ಎಲ್‌ಪಿಜಿ ಬೆಲೆ ಏರಿಕೆ ಹಿಂಪಡೆಯಲು ಎನ್ ಡಿಎ ಮೈತ್ರಿಪಕ್ಷದಿಂದ ಕೇಂದ್ರಕ್ಕೆ ಒತ್ತಾಯ
ಹೊಸದಿಲ್ಲಿ: ಪೆಟ್ರೋಲಿಯಂ ಕಂಪನಿಗಳು ಎಲ್ ಪಿ ಜಿ ಸಿಲಿಂಡರ್ ಬೆಲೆಯಲ್ಲಿ ಇಂದು ಘೋಷಿಸಿರುವ ಏರಿಕೆಯನ್ನು ಕೇಂದ್ರ ಸರಕಾರ ಹಿಂಪಡೆಯಬೇಕು ಎಂದು ಬಿಜೆಪಿಯ ಎನ್ ಡಿಎ ಮೈತ್ರಿಪಕ್ಷ ಸಂಯುಕ್ತ ಜನತಾದಳ (ಜೆಡಿಯು) ಇಂದು ಒತ್ತಾಯಿಸಿದೆ.
ಪೆಟ್ರೋಲಿಯಂ ಕಂಪನಿಗಳು ಇಂದು ಸಬ್ಸಿಡಿ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (ಎಲ್ ಪಿಜಿ) ಸಿಲಿಂಡರ್ ಬೆಲೆಯನ್ನು ರೂ. 25 ಹೆಚ್ಚಿಸಿದೆ. ಇದು ಒಂದು ತಿಂಗಳಲ್ಲಿ ಎರಡನೇ ಬೆಲೆ ಏರಿಕೆಯಾಗಿದೆ. ಆಗಸ್ಟ್ 18 ರಂದು ಕೂಡ ರೂ. 25 ಹೆಚ್ಚಿಸಲಾಗಿದೆ.
"ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳಲ್ಲಿ ಅಭೂತಪೂರ್ವ ಏರಿಕೆ ಕಂಡುಬಂದಿದೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಇಂದು ಎಲ್ಲಿದೆ ಎಂದು ನೋಡಿ ... ಅಡುಗೆ ಮನೆಯ ಬಜೆಟ್ ಕೆಟ್ಟದಾಗಿ ಹೊಡೆತ ತಿಂದಿದೆ. ಇದು ತುಂಬಾ ಚಿಂತಾಜನಕವಾಗಿದೆ" ಎಂದು ಜೆಡಿಯು ಮುಖ್ಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ತ್ಯಾಗಿ NDTVಗೆ ತಿಳಿಸಿದರು.
" ಇತ್ತೀಚಿನ ಬೆಲೆಗಳ ಹೆಚ್ಚಳವನ್ನು ಹಿಂತೆಗೆದುಕೊಳ್ಳಬೇಕು ಎಂದು ಮೈತ್ರಿ ಪಕ್ಷವಾಗಿ ನಾವು ಸರಕಾರಕ್ಕೆ ಸೂಚಿಸಲು ಬಯಸುತ್ತೇವೆ. ಏಕೆಂದರೆ ಮುಂಬರುವ ತಿಂಗಳುಗಳಲ್ಲಿ ಹಲವು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಿಗದಿಯಾಗಿದೆ. ಈ ಚುನಾವಣೆಗಳಲ್ಲಿ ನಮ್ಮ ರಾಜಕೀಯ ವಿರೋಧಿಗಳು ಇದನ್ನು ನಮ್ಮ ವಿರುದ್ಧ ಅಸ್ತ್ರವಾಗಿ ಬಳಸಬಹುದು"ಎಂದು ತ್ಯಾಗಿ ಹೇಳಿದರು.
ಮುಂದಿನ ಕೆಲವು ತಿಂಗಳುಗಳಲ್ಲಿ ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ ಹಲವು ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆಯಲಿದೆ.
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಮಾರುಕಟ್ಟೆ ಕಾರ್ಯವಿಧಾನಕ್ಕೆ ಬಿಟ್ಟುಕೊಡುವುದರ ವಿರುದ್ಧ ಮಾತನಾಡಿದ ತ್ಯಾಗಿ, ಜನರ ಅನುಕೂಲಕ್ಕಾಗಿ ಅವುಗಳ ವೆಚ್ಚವನ್ನು ನಿಗ್ರಹಿಸಲು ಸರಕಾರ ಮುಂದಾಗಬೇಕು ಎಂದು ಹೇಳಿದರು.