ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣ ಖಂಡಿಸಿ ಪ್ರತಿಭಟನೆ

Update: 2021-09-02 13:25 GMT

ಉಡುಪಿ, ಸೆ.2: ದೇಶಾದ್ಯಂತ ನಡೆಯುತ್ತಿರುವ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣ ಗಳನ್ನು ಖಂಡಿಸಿ ನ್ಯಾಷನಲ್ ವುಮೆನ್ಸ್ ಫ್ರಂಟ್ ಉಡುಪಿ ಇದರ ನೇತೃತ್ವದಲ್ಲಿ ಗುರುವಾರ ಉಡುಪಿ ಅಜ್ಜರಕಾಡು ಹುತಾತ್ಮ ಸ್ಮಾರಕದ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಅತ್ಯಾಚಾರಿಗಳು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳದಂತೆ ಕಠಿಣ ಕಾನೂನು ಕ್ರಮಗಳನ್ನು ಜರಗಿಸಬೇಕು. ಸಂತ್ರಸ್ತೆಯ ಪರವಾಗಿ ಪೊಲೀಸರು ಸ್ವಯಂ ಪ್ರೇರಿತರಾಗಿ ಕೇಸುಗಳನ್ನು ದಾಖಲಿಸಬೇಕು. ಸಂತ್ರಸ್ತೆಗೆ ಝಡ್ ಪ್ಲಸ್ ಮಾದರಿಯ ಸಂಪೂಣರ್ ಸುರಕ್ಷತೆಯನ್ನು ಒದಗಿಸಬೇಕು.

ಇದಕ್ಕೆ ಸಂಬಂಧಪಟ್ಟ ಪ್ರಕರಣವು ನ್ಯಾಯಾಲಯದಲ್ಲಿ ಇತ್ಯರ್ಥವಾಗುವ ವರೆಗೆ ರಾಜಕೀಯ ಪ್ರೇರಿತ ಅಥವಾ ಸಂಘಟನಾ ಪ್ರೇರಿತ ಯಾವುದೇ ವ್ಯಕ್ತಿಯ ಶಿಫಾರಸನ್ನು ಮಾನ್ಯ ಮಾಡಬಾರದು. ಪ್ರತಿ ಆರಕ್ಷಕ ಠಾಣೆಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ ಟಾಸ್ಕ್ ಫೋರ್ಸ್ಗನ್ನು ನೇಮಕ ಮಾಡಬೇಕು. ಪ್ರತಿ ಶಾಲಾ ಕಾಲೇಜುಗಳಲ್ಲಿ ಹೆಣ್ಣು ಮಕ್ಕಳಿಗೆ ಕಲಿಕೆಯೊಂದಿಗೆ ಸೆಲ್ಫ್ ಡಿಫೆನ್ಸ್ ಅನ್ನು ಕಡ್ಡಾಯವಾಗಿ ಹಾಗೂ ಉಚಿತವಾಗಿ ಕಲಿಸುವಂತೆ ಯೋಜನೆಯನ್ನು ಜಾರಿಗೊಳಿಸಬೇಕು. ಅಶ್ಲೀಲತೆ ಪಸರಿಸದಂತೆ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಿಗೆ ಸೆನ್ಸಾರ್ ಅಳವಡಿಸಬೇಕು. ಬ್ಲೂಫಿಲಂ ಹಾಗೂ ಮಾದಕ ದ್ರವ್ಯ ವಸ್ತುಗಳ ಮಾರಾಟ ಹಾಗೂ ಸೇವನೆಯನ್ನು ಬುಡಸಹಿತ ಕಿತ್ತೆಸೆಯಲು ಕಠಿಣ ಕಾನೂನು ಕ್ರಮಗಳನ್ನು ಇನ್ನಷ್ಟು ಬಲಗೊಳಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಶಿಕ್ಷಕಿ ಪದ್ಮಲತಾ, ಉಡುಪಿ ಜಿಲ್ಲಾ ಎನ್‌ಡಬ್ಲ್ಯೂಎಫ್ ಅಧ್ಯಕ್ಷೆ ನಸೀಂ ಝುರೈ ಮಾತನಾಡಿದರು. ನಂತರ ಉಡುಪಿ ತಹಶಿಲ್ದಾರರ ಮುಖಾಂತರ ಜಿಲ್ಲಾಧಿಕಾರಿಗೆ ಮನವಿಯನ್ನು ಸಲ್ಲಿಸಲಾಯಿತು. ನಾಝಿಯ ನ್ರುಲ್ಲಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News