ಅಡುಗೆ ಅನಿಲ ಬೆಲೆ 354 ರೂ. ಇದ್ದಾಗ ಬೀದಿಗಿಳಿದವರು 900 ರೂ.ಗಳಿಗೆ ಏರಿದಾಗ ಎಲ್ಲಿದ್ದಾರೆ: ಮಮತಾ ಗಟ್ಟಿ ಪ್ರಶ್ನೆ

Update: 2021-09-02 11:36 GMT

ಮಂಗಳೂರು, ಸೆ.2: ಯುಪಿಎ ಆಡಳಿತಾವಧಿಯಲ್ಲಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ 354 ರೂ.ಗಳಿದ್ದಾಗ ಬೀದಿಗಿಳಿದು ಹೋರಾಟ ಮಾಡಿದ್ದ, ಪ್ರಸಕ್ತ ಕೇಂದ್ರ ಸಚಿವರಾಗಿರುವ ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ, ಶೋಭಾ ಕರಂದ್ಲಾಜೆಯವರು ಇದೀಗ ಗ್ಯಾಸ್ ಬೆಲೆ 900 ರೂ.ಗೆ ಏರಿಕೆಯಾಗಿದ್ದು, ತಾವು ಉನ್ನತ ಸ್ಥಾನದಲ್ಲಿದ್ದರೂ ಯಾಕೆ ಮಾತನಾಡುತ್ತಿಲ್ಲ ಎಂದು ಕಾಂಗ್ರೆಸ್‌ ಪಕ್ಷದ ಮುಖಂಡರಾದ ಮಮತಾ ಗಟ್ಟಿ ಪ್ರಶ್ನಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಅಚ್ಚೇ ದಿನ್ ತರುವುದಾಗಿ ಹೇಳಿ ಕಾಂಗ್ರೆಸ್‌ನ ದೋಷಗಳನ್ನು ಹೇಳಿ ಭಾವನಾತ್ಮಕವಾಗಿ ಜನರನ್ನು ಸೆಳೆದು ಮತ ಗಳಿಸಿ ಉನ್ನತ ಅಧಿಕಾರಕ್ಕೇರಿದ್ದರೂ ಜನರ ಪರವಾಗಿ ಧ್ವನಿ ಎತ್ತುತ್ತಿಲ್ಲ ಎಂದು ಆಕ್ಷೇಪಿಸಿದರು.

2014ರಲ್ಲಿ ಕಚ್ಚಾ ತೈಲಬೆಲೆ 112 ಡಾಲರ್ ಆಗಿದ್ದಾಗ ಡೀಸೆಲ್ ಬೆಲೆ 61 ರೂ. ಹಾಗೂ ಪೆಟ್ರೋಲ್ ಬೆಲೆ 67 ರೂ.ಗಳಾಗಿತ್ತು. 2021ರಲ್ಲಿ ಕಚ್ಚಾ ತೈಲ ಬೆಲೆ 62 ಡಾಲರ್‌ಗಳಿಗೆ ಇಳಿದಿದೆ. ಡೀಸೆಲ್ ಬೆಲೆ 94 ರೂ. ಪೆಟ್ರೋಲ್ ಬೆಲೆ 104 ರೂ.ಗಳಾಗಿವೆ. ಕಚ್ಚಾತೈಲ ಬೆಲೆ ದುಪ್ಪಟ್ಟು ಇಳಿಕೆಯಾಗಿದ್ದರೂ ಕೇಂದ್ರ ಸರಕಾರ ಸಬೂಬು ಹೇಳಿ ಜನರನ್ನು ವಂಚಿಸುತ್ತಿದೆ ಎಂದು ಮಮತಾ ಗಟ್ಟಿ ಆರೋಪಿಸಿದರು.

ಮಾಹಿತಿ ನೀಡದೆ ಗ್ಯಾಸ್ ಸಬ್ಸಿಡಿ ಸ್ಥಗಿತ!

ಹಿಂದೆ ಗ್ಯಾಸ್ ಸಬ್ಸಿಡಿ ಗ್ರಾಹಕರ ಬ್ಯಾಂಕ್ ಖಾತೆಗೆ ಜಮಾವಣೆಯಾಗುತ್ತಿದ್ದು, ಕೊರೋನ ಬಳಿಕ ಯಾವುದೇ ನೋಟಿಸ್ ನೀಡದೆ ಮಾಹಿತಿ ಇಲ್ಲದೆ ಈ ಸಬ್ಸಿಡಿಯನ್ನು ಸ್ಥಗಿತಗೊಳಿಸಲಾಗಿದೆ. ಉಜ್ವಲ್ ಯೋಜನೆಯಡಿ ಸರಕಾರ 9,707 ಕೋಟಿ ರೂ.ಗಳನ್ನು ಗ್ರಾಮೀಣ ಪ್ರದೇಶದ ಬಡವರಿಗೆ ಗ್ಯಾಸ್ ನೀಡಲು ಮೀಸಲಿಟ್ಟಿತ್ತು. ಅದರಂತೆ ಮೂರು ತಿಂಗಳು ಮಾತ್ರ  ಸಬ್ಸಿಡಿಗಳು ಫಲಾನುಭವಿಗಳಿಗೆ ದೊರಕಿದ್ದು, ಬಳಿಕ ಆ ಸಬ್ಸಿಡಿಯೂ ಸಿಗುತ್ತಿಲ್ಲ. ಕಾಂಗ್ರೆಸ್ ಸರಕಾರ ಆಡಳಿತದಲ್ಲಿದ್ದಾಗ ಸರಕಾರಕ್ಕೆ ಹೊರ ಬಿದ್ದರೂ ಅದನ್ನು ಜನರ ಮೇಲೆ ಹೇರಿಲ್ಲ. ಸಬ್ಸಿಡಿ ನಿಲ್ಲಿಸಿರಲಿಲ್ಲ. ಆದರೆ ಪ್ರಸಕ್ತ ಕೇಂದ್ರ ಸರಕಾರ ಹಿಂದಿನ ಅವಧಿಯ ಸಾಲ ತೀರಿಸಲು ಬೆಲೆ ಏರಿಕೆಯ ಸಬೂಬು ನೀಡುತ್ತಿದೆ. ಆದರೆ ಸರಕಾರ ಖಾಸಗಿ ಕಂಪೆನಿಗಳಿಗೆ ಲಾಭ ಮಾಡುವ ಹುನ್ನಾರ ಇದಾಗಿದ್ದು, ಗ್ಯಾಸ್ ಪೂರೈಕೆಯನ್ನೂ ಖಾಸಗೀಕರಣ ಹುನ್ನಾರಕ್ಕೆ ಮುಂದಾಗಿದೆ ಎಂದು ಮಮತಾ ಗಟ್ಟಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಅಪ್ಪಿ, ಸಬಿತಾ ಮಿಸ್ಕಿತ್, ಶೋಭಾ ಕೇಶವ್, ತೆರೆಸಾ, ಚಂದ್ರಕಲಾ, ಗೀತಾ ಅತ್ತಾವರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News