ಉಪ್ಪಿನಂಗಡಿ: ಲೈಂಗಿಕ ದೌರ್ಜನ್ಯ ಖಂಡಿಸಿ ಪ್ರತಿಭಟನೆ

Update: 2021-09-07 17:08 GMT

ಉಪ್ಪಿನಂಗಡಿ: ಮಹಿಳೆ ಮತ್ತು ಹೆಣ್ಣು ಮಕ್ಕಳ ಪಾಲಿಗೆ ಭಾರತವು ಹೆಚ್ಚು ಅಪಾಯಕಾರಿ ಹಾಗೂ ಅಸುರಕ್ಷಿತ ತಾಣವಾಗಿ ಬದಲಾಗುತ್ತಿದ್ದು, ಅದರಲ್ಲೂ ಉತ್ತರ ಭಾರತ, ದೆಹಲಿ ಮತ್ತು ಕರ್ನಾಟಕ ಮೊದಲಾದ ರಾಜ್ಯಗಳಲ್ಲಿ ಅತ್ಯಾಚಾರಿಗಳು ರಾಜಾರೋಷವಾಗಿ ಎಗ್ಗಿಲ್ಲದೆ ಲೈಂಗಿಕ ದೌರ್ಜನ್ಯಗಳನ್ನು ನಡೆಸುತ್ತಿದ್ದಾರೆ. ಇದರಿಂದ ಸಂತ್ರಸ್ಥರಾದವರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿ ನ್ಯಾಷನಲ್ ವಿಮೆನ್ಸ್ ಫ್ರಂಟ್ ಉಪ್ಪಿನಂಗಡಿ ವಲಯ ಘಟಕದ ವತಿಯಿಂದ  ಉಪ್ಪಿನಂಗಡಿಯಲ್ಲಿ ಪ್ರತಿಭಟನೆ ನಡೆಯಿತು.

ಉಪ್ಪಿನಂಗಡಿ ನಾಡ ಕಚೇರಿ ಮುಂದೆ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕ್ಯಾಂಫಸ್ ಫ್ರಂಟ್ ಜಿಲ್ಲಾ ಸಮಿತಿ ಸದಸ್ಯೆ ಅಸ್ರೀನಾ ಬಂಟ್ವಾಳ , ಮಹಿಳೆ ಮತ್ತು ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಲೇ ಇದೆ, ಈಚೆಗೆ ಮೈಸೂರಿನಲ್ಲಿ ನಡೆದ ವೈದ್ಯಕೀಯ ವಿದ್ಯಾರ್ಥಿನಿಯ ಸಾಮಾಹಿಕ ಅತ್ಯಾಚಾರ, ಕೆಲ ದಿನಗಳ ಹಿಂದೆ ದೆಹಲಿಯಲ್ಲಿ ನಡೆದ ಪೊಲೀಸ್ ಅಧಿಕಾರಿಣಿ ಅತ್ಯಾಚಾರ, ಕೊಲೆ ಪ್ರಕರಣಗಳು ಜ್ವಲಂತ ಉದಾಹರಣೆಯಾಗಿದೆ. ಇದಕ್ಕೆ ಮುಖ್ಯ ಕಾರಣ ಕೃತ್ಯದ ಆರೋಪಿಗಳನ್ನು ಬೆಂಬಲಿಸುವಂತಹ ಭ್ರಷ್ಟಾಚಾರಿ ರಾಜಕೀಯ ವ್ಯವಸ್ಥೆಯಿಂದಾಗಿ ಮತ್ತು ಕಾನೂನುಗಳು ದುರ್ಬಲಗೊಂಡಿರುವುದು. ಅಷ್ಟೇ ಅಲ್ಲದೆ ಕಾನೂನು ರಕ್ಷಿಸುವ ಪೊಲೀಸರು ಕೂಡಾ ಅವರ ಕೈಗೊಂಬೆಗಳಾಗುತ್ತಿದ್ದಾರೆ. ಇದರಿಂದಾಗಿ ನ್ಯಾಯ ಮರೀಚಿಕೆಯಾಗಿದ್ದು, ಇದು  ಖಂಡನೀಯವಾಗಿದ್ದು, ಈ ನಿಟ್ಟಿನಲ್ಲಿ ಇನ್ನಾದರೂ ಸರ್ಕಾರ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಸಂತ್ರಸ್ಥರಿಗೆ ನ್ಯಾಯ ಒದಗಿಸಿಕೊಡಬೇಕು ಎಂದರು.

ಬೇಡಿಕೆ, ಮನವಿ ಸಲ್ಲಿಕೆ:

ಮಹಿಳೆ ಮತ್ತು ವಿದ್ಯಾರ್ಥಿನಿಯರು ಸುರಕ್ಷತೆ ಹಾಗೂ ಭದ್ರತೆಯ ಬಗ್ಗೆ ಆತಂಕಕ್ಕೊಳಗಾಗಿದ್ದು, ಕರ್ನಾಟಕ ಸರಕಾರ ಹಾಗೂ ಪ್ರಕರಣಕ್ಕೆ ಸಂಬಂಧಪಟ್ಟ ಇಲಾಖೆಗಳಿಗೆ, ಅತ್ಯಾಚಾರಿಗಳಿಗೆ ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳದಂತೆ ಕಠಿಣ ಕಾನೂನು ಕ್ರಮಗಳನ್ನು ಜರಗಿಸುವುದು, ಸಂತ್ರಸ್ಥೆಯ ಪರವಾಗಿ ಪೊಲೀಸರು ಸ್ವಯಂ ಪ್ರೇರಿತರಾಗಿ ಕೇಸುಗಳನ್ನು ದಾಖಲಿಸುವುದು ಹಾಗೂ ಸಂತ್ರಸ್ಥೆಗೆ ಝಡ್ ಪ್ಲಸ್ ಮಾದರಿಯ ಸಂಪೂರ್ಣ ಸುರಕ್ಷತೆಯನ್ನು ಒದಗಿಸುವುದು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಸರಕಾರವನ್ನು ಆಗ್ರಹಿಸಿ ಉಪ್ಪಿನಂಗಡಿ ನಾಡ ಕಚೇರಿ ಉಪತಹಸೀಲ್ದಾರ್ ಚೆನ್ನಪ್ಪ ಗೌಡರವರ ಮೂಲಕ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸದಸ್ಯರಾದ ನೆಬಿಸ, ಸೌದ, ಕೊಯಿಲ ಗ್ರಾಮ ಪಂಚಾಯತ್ ಸದಸ್ಯೆ ಸಫೀಯ, ನ್ಯಾಷನಲ್ ವುಮೆನ್ಸ್ ಫ್ರಂಟ್, ಕ್ಯಾಂಫಸ್ ಫ್ರಂಟ್ ಸದಸ್ಯರಾದ ಝರಿನಾ ಇಕ್ಬಾಲ್, ಸಾಜಿರಾ ಹಬೀಬ್, ಮೆಹರುನ್ನೀಸ, ಮಿಶ್ರಿಯಾ ಮತ್ತಿತರರು ಉಪಸ್ಥಿತರಿದ್ದರು. 

ನ್ಯಾಷನಲ್ ವಿಮೆನ್ಸ್ ಫ್ರಂಟ್ ಉಪ್ಪಿನಂಗಡಿ ವಲಯ ಘಟಕದ ಅಧ್ಯಕ್ಷೆ ಮಮ್ತಾಜ್ ಇಕ್ಬಾಲ್ ಸ್ವಾಗತಿಸಿದರು. ಸಾಜಿರಾ ನೆಲ್ಯಾಡಿ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News