ದಾಖಲೆ ಸಂಖ್ಯೆಯ ಹೈಕೋರ್ಟ್ ನ್ಯಾಯಮೂರ್ತಿಗಳ ಪಟ್ಟಿಗೆ ಕೊಲೀಜಿಯಂ ಒಪ್ಪಿಗೆ

Update: 2021-09-04 04:32 GMT
ಸುಪ್ರೀಂ ಕೋರ್ಟ್ (Photo source: PTI)

ಹೊಸದಿಲ್ಲಿ, ಸೆ.4: ದೇಶದ 12 ಹೈಕೋರ್ಟ್‌ಗಳಿಗೆ 68 ಮಂದಿಯನ್ನು ನೇಮಕ ಮಾಡುವ ಸಂಬಂಧದ ಪ್ರಸ್ತಾವವನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಮೂವರು ಸದಸ್ಯರ ಸುಪ್ರೀಂ ಕೋರ್ಟ್ ಕೊಲೀಜಿಯಂ ಒಪ್ಪಿಗೆ ನೀಡಿದೆ. ದೊಡ್ಡ ಸಂಖ್ಯೆಯ ಪ್ರಕರಣಗಳು ಬಾಕಿ ಇದ್ದರೂ, ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಗಳ ಪೈಕಿ ಶೇಕಡ 50ರಷ್ಟು ಖಾಲಿ ಇರುವುದನ್ನು ಸರಿದೂಗಿಸುವ ಪ್ರಯತ್ನವಾಗಿ ದಾಖಲೆ ಸಂಖ್ಯೆಯ ನ್ಯಾಯಮೂರ್ತಿಗಳನ್ನು ನೇಮಕ ಮಾಡಿಕೊಳ್ಳುವ ಶಿಫಾರಸು ಮಾಡಲಾಗಿದೆ.

ಸಿಜೆಐ ರಮಣ ಅವರ ಜತೆ ನ್ಯಾಯಮೂರ್ತಿಗಳಾದ ಯು.ಯು.ಲಲಿತ್ ಮತ್ತು ಎ.ಎಂ.ಖನ್ವೀಲ್ಕರ್ ಇರುವ ಕೊಲೀಜಿಯಂ, ಹಲವು ದಿನಗಳ ಕಾಲ ಚರ್ಚೆ ನಡೆಸಿದ 113 ಹೆಸರುಗಳ ಪೈಕಿ 68 ಮಂದಿಯ ಹೆಸರನ್ನು ಅಂತಿಮಪಡಿಸಿದೆ. ಅಲಹಾಬಾದ್, ರಾಜಸ್ಥಾನ, ಪಶ್ಚಿಮ ಬಂಗಾಳ, ಜಾರ್ಖಂಡ್, ಜಮ್ಮು ಮತ್ತು ಕಾಶ್ಮೀರ, ತಮಿಳುನಾಡು, ಮಧ್ಯಪ್ರದೇಶ, ಕರ್ನಾಟಕ, ಪಂಜಾಬ್ ಮತ್ತು ಹರ್ಯಾಣ, ಕೇರಳ, ಛತ್ತೀಸ್‌ಗಢ ಹಾಗೂ ಅಸ್ಸಾಂ ಹೈಕೋರ್ಟ್‌ಗಳಿಗೆ ಇವರ ನೇಮಕಕ್ಕೆ ಶಿಫಾರಸು ಮಾಡಲಾಗಿದೆ.

ಶಿಫಾರಸು ಮಾಡಿರುವ 68 ಹೆಸರುಗಳ ಪೈಕಿ 44 ಮಂದಿ ವಕೀಲರು ಮತ್ತು 24 ಮಂದಿ ಜಿಲ್ಲಾ ನ್ಯಾಯಾಲಯ ಶ್ರೇಣಿಯ ಹಿರಿಯ ನ್ಯಾಯಾಂಗ ಅಧಿಕಾರಿಗಳು. ಕೆಲ ನಿರ್ದಿಷ್ಟ ವಿಷಯಗಳ ಬಗ್ಗೆ ಮಾಹಿತಿಯನ್ನು ನಿರೀಕ್ಷಿಸಿ 16 ಹೆಸರುಗಳ ಪರಿಗಣನೆಯನ್ನು ಮುಂದೂಡಲಾಗಿದೆ. ಉಳಿದ ಹೆಸರುಗಳನ್ನು ಮರು ಪರಿಗಣನೆಗಾಗಿ ಹೈಕೋರ್ಟ್ ಕೊಲೀಜಿಯಂಗಳಿಗೆ ವಾಪಸ್ ಮಡಲಾಗಿದೆ.

ಹೈಕೋರ್ಟ್‌ಗಳಲ್ಲಿ ಸುಮಾರು 60 ಲಕ್ಷ ಪ್ರಕರಣಗಳು ಬಾಕಿ ಇದ್ದು, 1089 ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಗಳ ಪೈಕಿ 465 ಖಾಲಿ ಇವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News