ರೈತರ 'ತಲೆ ಒಡೆಯಲು' ಪೊಲೀಸರಿಗೆ ಸೂಚಿಸಿದ್ದ ಹರ್ಯಾಣ ಅಧಿಕಾರಿ ವರ್ಗಾವಣೆ
Update: 2021-09-01 21:53 IST
ಚಂಡೀಗಢ: ರೈತರ ಪ್ರತಿಭಟನೆಯನ್ನು ನಿಯಂತ್ರಿಸಲು ನಿಯೋಜಿಸಲಾಗಿದ್ದ ಪೊಲೀಸರಿಗೆ ರೈತರ 'ತಲೆ ಒಡೆಯಲು' ಸೂಚಿಸುತ್ತಿರುವ ವೀಡಿಯೊ ಮೂಲಕ ಇತ್ತೀಚೆಗೆ ವಿವಾದಕ್ಕೆ ಸಿಲುಕಿದ್ದ ಕರ್ನಾಲ್ ಉಪವಿಭಾಗಾಧಿಕಾರಿ ಆಯುಷ್ ಸಿನ್ಹಾ ಸೇರಿದಂತೆ 19 ಐಎಎಸ್ ಅಧಿಕಾರಿಗಳನ್ನು ಹರ್ಯಾಣ ಸರಕಾರ ವರ್ಗಾವಣೆ ಮಾಡಿದೆ.
ಸಿನ್ಹಾ ಅವರು ಈಗ ನಾಗರಿಕ ಸಂಪನ್ಮೂಲ ಮಾಹಿತಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಯಾಗಲಿದ್ದಾರೆ, ಸರಕಾರಿ ಆದೇಶದ ಪ್ರಕಾರ, ಅವರನ್ನು ಖಾಲಿ ಇರುವ ಹುದ್ದೆಗೆ ವರ್ಗಾಯಿಸಲಾಗಿದೆ.
2018 ರ ಐಎಎಸ್ ಅಧಿಕಾರಿ ಆಯುಷ್ ಸಿನ್ಹಾ ಅವರ ಪದಗಳ ಆಯ್ಕೆ ತಪ್ಪು ಎಂದು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಈ ಹಿಂದೆ ಒಪ್ಪಿಕೊಂಡಿದ್ದರು ಆದರೆ ಪೊಲೀಸ್ ಕ್ರಮವನ್ನು ಸಮರ್ಥಿಸಿಕೊಂಡಿದ್ದರು.
ಹರ್ಯಾಣ ಉಪಮುಖ್ಯಮಂತ್ರಿ ದುಷ್ಯಂತ್ ಚೌಟಾಲಾ ಅವರು ಐಎಎಸ್ ಅಧಿಕಾರಿಯ ಹೇಳಿಕೆಯನ್ನು ಒಪ್ಪಲಿಲ್ಲ ಹಾಗೂ ಅವರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು.