×
Ad

ಮೋದಿ ಪ್ರಧಾನಿಯಾದ ಬಳಿಕ ಯಾವುದೇ ಪ್ರಮುಖ ಉಗ್ರ ದಾಳಿ ನಡೆದಿಲ್ಲ: ರಾಜ್‌ ನಾಥ್‌ ಸಿಂಗ್‌

Update: 2021-09-02 23:10 IST

ಹೊಸದಿಲ್ಲಿ,ಸೆ.2: ಪ್ರಧಾನಿ ನರೇಂದ್ರ ಮೋದಿ ಅವರು 2014ರಲ್ಲಿ ಅಧಿಕಾರಕ್ಕೇರಿದ ಬಳಿಕ ದೇಶದಲ್ಲಿ ಯಾವುದೇ ಪ್ರಮುಖ ಭಯೋತ್ಪಾದಕ ದಾಳಿ ನಡೆದಿಲ್ಲವೆಂದು ಹೇಳಿರುವ ರಕ್ಷಣಾ ಸಚಿವ ರಾಜ್‌ ನಾಥ್‌ ಸಿಂಗ್‌ , ಕೇಂದ್ರದ ಬಿಜೆಪಿ ಸರಕಾರಕ್ಕೆ ಭಯೋತ್ಪಾದಕರು ಹೆದರುತ್ತಿದ್ದಾರೆಂದು ಹೇಳಿದರು.

 
ಗುಜರಾತ್ ನ ನರ್ಮದಾ ಜಿಲ್ಲೆಯ ಕೆವಾಡಿಯಾದಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿ ಸಮಾವೇಶದಲ್ಲಿ ಗುರುವಾರ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ‘‘ಏನೇ ಬರಲಿ, ನಾವು ಭಯೋತ್ಪಾದಕರು ಸಫಲರಾಗಲು ಬಿಡಲಾರೆವು. ಮೋದಿಯ ಪ್ರಧಾನಿಯಾದ ಬಳಿಕ ಜಮ್ಮಕಾಶ್ಮೀರ ಬಿಡಿ, ದೇಶದ ಯಾವುದೇ ಭಾಗದಲ್ಲಿಯೂ ಪ್ರಮುಖ ಭಯೋತ್ಪಾದಕ ದಾಳಿ ನಡೆದಿಲ್ಲ. ಇದು ನಮ್ಮ ಮಹತ್ವದ ಸಾಧನೆಯಾಗಿದೆ. ಭಯೋತ್ಪಾದಕರು ಬಿಜೆಪಿ ಸರಕಾರಕ್ಕೆ ಹೆದರಿದ ಹಾಗೆ ಕಾಣುತ್ತಿದೆ. ಇದೇನೂ ಸಣ್ಣ ವಿಷಯವಲ್ಲ’’ ಎಂದರು.
  
ತಮ್ಮ ಸುರಕ್ಷಿತ ತಾಣಗಳಲ್ಲಿಯೂ ತಮಗೆ ಭದ್ರತೆ ಇಲ್ಲವೆಂದು ಭಯೋತ್ಪಾದಕರಿಗೆ ಮನದಟ್ಟಾಗಿದೆ. ಪಾಕ್ ಆಕ್ರಮಿತ ಕಾಶ್ಮೀರ (ಪಿಓಕೆ)ದಲ್ಲಿ ಭಾರತ ನಡೆಸಿದ ಸರ್ಜಿಕಲ್ ದಾಳಿಯ ಮೂಲಕ ನಾವು ಅಗತ್ಯಬಿದ್ದಲ್ಲಿ ಗಡಿಯನ್ನು ದಾಟಿಯೂ ಭಯೋತ್ಪಾದಕರನ್ನು ಹತ್ಯೆಗೈಯುವೆವು ಎಂಬ ಸ್ಪಷ್ಟ ಸಂದೇಶವನ್ನು ಜಗತ್ತಿಗೆ ನೀಡಿದ್ದೇವೆ ಎಂದರು.
   
ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ರಕ್ಷಣಾ ಸಚಿವರು, ಆ ಪಕ್ಷವು ಸೇನಾಯೋಧರ ಬಗ್ಗೆ ಅಸಂವೇದನೆಯನ್ನು ಹೊಂದಿದ್ದು, ಒಂದೇ ಶ್ರೇಣಿ ಸಮಾನ ಪಿಂಚಣಿ ಕುರಿತಾದ ಸಮಸ್ಯೆಯನ್ನು 40 ವರ್ಷಗಳಿಂದ ಬಗೆಹರಿಸಿರಲಿಲ್ಲ. ಆದರೆ ಅದನ್ನು ಬಿಜೆಪಿ ಪರಿಹರಿಸಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News