ತೊಕ್ಕೊಟ್ಟು: ಕಾರಿನಲ್ಲಿ ಕೊರಗಜ್ಜನ ಭಾವಚಿತ್ರಕ್ಕೆ ಟ್ರಾಫಿಕ್ ಪೊಲೀಸ್ ಆಕ್ಷೇಪ; ಸಾರ್ವಜನಿಕರ ಆಕ್ರೋಶ

Update: 2021-08-31 09:53 GMT

ಮಂಗಳೂರು, ಆ.31: ಕಾರಿನ ನಂಬರ್ ಪ್ಲೇಟ್‌ ಬಳಿ ಕೊರಗಜ್ಜನ ಭಾವಚಿತ್ರ ಅಂಟಿಸಿದ್ದಕ್ಕೆ ಆಕ್ಷೇಪಿಸಿದ ಟ್ರಾಫಿಕ್ ಪೊಲೀಸ್‌ ಸಿಬ್ಬಂದಿಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಗರದ ಹೊರವಲಯದ ತೊಕ್ಕೊಟ್ಟು ಫ್ಲೈಓವರ್‌ ಬಳಿ ಇಂದು ನಡೆದಿದೆ.

ಇಂದು ನಗರದ ಸಂಚಾರಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ವ್ಯಕ್ತಿಯೊಬ್ಬರ ಕಾರಿನ ನೋಂದಣಿ ಸಂಖ್ಯೆಯ ಬಳಿ ಕೊರಗಜ್ಜನ ಭಾವಚಿತ್ರವಿತ್ತು. ಈ ಭಾವಚಿತ್ರವನ್ನು ತೆಗೆಯುವಂತೆ ಪೊಲೀಸ್‌ ಸಿಬ್ಬಂದಿ ಸೂಚಿಸಿದ್ದು, ಇದಕ್ಕೆ ಕಾರಿನ ಮಾಲಕ ನಿರಾಕರಿಸಿದರೆನ್ನಲಾಗಿದೆ. ಈ ಬಗ್ಗೆ ವಾಗ್ವಾದ ನಡೆದಾಗ ಸ್ಥಳದಲ್ಲಿ ಜಮಾಯಿಸಿದ ಸಾರ್ವಜನಿಕರು ಕೂಡಾ ಟ್ರಾಫಿಕ್ ಪೊಲೀಸ್‌ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಈ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರು ಪೊಲೀಸ್‌ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪರಿಣಾಮ, ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ಉಳ್ಳಾಲ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಸ್ಥಳಕ್ಕೆ ದಕ್ಷಿಣ ಸಂಚಾರಿ ಠಾಣಾ ಇನ್ ಸ್ಪೆಕ್ಟರ್ ಗುರುದತ್ ಕಾಮತ್ ಕೂಡಾ ಆಗಮಿಸಿ ಮಾತುಕತೆ ನಡೆಸಿದರು. ಕರ್ತವ್ಯದಲ್ಲಿ ಕೋಮು ಬಾವನೆ ಅನಾವರಣಗೊಳಿಸುತ್ತಿರುವ ಅಧಿಕಾರಿಗಳನ್ನ ಕರ್ತವ್ಯದಿಂದ ವಜಾಗೊಳಿಸುವಂತೆ ಪ್ರತಿಭಟನಾಕಾರರು ಇನ್ ಸ್ಪೆಕ್ಟರ್ ಗುರುದತ್ ಕಾಮತ್ ರಲ್ಲಿ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News