ಕಾಸರಗೋಡು ಜಿಲ್ಲೆಯಲ್ಲಿ ಮಕ್ಕಳು, ಯುವಕರಲ್ಲೇ ಕೋವಿಡ್ ಸೋಂಕು ಅತ್ಯಧಿಕ

Update: 2021-09-02 06:33 GMT
ಕಾಸರಗೋಡು ಜಿಲ್ಲಾಧಿಕಾರಿ ಸ್ವಾಗತ್ ಭಂಡಾರಿ 

ಕಾಸರಗೋಡು, ಸೆ.2: ಜಿಲ್ಲೆಯಲ್ಲಿ ಮಕ್ಕಳು ಹಾಗೂ ಯುವಕರು ಹೆಚ್ಚಿನ ಪ್ರಮಾಣದ ಕೊರೋನ ಸೋಂಕು ಬಾಧಿತರಾಗಿರುವುದು ಜಿಲ್ಲಾಧಿಕಾರಿ ಸ್ವಾಗತ್ ಭಂಡಾರಿ ನೇತೃತ್ವದಲ್ಲಿ ನಡೆಸಿದ ಅಧ್ಯಯನದಿಂದ ಬೆಳಕಿಗೆ ಬಂದಿದೆ.

ಈ ಅಧ್ಯಯನಕ್ಕಾಗಿ ವಿವಿಧ ವಲಯಗಳಲ್ಲಾಗಿ ವಿವಿಧ ಪ್ರಾಯದವರನ್ನು ಕೇಂದ್ರೀಕರಿಸಿ 5,055 ಮಂದಿಯ ಸ್ಯಾಂಪಲ್ ಗಳನ್ನು ತಪಾಸಣೆ ನಡೆಸಲಾಗಿದೆ. ಈ ವೇಳೆ ಶೇ.27.4 ಮಕ್ಕಳು ಮತ್ತು ಯುವಕರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ಎರಡು ವರ್ಷದ ಮಗುವಿನಿಂದ 27 ವರ್ಷ ಪ್ರಾಯದ 1,383 ಮಂದಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ.
ಅದೇರೀತಿ ಕಾರ್ಮಿಕರು, ವರ್ತಕರಲ್ಲಿ ಸೋಂಕಿನ ಪ್ರಮಾಣ ಹೆಚ್ಚಿದೆ. ಕಾರ್ಮಿಕರು ಸೇರಿದಂತೆ 1,029 ಮಂದಿಯಲ್ಲಿ (ಶೇ.20.4) ಮಂದಿಯಲ್ಲಿ ಸೋಂಕು ಗುರುತಿಸಲಾಗಿದೆ.
ಅತೀ ಹೆಚ್ಚು ಸೋಂಕಿತರಲ್ಲಿ 18- 21 ಪ್ರಾಯದ 388 ಮಂದಿ (ಶೇ.18), ಎರಡರಿಂದ 10 ವರ್ಷದೊಳಗಿನ 265 ಮಂದಿ (ಶೇ.19), 11ರಿಂದ 14 ವರ್ಷದ 303 ಮಕ್ಕಳಲ್ಲಿ (ಶೇ.22) ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
15ರಿಂದ 17 ವರ್ಷದೊಳಗಿನ 306, 22ರಿಂದ 26 ವರ್ಷದ 108 ಮಂದಿಯಲ್ಲಿ ಹಾಗೂ 27 ವರ್ಷ ಮೇಲ್ಟಟ್ಟ 13 ಮಂದಿಗೆ ಸೋಂಕು ಪತ್ತೆಯಾಗಿದೆ.
  ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ ಗುಂಪು ಸೇರುವುದು, ಕ್ರೀಡೆ - ಸಾಂಸ್ಕೃತಿಕ ಹಾಗೂ ಸಾರ್ವಜನಿಕ ಕಾರ್ಯಕ್ರಮ ಗಳಲ್ಲಿ ಪಾಲ್ಗೊಳ್ಳುತ್ತಿರುವುದು ಸೋಂಕು ಹರಡುವಿಕೆಗೆ ಕಾರಣವಾಗುತ್ತಿದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.

ಮಕ್ಕಳ ಮೂಲಕ ಸೋಂಕು ಮನೆಗಳಲ್ಲಿರುವ ಪ್ರಾಯಸ್ಥರಿಗೂ  ಹರಡಲು ಕಾರಣವಾಗುತ್ತಿದೆ. ಭೌತಿಕ ತರಗತಿಗಳ ಬದಲು ಆನ್ ಲೈನ್ ತರಗತಿಗಳು ಮಾತ್ರ ನಡೆಯುತ್ತಿದ್ದರೂ ವಿದ್ಯಾರ್ಥಿಗಳಲ್ಲಿ ಸೋಂಕು ಹರಡುತ್ತಿರುವುದು ಗಂಭೀರ ವಿಷಯವಾಗಿದೆ. ಆದ್ದರಿಂದ ಜಿಲ್ಲೆಯಲ್ಲಿ ಟ್ಯೂಷನ್ ನಡೆಸಬಾರದು. ಕೋವಿಡ್ ಮಾನದಂಡ ಪಾಲಿಸದ ಇಂತಹ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News