ನಾಲ್ಕನೇ ಟೆಸ್ಟ್: ರೋಹಿತ್ ಶರ್ಮಾ 8ನೇ ಶತಕ,171 ರನ್ ಮುನ್ನಡೆಯಲ್ಲಿ ಭಾರತ

Update: 2021-09-04 17:22 GMT

ಲಂಡನ್: ಆರಂಭಿಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ(127) ಶತಕ ಹಾಗೂ ಚೇತೇಶ್ವರ ಪೂಜಾರ(61) ಅರ್ಧಶತಕದ ಕೊಡುಗೆಯ ನೆರವಿನಿಂದ  ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ದದ ನಾಲ್ಕನೇ ಟೆಸ್ಟ್ ನ 3ನೇ ದಿನವಾದ ಶನಿವಾರ ಭಾರತವು ಒಟ್ಟು 171 ರನ್  ಮುನ್ನಡೆಯಲ್ಲಿದ್ದು ಕಠಿಣ ಸವಾಲು ನೀಡುವ ವಿಶ್ವಾಸದಲ್ಲಿದೆ.

ಭಾರತವು 3ನೇ ದಿನದಾಟದಂತ್ಯಕ್ಕೆ 92 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 270 ರನ್ ಗಳಿಸಿದೆ. ನಾಯಕ ವಿರಾಟ್ ಕೊಹ್ಲಿ(22) ಹಾಗೂ ರವೀಂದ್ರ ಜಡೇಜ(9) ಕ್ರೀಸ್ ಕಾಯ್ದುಕೊಂಡಿದ್ದಾರೆ.

ಮುಂಬೈ ಬ್ಯಾಟ್ಸ್ ಮನ್ ರೋಹಿತ್ ಸ್ಪಿನ್ನರ್ ಮೊಯಿನ್ ಅಲಿ ಬೌಲಿಂಗ್ ನಲ್ಲಿ ಸಿಕ್ಸರ್ ಸಿಡಿಸುವ ಮೂಲಕ 204 ಎಸೆತಗಳಲ್ಲಿ(12 ಬೌಂಡರಿ, 1 ಸಿಕ್ಸರ್ )8ನೇ ಶತಕವನ್ನು ಪೂರೈಸಿದರು. ಚೇತೇಶ್ವರ ಪೂಜಾರ ಅವರೊಂದಿಗೆ 2ನೇ ವಿಕೆಟ್ ಗೆ 153 ರನ್ ಜೊತೆಯಾಟ ನಡೆಸಿ ತಂಡಕ್ಕೆ ಮುನ್ನಡೆ ಒದಗಿಸಲು ಶ್ರಮಿಸಿದರು.

ರಾಬಿನ್ಸನ್ ಗೆ ವಿಕೆಟ್ ಒಪ್ಪಿಸುವ ಮೊದಲು ರೋಹಿತ್ 256 ಎಸೆತಗಳಲ್ಲಿ 14 ಬೌಂಡರಿ, 1 ಸಿಕ್ಸರ್ ಸಹಿತ 127 ರನ್ ಗಳಿಸಿದರು. ಪೂಜಾರ 61 ರನ್(127 ಎಸೆತ) ಗಳಿಸಿ ಔಟಾದರು.

ಇದೇ ವೇಳೆ ರೋಹಿತ್ ತಾನಾಡಿದ 43ನೇ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ 3,000 ರನ್ ಪೂರೈಸಿದರು.

ಶನಿವಾರ ವಿಕೆಟ್ ನಷ್ಟವಿಲ್ಲದೆ 43 ರನ್ ನಿಂದ 2ನೇ ಇನಿಂಗ್ಸ್ ಮುಂದುವರಿಸಿದ ಭಾರತಕ್ಕೆ ರೋಹಿತ್ ಹಾಗೂ ಕೆಎಲ್ ರಾಹುಲ್ ಮೊದಲ ವಿಕೆಟ್ ಗೆ 83 ರನ್ ಸೇರಿಸಿ ಭದ್ರ ಬುನಾದಿ ಹಾಕಿಕೊಟ್ಟರು. ರಾಹುಲ್ 46 ರನ್(101 ಎಸೆತ)ಗಳಿಸಿ ಆ್ಯಂಡರ್ಸನ್ ಗೆ ವಿಕೆಟ್ ಒಪ್ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News