ಮಹಿಳೆಯರಿಗೆ ಕಾನೂನಿನ ಅರಿವು ಮೂಡಿಸುವ ಅಗತ್ಯವಿದೆ: ನ್ಯಾ. ಪೃಥ್ವೀರಾಜ್ ವರ್ಣೆಕರ್

Update: 2021-09-06 12:17 GMT

ಗುರುಪುರ, ಸೆ.6 : ಅತ್ಯಾಚಾರ, ದೌರ್ಜನ್ಯ, ವರದಕ್ಷಿಣೆ, ಪೊಕ್ಸೊ, ಮನೆ ದರೋಡೆ ಮತ್ತಿತರ ಮಹಿಳೆಯರ ಮೇಲಿನ ಪ್ರಕರಣಗಳಲ್ಲಿ ದೂರು ದಾರರು ಸೂಕ್ತ ಸಾಕ್ಷ್ಯಿ ಒದಗಿಸಿದಲ್ಲಿ ಸಂತ್ರಸ್ತರಿಗೆ 5ರಿಂದ 10 ಲಕ್ಷ ರೂ. ಪರಿಹಾರ ಲಭಿಸುತ್ತದೆ. ರಾಜ್ಯ ಸರಕಾರ ಜಾರಿಗೊಳಿಸಿರುವ ಈ ಕಾನೂನಿನ ಕುರಿತು ಅಂಗನವಾಡಿ ಕಾರ್ಯಕರ್ತೆಯರು ಗ್ರಾಮೀಣ ಮಹಿಳೆಯರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದು ಮಂಗಳೂರಿನ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ನ್ಯಾ. ಪೃಥ್ವೀರಾಜ್ ವರ್ಣೆಕರ್ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ದ.ಕ,, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ದ.ಕ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ ಹಾಗೂ ಗುರುಪುರ ಗ್ರಾಪಂ ಜಂಟಿ ಆಶ್ರಯದಲ್ಲಿ ಸೋಮವಾರ ಗ್ರಾಪಂ ಸಭಾಭವನದಲ್ಲಿ ಆಯೋಜಿಸಲಾದ ಪೌಷ್ಠಿಕ ಆಹಾರ ದಿನಾಚರಣೆ ಮತ್ತು ಪೋಷಣ್ ಮಾಸಾಚರಣೆ, ಮಾತೃ ವಂದನಾ ಸಪ್ತಾಹ ಮತ್ತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಕೋವಿಡ್ ಕಷ್ಟ-ಕಾರ್ಪಣ್ಯದ ದಿನಗಳಲ್ಲಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಸೇವೆ ಶ್ಲಾಘಿಸಿ ಅವರು ಮಾತನಾಡಿದರು.

ಗ್ರಾಪಂ ಅಧ್ಯಕ್ಷ ಯಶವಂತ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಪಂ ಸದಸ್ಯೆ ಸಫರಾ ಮಾತನಾಡಿ ಅತ್ಯಾಚಾರ, ವರದಕ್ಷಿಣೆ ಅಥವಾ ಮಹಿಳೆಯರ ವಿರುದ್ಧದ ಇನ್ನಿತರ ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ತೆಗೆ ಪರಿಹಾರ ನೀಡಿದರೆ ಸಾಲದು, ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ಈ ನಿಟ್ಟಿನಲ್ಲಿ ಸೂಕ್ತ ಕಾನೂನು ರೂಪಿಸುವ ಅಗತ್ಯವಿದೆ ಎಂದು ಆಗ್ರಹಿಸಿದರು.

ಸಭೆಯಲ್ಲಿ ಉಪಾಧ್ಯಕ್ಷೆ ದಿಲ್‌ಶಾದ್ ಎ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ ವಲಯ ಮೇಲ್ವೀಚಾರಕಿ ಶೈಲಾ ಕೆ ಕಾರಗಿ, ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು. ಅಂಗನವಾಡಿ ಮೇಲ್ವಿಚಾರಕಿ ಚಂಚಲಾಕ್ಷಿ ವಂದಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಮಾಲಿನಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News