ನೆಲ್ಯಾಡಿ : ಲಾರಿ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Update: 2021-09-06 13:55 GMT

ಬೆಳ್ತಂಗಡಿ : ಡಾರ್ಕ್ ರೈಡರ್ಸ್ ಹೆಸರಿನಲ್ಲಿ ಪುತ್ತೂರಿನಿಂದ  ಸಕಲೇಶಪುರ ಕಡೆಗೆ ಹೊರಟಿದ್ದ ಬೈಕ್ ರೈಡರ್ಸ್ ತಂಡದ ಬೈಕೊಂದು ಬೆಳ್ತಂಗಡಿ ತಾಲೂಕಿನ ರೆಖ್ಯ ಸಮೀಪ ಅಪಘಾತಕ್ಕೆ ಈಡಾಗಿದ್ದು ಓರ್ವ ಮೃತಪಟ್ಟು ಮೂವರು ಗಾಯಗೊಂಡ ಘಟನೆ ಸೋಮವಾರ ಸಂಭವಿಸಿದೆ.

ಮೃತ ವ್ಯಕ್ತಿ ಪುತ್ತೂರು ತಾಲೂಕು ಅರಿಯಡ್ಕ ಸಿಆರ್ ಸಿ ಕಾಲನಿಯ  ನಿವಾಸಿ ಮನೋಜ್ (20)ಎಂದು ಗುರುತಿಸಲಾಗಿದೆ. ಇದೇ ತಂಡದ ಸದಸ್ಯರಾದ ಯೋಗೀಶ್, ಚೇತನ್ ಹಾಗೂ ಸಚಿನ್ ಎಂಬವರು ಗಾಯಗೊಂಡಿದ್ದಾರೆ.

ಬೆಳಗ್ಗೆ ಕುಂಬ್ರದಿಂದ ಹೊರಟ ರೈಡರ್ಸ್ ತಂಡ ಎಂಜಿರಕ್ಕೆ ಬರುತ್ತಿದ್ದ ವೇಳೆ ಮನೋಜ್ ಚಲಾಯಿಸುತ್ತಿದ್ದ ಬೈಕಿಗೆ ಕಟೈನರ್ ಲಾರಿ ಢಿಕ್ಕಿ ಹೊಡೆದಿದೆ. ಹೊಡೆತದ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ಮನೋಜ್ ಮೇಲೆಯೇ ಲಾರಿಯ ಚಕ್ರಗಳು ಸಾಗಿದ್ದು ಆತ ಸ್ಥಳದಲ್ಲಿಯ ಮೃತಪಟ್ಟಿದ್ದಾರೆ. ಅವರ ಸಹಪ್ರಯಾಣಿಕ ಯೋಗೀಶ್ ಗಂಭೀರವಾಗಿ ಗಾಯಗೊಂಡಿದ್ದಾರೆ.

ಬೈಕ್ ಸ್ಕಿಡ್ ಆಗಿ ಬಿದ್ದು ಇಬ್ಬರಿಗೆ ಗಾಯ; ಎಂಜಿರದಲ್ಲಿ ಅಪಘಾತ ನಡೆದ ಬಗ್ಗೆ ಮುಂದೆ ಹೋಗಿದ್ದ ಇದೇ ತಂಡದವರಿಗೆ ಮಾಹಿತಿ ಲಭಿಸಿದ್ದು ಅವರು ಹಿಂತಿರುಗಿ ಘಟನಾ ಸ್ಥಳಕ್ಕೆ ಬರುತ್ತಿದ್ದ ವೇಳೆ ಚೇತನ್ ಎಂಬವರು ಚಲಾಯಿಸುತ್ತಿದ್ದ ಬೈಕ್ ಸ್ಕಿಡ್ ಆಗಿ ಮಗುಚಿ ಬಿದ್ದಿದೆ. ಅಪಘಾತದಲ್ಲಿ ಚೇತನ್ ಗಂಭೀರವಾಗಿ ಗಾಯಗೊಂಡಿದ್ದು ಸಹ ಸವಾರ ಸಚಿನ್ ಗೂ ಗಾಯಗಳಾಗಿದೆ. ಮೂವರು ಗಾಯಾಳುಗಳನ್ನೂ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ಬಗ್ಗೆ ಮಾಹಿತಿ ತಿಳಿದು ಕೂಡಲೇ ಧರ್ಮಸ್ಥಳ ಪೊಲೀಸರು ಹಾಗೂ ಬೆಳ್ತಂಗಡಿ ಟ್ರಾಫಿಕ್ ಪೋಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೆಳಗ್ಗೆ ಉದ್ಘಾಟನೆ ಮಧ್ಯಾಹ್ನ ಅಪಘಾತ; ಕುಂಬ್ರ ಪಬ್ಲಿಕ್ ಸ್ಕೂಲ್ ನಲ್ಲಿ ಡಾರ್ಕ್ ರೈಡರ್ಸ್ ತಂಡದ ಉದ್ಘಾಟನೆ ಸೋಮವಾರ ಬೆಳಿಗ್ಗೆ ನಡೆದಿತ್ತು. ತಂಡದಲ್ಲಿ ಹತ್ತು ಬೈಕ್ ಗಳಿದ್ದು 15ಕ್ಕೂ ಹೆಚ್ಚು ಜನ ಸವಾರರಿದ್ದರು. ಎಲ್ಲರೂ ಸೇರಿ ತಂಡ ಕಟ್ಟಿಕೊಂಡು ಇವರು ಕುಂಬ್ರದಿಂದ ಶಿರಸಿಯ ಹೊಸಹಳ್ಳಗುಡ್ಡಕ್ಕೆಂದು ಪ್ರವಾಸ ಹೊರಟಿದ್ದರು ಎನ್ನಲಾಗಿದೆ. ಆದರೆ ತಾಲೂಕಿನ ಗಡಿದಾಟುವ ಮೊದಲೆ ಭೀಕರ ಅಪಘಾತ ಓರ್ವನನ್ನು ಬಲಿಪಡೆದುಕೊ‌ಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News