ರಾಜಸ್ಥಾನ: 20 ಕೋ. ರೂ. ಲಂಚ ಹಗರಣ ವಿಚಾರಣೆಗೆ ಹಾಜರಾಗಲು ಆರೆಸ್ಸೆಸ್ ನಾಯಕ ನಿರಾಕರಣೆ

Update: 2021-08-30 16:49 GMT
Photo: Facebook/ Nimbaram 

ಜೈಪುರ, ಅ. 30: ರಾಜಸ್ಥಾನದ 20 ಕೋಟಿ ರೂಪಾಯಿಯ ಲಂಚ ಹಗರಣಕ್ಕೆ ಸಂಬಂಧಿಸಿ ತನಿಖೆಗೆ ಹಾಜರಾಗುವಂತೆ ಭ್ರಷ್ಟಾಚಾರ ನಿಗ್ರಹ ಘಟಕ (ಎಸಿಬಿ) ಜಾರಿಗೊಳಿಸಿದ ಸಮನ್ಸ್ ಗೆ ಆರೆಸ್ಸೆಸ್‌ ನ ಹಿರಿಯ ಪ್ರಚಾರಕರೊಬ್ಬರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಜೈಪುರದಲ್ಲಿ ಮನೆಮನೆಗೆ ತೆರಳಿ ತ್ಯಾಜ್ಯ ಸಂಗ್ರಹಿಸುವ ಸಂಸ್ಥೆ ಬಿವಿಜಿಗೆ ಬಾಕಿ ಇರುವ ಪಾವತಿ ಬಿಡುಗಡೆಗೊಳಿಸುವುದಕ್ಕೆ ಪ್ರತಿಯಾಗಿ ಲಂಚ ನೀಡುವ ಕುರಿತ ಮಾತುಕತೆಯಲ್ಲಿ ಆರೆಸ್ಸೆಸ್‌ ನ ಪ್ರಾದೇಶಿಕ ಮುಖ್ಯಸ್ಥ ನಿಂಬಾರಾಮ್ ಪಾಲ್ಗೊಂಡಿದ್ದಾರೆ ಎಂದು ಹೇಳಲಾದ ವೀಡಿಯೊ ತುಣುಕುಗಳು ಜೂನ್ 10ರಂದು ವೈರಲ್ ಆಗಿತ್ತು. 

ಈ ವೀಡಿಯೊಗಳಲ್ಲಿ ಒಂದರಲ್ಲಿ ಬಾಕಿ ಇರುವ 276 ಕೋಟಿ ರೂಪಾಯಿ ಬಿಲ್ ಪಾವತಿಸುವುದಕ್ಕೆ ಪ್ರತಿಯಾಗಿ ಶೇ. 10 ಕಮಿಷನ್ ನೀಡಬೇಕು ಎಂಬ ಬಗ್ಗೆ ಬಿವಿಜಿಯ ಪ್ರತಿನಿಧಿ ಓಂಕಾಂರ್ ಸಪ್ರೆಯೊಂದಿಗೆ ಜೈಪುರ ಗ್ರೇಟರ್ ಮುನ್ಸಿಪಲ್ ಕಾರ್ಪೋರೇಶನ್ ನ ಅಮಾನತುಗೊಂಡ ಮೇಯರ್ ಪತಿ ರಾಜಾರಾಮ್ ಗುರ್ಜರ್ ಹಾಗೂ ಬಿಜೆಪಿ ನಾಯಕಿ ಸೌಮ್ಯಾ ಗುಜ್ಜರ್ ಮಾತುಕತೆ ನಡೆಸುತ್ತಿರುವುದು ದಾಖಲಾಗಿದೆ. 

ಈ ವೀಡಿಯೊದ ಆಧಾರದಲ್ಲಿ ರಾಜಸ್ಥಾನದ ಭ್ರಷ್ಟಾಚಾರ ನಿಗ್ರಹ ಘಟಕ (ಎಸಿಬಿ) ನಾಲ್ವರ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಿಸಿತ್ತು. ಜೂನ್ 29ರಂದು ಅದು ಗುರ್ಜರ್ ಹಾಗೂ ಸಪ್ರೆಯನ್ನು ಬಂಧಿಸಿತ್ತು. ಆಗಸ್ಟ್ 27ರಂದು ಅವರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿತ್ತು. ಆದರೆ, ಆರ್ಎಸ್ಎಸ್ ನಾಯಕ ನಿಂಬಾರಾಮ್ ಹಾಗೂ ಇನ್ನೋರ್ವ ವ್ಯಕ್ತಿಯ ವಿರುದ್ಧದ ತನಿಖೆಯನ್ನು ಬಾಕಿ ಇರಿಸಿತ್ತು. ವಿಚಾಣೆಗೆ ಹಾಜರಾಗುವಂತೆ ನಿಂಬಾರಾಮ್ಗೆ ಎಸಿಬಿ ಎರಡು ಬಾರಿ ನೋಟಿಸು ರವಾನಿಸಿತ್ತು. ಆದರೆ, ಆವರು ಪ್ರತಿಕ್ರಿಯೆ ನೀಡಿರಲಿಲ್ಲ. ಅನಂತರ ತನಿಖಾಧಿಕಾರ ಹೊಸ ನೋಟಿಸು ರವಾನಿಸಿದ್ದಾರೆ. 

‘‘ವಿಚಾರಣೆಗೆ ಹಾಜರಾಗುವಂತೆ ನಿಂಬಾರಾಮ್ ಅವರಿಗೆ ತನಿಖಾಧಿಕಾರಿ ಎರಡು ನೋಟಿಸು ಜಾರಿ ಮಾಡಿದ್ದರು. ಆದರೆ, ಅದನ್ನು ಪೂರೈಸಲು ಸಾಧ್ಯವಾಗಲಿಲ್ಲ. ತನಿಖಾ ಸಂಸ್ಥೆ ಎರಡನೇ ಬಾರಿ ನೋಟಿಸು ಜಾರಿ ಮಾಡಿತ್ತು. ಈ ಬಾರಿ ಕೂಡ ನೋಟಿಸು ಪೂರೈಸಲು ಸಾಧ್ಯವಾಗಲಿಲ್ಲ. ಆದುದರಿಂದ ಎಸಿಬಿ ನ್ಯಾಯಾಲಯದಿಂದ ವಾರಂಟ್ ಪಡೆದುಕೊಂಡಿದೆ’’ ಎಂದು ಎಸಿಬಿಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News