×
Ad

ಪ್ರತಿಭಟನೆ ಪ್ರಜಾಪ್ರಭುತ್ವದ ಮೂಲಭೂತ ಹಕ್ಕು: ಐವರು ಆರೋಪಿಗಳಿಗೆ ಜಾಮೀನು ನೀಡಿದ ದಿಲ್ಲಿ ಹೈಕೋರ್ಟ್

Update: 2021-09-03 23:01 IST

ಹೊಸದಿಲ್ಲಿ, ಸೆ.3: ಪ್ರತಿಭಟನೆ ಹಾಗೂ ಭಿನ್ನಮತವನ್ನು ಅಭಿವ್ಯಕ್ತಗೊಳಿಸುವುದು ಪ್ರಜಾಪ್ರಭುತ್ವದ ಮೂಲಭೂತ ಹಕ್ಕಾಗಿದೆ ಎಂದು ದಿಲ್ಲಿ ಹೈಕೋರ್ಟ್ ಶುಕ್ರವಾರ ತಿಳಿಸಿದೆ. ಪ್ರತಿಭಟನೆಯ ಹಕ್ಕನ್ನು ಚಲಾಯಿಸಿರುವುದನ್ನು ಬಂಧನಕ್ಕೆ ಕಾರಣವಾಗಿ ಬಳಸಕೂಡದು ಎಂದು ಅದು ಪ್ರತಿಪಾದಿಸಿದೆ.

ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಹೊಸದಿಲ್ಲಿಯಲ್ಲಿ ನಡೆದ ಪ್ರತಿಭಟನೆಯ ಸಂದರ್ಭ ಹೆಡ್‌ಕಾನ್ಸ್‌ಟೇಬಲ್ ರತನ್‌ಲಾಲ್ ಅವರನ್ನು ಹತ್ಯೆಗೈದ ದುಷ್ಕರ್ಮಿಗಳ ತಂಡದ ಭಾಗವಾಗಿದ್ದರೆಂದು ಆರೋಪಿಸಿ, ಕಳೆದ ವರ್ಷ ಬಂಧಿತರಾಗಿದ್ದ ಐದು ಮಂದಿಯನ್ನು ಶುಕ್ರವಾರ ಜಾಮೀನಿನಲ್ಲಿ ಬಿಡುಗಡೆಗೊಳಿಸಿದ ಸಂದರ್ಭ ದಿಲ್ಲಿ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಕಾನೂನುಬಾಹಿವಾಗಿ ಸಭೆಸೇರಿದ್ದ ಎಲ್ಲಾ ಮಂದಿಯ ವಿರುದ್ಧವೂ ಕೊಲೆ ಆರೋಪ ದಾಖಲಿಸಲು ಸಾಧ್ಯವಿಲ್ಲವೆಂದು ಅವರು ಅಭಿಪ್ರಾಯಿಸಿದರು.

ರತನ್‌ಲಾಲ್ ಹತ್ಯೆ ಪ್ರಕರಣದ ಆರೋಪಿಗಳಾದ ಫುರ್ಖಾನ್, ಆರೀಫ್, ಶದಾಬ್ ಅಬ್ಮದ್, ಸುವಾಲೀನ್ ಹಾಗೂ ತಬಸ್ಸುಮ್‌ಗೆ ಜಾಮೀನು ನೀಡಲಾಗಿದೆ. ಆರೀಫ್ ಹಾಗೂ ಸುವಾಲೀನ್ ಈಗಾಗಲೇ 17 ತಿಂಗಳುಗಳನ್ನು ಜೈಲಿನಲ್ಲಿ ಕಳೆದಿದ್ದಾರೆ.ತಬಾಸ್ಸುಮ್‌ರನ್ನು 10 ತಿಂಗಳುಗಳ ಹಿಂದೆ ಬಂಧಿಸಲಾಗಿತ್ತು.

ಆರೋಪಿಯು ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಗೆ ವಿಧಿಸಬಹುದಾದಂತಹ ಅಪರಾಧಗಳನ್ನು ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಲ್ಲಿ ಅವರಿಗೆ ಜಾಮೀನು ನೀಡುವುದನ್ನು ಕಾನೂನು ನಿರ್ಬಂಧಿಸುತ್ತದೆ ಎಂಬ ಪ್ರಾಸಿಕ್ಯೂಶನ್ ವಾದವನ್ನು ನ್ಯಾಯಮೂರ್ತಿ ಸುಬ್ರಮಣಿಯಂ ಪ್ರಸಾದ್ ತಳ್ಳಿಹಾಕಿದರು. ಜಾಮೀನು ನೀಡಬೇಕೋ ಅಥವಾ ಬೇಡವೋ ಎಂಬುದಕ್ಕೆ ಯೋಗ್ಯ ಕಾರಣವಿದೆಯೇ ಎಂಬುದನ್ನು ನಿರ್ಧರಿಸುವುದು ನ್ಯಾಯಾಲಯವಾಗಿದೆ ಎಂದು ಹೇಳಿತು.

ವಿಚಾರಣೆಯ ವಿಳಂಬದಿಂದಾಗಿ ಆರೋಪಿಯು ಕಂಬಿಗಳ ಹಿಂದೆ ಕೊಳೆಯುವುದಕ್ಕೆ ಆಸ್ಪದ ನೀಡುವುದು ಸಂವಿಧಾನದ ತತ್ವಕ್ಕೆ ವಿರುದ್ಧವಾದುದು ಎಂದು ನ್ಯಾಯಮೂರ್ತಿ ಪ್ರಸಾದ್ ಹೇಳಿದರು.

ಫುರ್ಕಾನ್‌ಗೆ ಜಾಮೀನು ನೀಡಿದ ನ್ಯಾಯಾಲಯವು ಆರೋಪಿಯು ಘಟನೆ ನಡೆದ ಸ್ಥಳದಲ್ಲಿ ಇದ್ದನೆಂಬುದಕ್ಕೆ ಯಾವುದೇ ವಿದ್ಯುನ್ಮಾನ (ಇಲೆಕ್ಟ್ರಾನಿಕ್) ಪುರಾವೆಗಳಿಲ್ಲ ಎಂದು ನ್ಯಾಯಾಲಯ ತಿಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News