ್ತಿದ್ದಾರೆ.

2016,ಅ.15ರಂದು ರಾತ್ರಿ ವಿವಿಯ ಹಾಸ್ಟೆಲ್ನಲ್ಲಿ ಎಬಿವಿಪಿ ಕಾರ್ಯಕರ್ತರೊಂದಿಗೆ ಕಲಹದ ಬಳಿಕ ನಜೀಬ್ ನಾಪತ್ತೆಯಾಗಿದ್ದು,ಈವರೆಗೂ ಅವರ ಸುಳಿವು ಲಭ್ಯವಾಗಿಲ್ಲ. ದೇಶದ ಉನ್ನತ ತನಿಖಾ ಸಂಸ್ಥೆಗಳು ನಜೀಬ್ ನಾಪತ್ತೆ ಪ್ರಕರಣದ ತನಿಖೆ ನಡೆಸಿವೆ,ಆದರೆ ನಜೀಬ್ ನಾಪತ್ತೆಗೆ ಕಾರಣರಾಗಿರುವವರ ಜೊತೆ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಅವರ ಕುಟುಂಬವು ನಂಬಿದೆ.

ಜೆಎನ್ಯುದಲ್ಲಿ ಜೈವಿಕ ತಂತ್ರಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿದ್ದ 31ರ ಹರೆಯದ ನಜೀಬ್ ಬಡಕುಟುಂಬದಿಂದ ಬಂದಿದ್ದು,ಹೆತ್ತವರ ಹಿರಿಯ ಮಗನಾಗಿದ್ದರು. ಅವರಿಗೆ ಇಬ್ಬರು ಸೋದರರು ಮತ್ತು ಓರ್ವ ಸೋದರಿ ಇದ್ದಾರೆ.


 ತನ್ನ ಮಗನನ್ನು ಮತ್ತೆ ನೋಡುವ ಭರವಸೆಯನ್ನು ತಾನು ಬಿಟ್ಟುಕೊಟ್ಟಿಲ್ಲ ಎಂದು ಸುದ್ದಿಸಂಸ್ಥೆಗೆ ತಿಳಿಸಿದ ಫಾತಿಮಾ,‘ನಜೀಬ್ ಇನ್ನೂ ಬದುಕಿದ್ದಾನೆ ಮತ್ತು ಆತನನ್ನು ಯಾವುದೋ ಜೈಲಿನಲ್ಲಿ ಕೂಡಿಹಾಕಲಾಗಿದೆ ಎಂದು ನಾನು ಈಗಲೂ ನಂಬಿದ್ದೇನೆ. ಒಂದಲ್ಲ ಒಂದು ದಿನ ಆತ ಖಂಡಿತ ಮರಳಿ ಬರುತ್ತಾನೆ ’ಎಂದು ಹೇಳಿದರು.

ಐದು ವರ್ಷಗಳಾದರೂ ತನ್ನ ಮಗನನ್ನು ಪತ್ತೆ ಹಚ್ಚಲು ಸಾಧ್ಯವಾಗದ ಸರಕಾರದ ವಿರುದ್ಧ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ ಅವರು,ನಜೀಬ್ ನ ಕಣ್ಮರೆಯು ಸರಕಾರದ ಸಂಚಿನ ಭಾಗವಾಗಿದೆ, ಹೀಗಾಗಿ ಅದರಿಂದ ಹೆಚ್ಚಿನದನ್ನು ನಿರೀಕ್ಷಿಸುವಂತಿಲ್ಲ. ನನ್ನ ಮಗನನ್ನು ಇತರರು ದಾಳವನ್ನಾಗಿ ಬಳಸಿಕೊಂಡಿದ್ದಾರೆ ’ಎಂದು ಯಾರನ್ನೂ ಹೆಸರಿಸದೆ ಹೇಳಿದರು.
2016.ಆ.1ರಂದು ಜೆಎನ್ಯುದಲ್ಲಿ ಪ್ರವೇಶವನ್ನು ಪಡೆದಿದ್ದ ನಜೀಬ್ ಅದೇ ವರ್ಷದ ಅ.15ರಂದು ಕಣ್ಮರೆಯಾಗಿದ್ದರು.

ಮೊದಲು ಕನೈಯಾ ಕುಮಾರ ಪ್ರಕರಣ,ನಂತರ ನಜೀಬ್ ಪ್ರಕರಣ. ಇವೆರಡು ಘಟನೆಗಳು ಸರಕಾರವು ತನಗೆ ಅಡ್ಡಿಯಾಗಿದ್ದಾರೆಂದು ಭಾವಿಸಿರುವ ಜನರಲ್ಲಿ ಭೀತಿಯನ್ನು ಸೃಷ್ಟಿಸಿವೆ ಎಂದ ಫಾತಿಮಾ,‘ಆದರೆ ಯಾರೂ ಭಯ ಪಡಬೇಕಿಲ್ಲ. ಪ್ರತಿಯೊಬ್ಬರಿಗೂ ಜೆಎನ್ಯುದಲ್ಲಿ ವ್ಯಾಸಂಗ ಮಾಡುವ ಹಕ್ಕು ಇದೆ ಮತ್ತು ಈ ಜನರು (ಅಧಿಕಾರದಲ್ಲಿರುವವರು) ನಮಗೆ ಹೆದರುತ್ತಿದ್ದಾರೆ. ನಾವು ಅಲ್ಲಿಗೆ (ಜೆಎನ್ಯು) ಹೋಗುವುದನ್ನು ಅವರು ಬಯಸುವುದಿಲ್ಲ,ಹೀಗಾಗಿ ಅವರು ಇಂತಹ ಕೆಲಸಗಳನ್ನು ಮಾಡುತ್ತಾರೆ ’ಎಂದರು.

ಜೆಎನ್ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯಾ ಕುಮಾರ ಮತ್ತು ಇತರ ಇಬ್ಬರು ವಿದ್ಯಾರ್ಥಿಗಳನ್ನು ವಿವಿ ಕ್ಯಾಂಪಸ್ನಲ್ಲಿ ನಡೆದಿದ್ದ ಕಾರ್ಯಕ್ರಮವೊಂದಕ್ಕೆ ಸಂಬಂಧಿಸಿದಂತೆ ದೇಶದ್ರೋಹದ ಆರೋಪದಲ್ಲಿ 2016,ಫೆಬ್ರವರಿಯಲ್ಲಿ ಬಂಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News