ಮರಳು ದಂಧೆಯ ಕರಾಳತೆಗೆ ಫಲ್ಗುಣಿ ನದಿ ತೀರದ ರಸ್ತೆ ಬಿರುಕು

Update: 2021-09-08 11:33 GMT

► ‘ನಮ್ಮ ವ್ಯಾಪ್ತಿಗೆ ಬರಲ್ಲ’ ಎನ್ನುವ ಇಲಾಖೆಗಳು!

ಮಂಗಳೂರು, ಸೆ.7: ದ.ಕ. ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆಯ ಹಾವಳಿಯಿಂದ ಪ್ರಕೃತಿಗೆ ನಿರಂತರವಾಗಿ ಘಾಸಿಯಾಗುತ್ತಿದೆ. ಇದರಿಂದ ರಸ್ತೆ, ಮನೆ, ಜನಜೀವನ ಅಸ್ತವ್ಯಸ್ತಗೊಂಡಿದೆ. ಮರಳುಗಾರಿಕೆಯಿಂದ ಫಲ್ಗುಣಿ ನದಿಯಂಚಿನ ರಸ್ತೆಗಳಲ್ಲಿ ಆಳ ಬಿರುಕು ಮೂಡಿದ್ದು, ಸ್ಥಳೀಯರಲ್ಲಿ ಭೀತಿ ಸೃಷ್ಟಿಯಾಗಿದೆ.

ಫಲ್ಗುಣಿ ನದಿಯು ಪಶ್ಚಿಮ ಘಟ್ಟಗಳಲ್ಲಿ ಹುಟ್ಟಿ, ಪಶ್ಚಿಮಾಭಿ ಮುಖವಾಗಿ ಹರಿದು ಮಂಗಳೂರು ಸಮೀಪದ ಬೆಂಗರೆ ಬಳಿ ಅರಬಿ ಸಮುದ್ರವನ್ನು ಸೇರುತ್ತದೆ. ನದಿ ತೀರದ ಉದ್ದಕ್ಕೂ ಮರಳು ದಂಧೆ ವ್ಯಾಪಿಸಿದೆ. ಇದೇರೀತಿ ಬಂಗ್ರಕೂಳೂರಿನಲ್ಲಿ ಹಗಲು-ರಾತ್ರಿಯೆನ್ನದೇ ನಿರಂತರವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂಬುದು ಸಾರ್ವಜನಿಕರ ಆರೋಪ.

ಅಕ್ರಮ ಮರಳುಗಾರಿಕೆ ಸಮಸ್ಯೆ ಪರಿಹರಿಸುವಂತೆ ಇಲಾಖೆಗಳ ಕಚೇರಿ ಕಚೇರಿಯ ಬಾಗಿಲಿಗೆ ಅಲೆದರೂ ಪ್ರಯೋಜನವಾಗುತ್ತಿಲ್ಲ. ಗಣಿ ಮತ್ತು ಭೂ ವಿಜ್ಞಾನ, ಕಂದಾಯ, ಪೊಲೀಸ್ ಇಲಾಖೆಗಳು ‘ನಮ್ಮ ವ್ಯಾಪ್ತಿಗೆ ಬರುವುದಿಲ್ಲ’ ಎಂದು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾರೆ ಎಂಬುದು ಸ್ಥಳೀಯರ ಅಳಲು.

ರಸ್ತೆಗಳಲ್ಲಿ ಬಿರುಕು: ಫಲ್ಗುಣಿ ನದಿ ತೀರದ ಬಂಗ್ರಕೂಳೂರು ಭಾಗದಲ್ಲಿ 60ಕ್ಕೂ ಅಧಿಕ ಕುಟುಂಬಗಳು ನೆಲೆಸಿವೆ. ಮಂಗಳೂರು ಕಡೆಯಿಂದ ಬಂಗ್ರಕೂಳೂರಿಗೆ ತಲುಪುವ ರಸ್ತೆಯ ಕೂಗಳತೆ ದೂರವರೆಗೆ ಮಾತ್ರ ಸಿಮೆಂಟ್ ಕಾಂಕ್ರಿಟ್ ರಸ್ತೆ ಇದ್ದು, ಇನ್ನುಳಿದ ಭಾಗ ಕಚ್ಚಾ ರಸ್ತೆಯಾಗಿದೆ. ಕಾಂಕ್ರಿಟ್ ರಸ್ತೆಯನ್ನು ಕಳೆದ ಒಂದೂ ವರೆ ವರ್ಷದ ಹಿಂದೆ ನಿರ್ಮಿಸಲಾಗಿತ್ತು. ಆದರೆ ಇದೀಗ ಸುಮಾರು 100 ಮೀಟರ್‌ಗೂ ಹೆಚ್ಚು ದೂರದವರೆಗೆ ಅರ್ಧ ಅಡಿಯಷ್ಟು ಆಳದಲ್ಲಿ ರಸ್ತೆ ಬಿರುಕು ಬಿಟ್ಟಿದೆ. ಇದಕ್ಕೆ ಮರಳುಗಾರಿಕೆಯೇ ಕಾರಣವೆಂದು ಆಪಾದಿಸುತ್ತಾರೆ ಸ್ಥಳೀಯರು.

ಸ್ಥಳೀಯರ ಹಣದಲ್ಲೇ ರಸ್ತೆ ನಿರ್ಮಾಣ: ಸುಮಾರು 20 ವರ್ಷಗಳಿಂದ ಬಂಗ್ರಕೂಳೂರಿನ ಕಚ್ಛಾ ರಸ್ತೆ ಇದ್ದು, ಸ್ಥಳೀಯ ನಿವಾಸಿಗಳೇ ಹಣ ಸಂಗ್ರಹಿಸಿ ರಸ್ತೆ ನಿರ್ಮಿಸಿದ್ದರು. ಇದು ಇನ್ನೂ ಸದೃಢವಾಗಿದೆ. ಆದರೆ ಇದೇ ರಸ್ತೆಯ ಕೆಲ ಭಾಗವನ್ನು ಜನಪ್ರತಿನಿಧಿಗಳು ಕಳೆದ ಒಂದೂವರೆ ವರ್ಷದ ಹಿಂದೆ ನಿರ್ಮಿಸಿದ್ದರು. ಮರಳುಗಾರಿಕೆ ಕಾರಣ ಈ ಕಾಂಕ್ರಿಟ್ ರಸ್ತೆಯ ಮಧ್ಯಭಾಗದಲ್ಲಿ ಬಿರುಕುಬಿಟ್ಟಿದೆ. ರಸ್ತೆಯು ನದಿಯತ್ತ ವಾಲಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಮ್ಯಾಕ್ಸಿ ಡಿಸೋಜ.

ಫಲ್ಗುಣಿ ನದಿ ಅಂಚಿನಲಿ ನಿರಂತರ ಮರಳುಗಾರಿಕೆ ಮಾಡುವು ದರಿಂದ ರಸ್ತೆಯ ಇಕ್ಕೆಲದ ಮಣ್ಣು ನದಿಯ ಆಳಕ್ಕೆ ಸೇರುತ್ತಿದೆ. ಇದು ರಸ್ತೆಯ ಮಧ್ಯದಲ್ಲೇ ಬಿರುಕು ಮೂಡಲು ಕಾರಣವಾಗಿದೆ. ಈ ಭಾಗದಲ್ಲಿ ಮರಳುಗಾರಿಕೆಗೆ ಕಡಿವಾಣ ಹಾಕದಿದ್ದಲ್ಲಿ ಇಲ್ಲಿನ ರಸ್ತೆ, ಮನೆಗಳು, ಕುಟುಂಬಗಳು ಸಂಕಷ್ಟಕ್ಕೆ ಸಿಲುಕುವ ಭೀತಿ ಕಾಡುತ್ತಿದೆ ಎಂದವರು ಆತಂಕ ವ್ಯಕ್ತಪಡಿಸಿದ್ದಾರೆ.

ಅವೈಜ್ಞಾನಿಕ ಮರಳುಗಾರಿಕೆ ಅಕ್ಷಮ್ಯ: ನದಿಯಲ್ಲಿ ಮರಳುಗಾರಿಕೆ ನಡೆಸುತ್ತಾರೆ ಎಂದು ಅಧಿಕಾರಿಗಳು, ಜನಪ್ರತಿನಿಧಿಗಳು ಹೇಳು ತ್ತಾರೆ. ಇದಕ್ಕೆ ತಮ್ಮದೇನೂ ವಿರೋಧವಿಲ್ಲ. ಆದರೆ ರಸ್ತೆಯ ಪಕ್ಕ ದಲ್ಲೇ ಮರಳುಗಾರಿಕೆಗೆ ಅವಕಾಶ ನೀಡಬಾರದು ಎನ್ನುತ್ತಾರೆ ಸ್ಥಳೀಯರು. ನದಿಯ ಆಳದಲ್ಲಿ ಸುಮಾರು 40ರಿಂದ 50 ಅಡಿಗಳವರೆಗೆ ಅವೈಜ್ಞಾನಿಕವಾಗಿ ಬೃಹತ್ ಬೋಟುಗಳಲ್ಲಿ ಮರಳು ತೆಗೆಯಲಾಗುತ್ತಿದೆ. ಇದರಿಂದ ನದಿಯ ಬದಿಯಲ್ಲಿನ ರಸ್ತೆ ಸಮೀಪದ ಮರಳು ಈಗಾಗಲೇ ಮರಳು ತೆಗೆಯಲ್ಪಟ್ಟ ಜಾಗಕ್ಕೆ ಜಾರಿ ಹೋಗುತ್ತದೆ. ಇದರ ಪರಿಣಾಮ ರಸ್ತೆಯ ಇಕ್ಕೆಲದಲ್ಲಿ ಅಳವಡಿಸಲಾದ ಕಲ್ಲುಗಳು ಕುಸಿದಿವೆ. ಅಲ್ಲದೆ, ಕಾಂಕ್ರಿಟ್ ರಸ್ತೆಯ ಬಿರುಕುಬಿಡಲೂ ಇದು ಕಾರಣ ಎನ್ನುತ್ತಾರೆ ಸ್ಥಳೀಯರು.

ಜನವಸತಿ ಪ್ರದೇಶದಲ್ಲಿ ಮರಳು ಗಣಿಗಾರಿಕೆ ನಡೆಸುತ್ತಿರುವುದರ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಸೊಲ್ಲೆತ್ತುವುದಿಲ್ಲ. ನಾವು ಜೀವ ಉಳಿಸಿಕೊಳ್ಳಬೇಕಾದರೆ ಈ ಸಮಸ್ಯೆಯನ್ನು ನಾವೇ ಬಗೆಹರಿಸಿಕೊಳ್ಳಬೇಕಾದ ಪ್ರತಿಕೂಲ ಪರಿಸ್ಥಿತಿ ನಿರ್ಮಾಣವಾಗಿರುವುದು ಬೇಸರ ತಂದಿದೆ.

 ಮ್ಯಾಕ್ಸಿ ಡಿಸೋಜ, ಸ್ಥಳೀಯ ನಿವಾಸಿ

ಮಕ್ಕಳೆಲ್ಲ ವಿದೇಶದಲ್ಲಿದ್ದಾರೆ. ವಯೋವೃದ್ಧರಾದ ನಾನು-ಪತಿ ನದಿಯ ಹತ್ತಿರದಲ್ಲೇ ಸುಮಾರು 80 ವರ್ಷಗಳಿಂದ ವಾಸವಿದ್ದೇವೆ. ಮರಳುಗಾರಿಕೆಯಿಂದ ಹಲವು ತೊಂದರೆಗಳು ಉಂಟಾಗಿವೆ. ಮರಳು ತೆಗೆಯುತ್ತಿರುವುದರಿಂದ ಮನೆ ಅಪಾಯದಲ್ಲಿದೆ. ಅಧಿಕಾರಿಗಳು, ಜನಪ್ರತಿನಿಧಿಗಳಲ್ಲಿ ಸಮಸ್ಯೆಯ ಬಗ್ಗೆ ಅಂಗಲಾಚಿದರೂ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಇನ್ನಾದರೂ ಸಂಬಂಧಪಟ್ಟವರು ಗಮನಹರಿಸಿ, ಕ್ರಮ ಕೈಗೊಳ್ಳಬೇಕು.

 ಐರಿನ್ ಡಿಸೋಜ, ಸ್ಥಳೀಯ ನಿವಾಸಿ

Writer - ಬಂದೇನವಾಝ್ ಮ್ಯಾಗೇರಿ

contributor

Editor - ಬಂದೇನವಾಝ್ ಮ್ಯಾಗೇರಿ

contributor

Similar News