ವಲಸೆ ಕಾರ್ಮಿಕರ ಮಾಹಿತಿಗಳನ್ನು ಬಳಸಿ ಕೋಟ್ಯಂತರ ರೂಪಾಯಿ ಪ್ರಾವಿಡೆಂಟ್ ಫಂಡ್ ಅವ್ಯವಹಾರ: ಸಿಬಿಐ ತನಿಖೆ

Update: 2021-09-11 07:29 GMT

ಹೊಸದಿಲ್ಲಿ: ಲಾಕ್ ಡೌನ್ ಸಂದರ್ಭ ಉದ್ಯೋಗ ನಷ್ಟ ಸಂಭವಿಸಿದ ಸಂದರ್ಭದಲ್ಲಿ ಜನರಿಗೆ ಅನುಕೂಲಕರವಾಗಲೆಂದು ಉದ್ಯೋಗಿಗಳ ಭವಿಷ್ಯನಿಧಿ ಸಂಘಟನೆ (ಇಪಿಎಫ್‍ಒ) ಕಳೆದ ವರ್ಷದ ಮಾರ್ಚ್ ಹಾಗೂ ಜೂನ್ ನಡುವೆ  ವಿದ್‍ ಡ್ರಾ ಮಾಡುವ ನಿಯಮಾವಳಿಗಳಲ್ಲಿ ಸಡಿಲಿಕೆ ತಂದ ಸಂದರ್ಭ ರೂ 2.71 ಕೋಟಿ ಹಣ ಲಪಟಾಯಿಸಿದ ಆರೋಪದ ಮೇಲೆ ಇಪಿಎಫ್‍ಒ ದ ಮೂವರು ಅಧಿಕಾರಿಗಳ ವಿರುದ್ಧ  ಭ್ರಷ್ಟಾಚಾರ ಮತ್ತು ವಂಚನೆ ಪ್ರಕರಣವನ್ನು ಸಿಬಿಐ ದಾಖಲಿಸಿದೆ.

ಈ ಪ್ರಕರಣದ ರೂವಾರಿ ಕಾಂಡಿವಿಲಿ ಪ್ರಾದೇಶಿಕ ಕಚೇರಿಯ ಹಿರಿಯ ಸಾಮಾಜಿಕ ಸುರಕ್ಷತಾ ಸಹಾಯಕ ಚಂದನ್ ಕುಮಾರ್ ಸಿನ್ಹಾ ಎಂಬವರೆಂದು ತಿಳಿದು ಬಂದಿದ್ದು ಈತ ಹಾಗೂ  ಕ್ರಮವಾಗಿ ಕೊಯಂಬತ್ತೂರು ಮತ್ತು ಚೆನ್ನೈ ಪ್ರಾದೇಶಿಕ ಕಚೇರಿಗಳಲ್ಲಿ ಸಹಾಯಕ ಪಿಎಫ್ ಆಯುಕ್ತರುಗಳಾದ ಉತ್ತಮ ತಗರಾಯ್ ಹಾಗು ವಿಜಯ್ ಜರ್ಪೆ ಈ ಪ್ರಕರಣದ ಆರೋಪಿಗಳಾಗಿದ್ದಾರೆ.

ಮೇ 18ರಂದು ಅನಾಮಿಕ ವ್ಯಕ್ತಿಯೊಬ್ಬರಿಂದ ದೊರೆತ ಮಾಹಿತಿಯಿಂದ ಈ ಹಗರಣ  ಇಪಿಎಫ್‍ಒ ದ ವಿಜಿಲೆನ್ಸ್ ವಿಭಾಗಕ್ಕೆ ತಿಳಿದು ಬಂದಿತ್ತು. ನಂತರ ಆಂತರಿಕ ಆಡಿಟ್ ನಡೆದು ಕೋಟ್ಯಂತರ ರೂಪಾಯಿ ಅವ್ಯವಹಾರ  ಒಳಗಿನವರಿಂದಲೇ ನಡೆದಿದೆ ಎಂದು ತಿಳಿಯುತ್ತಲೇ ಸಿಬಿಐಗೆ ಆಗಸ್ಟ್ 24ರಂದು ದೂರು ಸಲ್ಲಿಸಲಾಗಿತ್ತು.

ಇಪಿಎಫ್‍ಒ ವ್ಯವಸ್ಥೆಯಲ್ಲಿನ ನ್ಯೂನತೆಗಳನ್ನು ತಿಳಿದಿದ್ದ ಅಧಿಕಾರಿಗಳು ವಲಸಿಗ ಕಾರ್ಮಿಕರ ಡೇಟಾ ಬಳಸಿ ಸಾಂಕ್ರಾಮಿಕದ ಸಂದರ್ಭ ಈ ಅವ್ಯವಹಾರ ನಡೆಸಿದ್ದರೆನ್ನಲಾಗಿದೆ.

ವಲಸಿಗ ಕಾರ್ಮಿಕರು ಹಾಗೂ ಬಡವರಿಂದ ಸಂಗ್ರಹಿಸಲಾದ ಬ್ಯಾಂಕ್ ಖಾತೆ ಮತ್ತು ಆಧಾರ್ ಸಂಖ್ಯೆಗಳನ್ನು ಬಳಸಿ ಬೋಗಸ್ ಖಾತೆಗಳನ್ನು ಸೃಷ್ಟಿಸಿ ಇವರು ಸಾಂಕ್ರಾಮಿಕದ ಸಂದರ್ಭ ಮುಚ್ಚಿದ ಕಂಪೆನಿಗಳ ಉದ್ಯೋಗಿಗಳೆಂದು ಬಿಂಬಿಸಿ ನಕಲಿ ಕ್ಲೇಮುಗಳನ್ನು ಸಲ್ಲಿಸಿ ಹಣ ವಿದ್‍ಡ್ರಾ ಮಾಡಲಾಗಿತ್ತು ಎಂದು ಮೂಲಗಳಿಂದ ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News