ನಾರದ ಪ್ರಕರಣ: ಬಂಗಾಳ ಸಚಿವರಾದ ಫಿರ್ಹಾದ್ ಹಕೀಂ, ಸುಬ್ರತಾ ಮುಖರ್ಜಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ ಈಡಿ
ಕೋಲ್ಕತಾ: ನಾರದ ಕುಟುಕು ಕಾರ್ಯಾಚರಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಈಡಿ) ಬುಧವಾರ ಪಶ್ಚಿಮಬಂಗಾಳ ಸರಕಾರದ ಸಾರಿಗೆ ಹಾಗೂ ವಸತಿ ಸಚಿವ ಫಿರ್ಹಾದ್ ಹಕೀಂ, ಪಂಚಾಯತ್ ಸಚಿವ ಸುಬ್ರತಾ ಮುಖರ್ಜಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದೆ.
ಕೋಲ್ಕತ್ತಾದ ವಿಶೇಷ ಪಿಎಂಎಲ್‌ಎ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ದೋಷಾರೋಪ ಪಟ್ಟಿಯಲ್ಲಿ ಮಾಜಿ ಸಚಿವ ಮದನ್ ಮಿತ್ರಾ, ಕೋಲ್ಕತ್ತಾದ ಮಾಜಿ ಮೇಯರ್ ಸೋವನ್ ಚಟರ್ಜಿ ಹಾಗೂ ಐಪಿಎಸ್ ಅಧಿಕಾರಿ ಎಸ್‌ಎಮ್‌ಎಚ್ ಮೀರ್ಝಾ ಅವರ ಹೆಸರೂ ಇದೆ.
ಅಕ್ರಮ ಹಣ ವರ್ಗಾವಣೆ ಆರೋಪಿಗೆ ಗರಿಷ್ಠ ಶಿಕ್ಷೆ ನೀಡುವಂತೆ ಕೇಳಿಕೊಂಡಿರುವ ಈ.ಡಿ. ಸಂಸ್ಥೆ ಆರೋಪಿಗಳು ಸ್ವೀಕರಿಸಿದ ಲಂಚದ ಹಣವನ್ನು ಮುಟ್ಟುಗೋಲು ಹಾಕಿಕೊಂಡಿದೆ.
ನಾರದ ಪ್ರಕರಣವು ಪಶ್ಚಿಮ ಬಂಗಾಳದಲ್ಲಿ ನಾರದ ನ್ಯೂಸ್ ನಡೆಸಿದ ಸರಣಿ ಕುಟುಕು ಕಾರ್ಯಾಚರಣೆಗೆ ಸಂಬಂಧಿಸಿದೆ. 12 ಟಿಎಂಸಿ ಮಂತ್ರಿಗಳು, ನಾಯಕರು ಹಾಗೂ ಐಪಿಎಸ್ ಅಧಿಕಾರಿ ಕಾಲ್ಪನಿಕ ಕಂಪನಿಯ ಪ್ರತಿನಿಧಿಗಳಿಂದ ಲಂಚ ಸ್ವೀಕರಿಸುವುದನ್ನು ಟೇಪ್‌ಗಳಲ್ಲಿ ತೋರಿಸಲಾಗಿದೆ. ನಾರದ ನ್ಯೂಸ್ ಪೋರ್ಟಲ್ ಸಿಇಒ ಮ್ಯಾಥ್ಯೂ ಸ್ಯಾಮ್ಯುಯೆಲ್ ಅವರು ನಡೆಸಿದ ಕುಟುಕು ಕಾರ್ಯಾಚರಣೆಯನ್ನು 2014 ರಲ್ಲಿ ನಡೆಸಲಾಗಿದೆ ಎಂದು ಹೇಳಲಾಗುತ್ತಿತ್ತು. ಆದರೆ ಪಶ್ಚಿಮ ಬಂಗಾಳದಲ್ಲಿ 2016 ರ ವಿಧಾನಸಭಾ ಚುನಾವಣೆಗೆ ಮುನ್ನ ವೀಡಿಯೊಗಳು ಹೊರಬಂದವು.