×
Ad

ಇನ್ನೂ ಏಳು ರಾಷ್ಟ್ರಗಳಿಂದ ಭಾರತಕ್ಕೆ ಆಗಮಿಸುವವರಿಗೆ ಆರ್ಟಿ-ಪಿಸಿಆರ್ ಪರೀಕ್ಷೆ ಕಡ್ಡಾಯ

Update: 2021-09-02 23:35 IST

ಹೊಸದಿಲ್ಲಿ,ಸೆ.2: ಚೀನಾ ಮತ್ತು ದಕ್ಷಿಣ ಆಫ್ರಿಕಾ ಸೇರಿದಂತೆ ಇನ್ನೂ ಏಳು ರಾಷ್ಟ್ರಗಳಿಂದ ಭಾರತಕ್ಕೆ ಆಗಮಿಸುವ ಪ್ರಯಾಣಿಕರು 72 ಗಂಟೆಗಿಂತ ಹಳೆಯದಲ್ಲದ ನೆಗೆಟಿವ್ ಆರ್ಟಿ-ಪಿಸಿಆರ್ ವರದಿಯನ್ನು ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿದೆ. ಹೆಚ್ಚು ಸಾಂಕ್ರಾಮಿವಾಗಿರುವ ಮತ್ತು ಲಸಿಕೆಯ ರಕ್ಷಣೆಯನ್ನು ಭೇದಿಸುವ ಲಕ್ಷಣಗಳನ್ನು ತೋರಿಸಿರುವ ಹೊಸ ಕೋವಿಡ್ ಪ್ರಭೇದ ಸಿ.1.2 ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಈ ಕ್ರಮವನ್ನು ಘೋಷಿಸಲಾಗಿದೆ.


ಇದಕ್ಕೂ ಮುನ್ನ ಈ ನಿಯಮವು ಬ್ರಿಟನ್,ಯುರೋಪ್ ಮತ್ತು ಮಧ್ಯ ಪ್ರಾಚ್ಯದಿಂದ ಆಗಮಿಸುವ ಪ್ರಯಾಣಿಕರಿಗೆ ಮಾತ್ರ ಅನ್ವಯವಾಗುತ್ತಿತ್ತು. ಗುರುವಾರ ಆಫ್ರಿಕಾ,ಬಾಂಗ್ಲಾದೇಶ,ಬೋಟ್ಸ್ವಾನಾ,ಚೀನಾ,ಮಾರಿಷಸ್, ನ್ಯೂಝಿಲ್ಯಾಂಡ್ ಮತ್ತು ಜಿಂಬಾಬ್ವೆಗಳನ್ನು ಈ ಪಟ್ಟಿಗೆ ಸೇರಿಸಲಾಗಿದೆ ಎಂದು ಆರೋಗ್ಯ ಸಚಿವಾಲಯದ ಇತ್ತೀಚಿನ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಹೊಸ ಪ್ರಭೇದವನ್ನು ಮೊದಲು ಕಳೆದ ಮೇ ತಿಂಗಳಿನಲ್ಲಿ ದ.ಆಫ್ರಿಕಾದಲ್ಲಿ ಪತ್ತೆ ಹಚ್ಚಲಾಗಿತ್ತು. 

ನಂತರ ಚೀನಾ,ಕಾಂಗೋ,ಮಾರಿಷಸ್,ಬ್ರಿಟನ್,ನ್ಯೂಝಿಲ್ಯಾಂಡ್,ಪೋರ್ಚುಗಲ್ ಮತ್ತು ಸ್ವಿಟ್ಝರ್ಲ್ಯಾಂಡ್ಗಳಲ್ಲಿಯೂ ಈ ಪ್ರಭೇದ ಪತ್ತೆಯಾಗಿದೆ.
 
ನೂತನ ಮಾರ್ಗಸೂಚಿಗಳಂತೆ ಲಕ್ಷಣರಹಿತ ಪ್ರಯಾಣಿಕರನ್ನು ಮಾತ್ರ ಭಾರತಕ್ಕೆ ವಿಮಾನಗಳನ್ನು ಹತ್ತಲು ಅವಕಾಶ ನೀಡಲಾಗುವುದು ಮತ್ತು ಭಾರತಕ್ಕೆ ಆಗಮಿಸಿದ ಬಳಿಕ ಅವರು ಮತ್ತೊಮ್ಮೆ ಆರ್ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಬೇಕಾಗುತ್ತದೆ.

ನಿಗಾಕ್ಕಾಗಿ ಅಂತರರಾಷ್ಟ್ರೀಯ ಪ್ರಯಾಣಿಕರಲ್ಲಿ ಪಾಸಿಟಿವ್ ಪ್ರಕರಣಗಳ ನಿಗದಿತ ಶೇಕಡಾವಾರು ಸ್ಯಾಂಪಲ್ಗಳನ್ನು ಕಳುಹಿಸುವಂತೆ ಸಚಿವಾಲಯವು ರಾಜ್ಯಗಳಿಗೂ ಸೂಚಿಸಿದೆ. ಇದಕ್ಕೂ ಮುನ್ನ ಹೊಸ ಪ್ರಭೇದದ ಭೀತಿಯಿಂದ ಬೃಹನ್ಮುಂಬೈ ಮಹಾನಗರ ಪಾಲಿಕೆಯು ಸೆ.3ರಿಂದ ನಗರದ ವಿಮಾನ ನಿಲ್ದಾಣಗಳಿಗೆ ಆಗಮಿಸುವ ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಆರ್ಟಿ-ಪಿಸಿಆರ್ ಪರೀಕ್ಷೆಯನ್ನು ಕಡ್ಡಾಯಗೊಳಿಸಿತ್ತು.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News