×
Ad

ಎಡರಂಗ ಪ್ರಾಬಲ್ಯದ ಕಣ್ಣೂರು ಯುನಿವರ್ಸಿಟಿಯಲ್ಲಿ ಗೋಳ್ವಲ್ಕರ್‌, ಸಾವರ್ಕರ್‌ ಪಾಠಗಳು: ʼತಪ್ಪೇನಿಲ್ಲʼ ಎಂದ ಉಪ ಕುಲಪತಿ

Update: 2021-09-11 17:16 IST
Photo: Deccan chronicle

ಕಣ್ಣೂರು: ಎಡರಂಗದ ಪ್ರಾಬಲ್ಯವಿರುವ  ಕಣ್ಣೂರು ವಿಶ್ವವಿದ್ಯಾಲಯದ ಸ್ನಾತ್ತಕೋತ್ತರ ಕೋರ್ಸುಗಳ ಪಠ್ಯಕ್ರಮವನ್ನು ಕೇಸರೀಕರಣಗೊಳಿಸಲಾಗಿದ್ದು, ಪಠ್ಯಕ್ರಮದಲ್ಲಿ ಸಾರ್ವರ್ಕರ್ ಮತ್ತು ಗೋಲ್ವಾಲ್ಕರ್ ಅವರ ಕುರಿತಾದ ವಿಚಾರಗಳ ಸೇರ್ಪಡೆಗೊಳಿಸಲಾಗಿದೆ ಎಂಬ ಆರೋಪಗಳನ್ನು ಉಪಕುಲಪತಿ ಗೋಪಿನಾಥ್ ರವೀಂದ್ರನ್ ನಿರಾಕರಿಸಿದ್ದಾರೆ.  ಪಠ್ಯಕ್ರಮ ಸಿದ್ಧಪಡಿಸುವಿಕೆ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ ಹಾಗೂ ವಿವಾದದ ಕುರಿತಂತೆ ದ್ವಿಸದಸ್ಯ ಸಮಿತಿ ಪರಿಶೀಲಿಸಲಿದೆ ಎಂದು ಅವರು ಹೇಳಿದರಲ್ಲದೆ ಪಠ್ಯಕ್ರಮದಲ್ಲಿ ಸಾರ್ವರ್ಕರ್ ಮತ್ತು ಗೋಲ್ವಾಲ್ಕರ್ ಅವರ ಕುರಿತಾದ ವಿಚಾರಗಳ ಸೇರ್ಪಡೆ ತಪ್ಪಲ್ಲ, ಪಠ್ಯಕ್ರಮವನ್ನು ರದ್ದುಗೊಳಿಸುವುದಿಲ್ಲ ಎಂದೂ ಅವರು ಹೇಳಿದ್ದಾರೆ.

ವಿವಾದದ ಕುರಿತು ಪರಿಶೀಲಿಸಲಿರುವ ಸಮಿತಿ ಐದು ದಿನಗಳೊಳಗೆ ವರದಿ ನೀಡಲಿದೆ ಎಂದೂ ಅವರು ಹೇಳಿದ್ದಾರೆ.

ತಲಶ್ಶೇರಿಯ ಸರಕಾರಿ ಕಾಲೇಜಿನಲ್ಲಿ ಸಾರ್ವಜನಿಕ ಆಡಳಿತದ ಸ್ನಾತಕೋತ್ತರ ಕೋರ್ಸ್‌ ನ ಪಠ್ಯ ಕ್ರಮದಲ್ಲಿ ಸಾವರ್ಕರ್‌ ಬರೆದ ʼಹಿಂದುತ್ವ: ಹಿಂದೂ ಯಾರು?ʼ, ಎಮ್ಮೆಸ್‌ ಗೋಳ್ವಾಲ್ಕರ್‌ ಬರೆದ ʼನಾವು ಮತ್ತು ರಾಷ್ಟ್ರೀಯವಾದ ಪರಿಕಲ್ಪನೆʼ ಬಾಲರಾಜ್‌ ಮೊಧೋಕ್‌ ರ ʼಭಾರತೀಕರಣ, ಯಾಕೆ? ಹೇಗೆ?ಏನು?ʼ ಮತ್ತು ದೀನ್‌ ದಯಾಳ್‌ ಉಪಾಧ್ಯಾಯರ ಸಮಗ್ರ ಮಾನವತಾವಾದ ಎಂಬ ಪುಸ್ತಕಗಳನ್ನು ಸೇರಿಸಲಾಗಿದೆ.

ತಜ್ಞರ ಸಮಿತಿಯಿಂದ ಅನುಮೋದನೆಗೊಂಡ ಪುಸ್ತಕಗಳನ್ನು ಮೂರನೇ ಸೆಮಿಸ್ಟರ್ ಪಠ್ಯಕ್ರಮದ 2 ನೇ ಘಟಕದಲ್ಲಿ ಸೇರಿಸಲಾಗಿದೆ, ಇದನ್ನು 'ಭಾರತೀಯ ರಾಜಕೀಯ ಚಿಂತನೆಯಲ್ಲಿ ರಾಷ್ಟ್ರ' ಎಂದು ಹೆಸರಿಸಲಾಗಿದೆ. ಕೋರ್ಸ್ ನಲ್ಲಿ ರವೀಂದ್ರನಾಥ ಟ್ಯಾಗೋರ್ ರ (ರಾಷ್ಟ್ರೀಯತೆ), ಅರಬಿಂದೋ (ರಾಷ್ಟ್ರೀಯತೆ ಧರ್ಮ), ಮಹಾತ್ಮ ಗಾಂಧಿ (ರಾಷ್ಟ್ರೀಯತೆಗೆ ದ್ವೇಷ ಅಗತ್ಯವೇ?), ಬಿಆರ್ ಅಂಬೇಡ್ಕರ್ ರ (ಯಾರು ರಾಷ್ಟ್ರವನ್ನು ರೂಪಿಸುತ್ತಾರೆ?), ಜವಾಹರಲಾಲ್ ನೆಹರು (ರಾಷ್ಟ್ರೀಯತೆ ಮತ್ತು ಅಂತರಾಷ್ಟ್ರೀಯತೆ ಮತ್ತು ಸಂಸ್ಕೃತಿ ಎಂದರೇನು?), ಮತ್ತು ಕಾಂಚ ಇಲಯ್ಯರವರ ಬಫಾಲೋ ನ್ಯಾಶನಲಿಸಂ ಪುಸ್ತಕಗಳು ಸೇರಿವೆ.

"ಕೇಸರೀಕರಣದ ಆರೋಪ ನಿರಾಧಾರ, ಇಂತಹ ಆರೋಪಗಳನ್ನು ಕಣ್ಣೂರು ವಿವಿ ವಿರುದ್ಧ ಮಾಡಿದರೆ ಅಂತಹುದೇ ಆರೋಪಗಳನ್ನು ಜವಾಹರಲಾಲ್ ನೆಹರೂ ವಿವಿ ಕುರಿತೂ ಮಾಡಬಹುದು. ವಿ ಡಿ ಸಾವರ್ಕರ್ ಕುರಿತ ಪಠ್ಯ ಅಲ್ಲಿನ ಪಠ್ಯಕ್ರಮದಲ್ಲೂ ಸೇರಿಸಲಾಗಿದೆ" ಎಂದು ರವೀಂದ್ರನ್ ಹೇಳಿದ್ದಾರೆ.

"ಈ ವಿಚಾರದ ಕುರಿತಂತೆ ವಿದ್ಯಾರ್ಥಿಗಳ ವಿರೋಧ ಎದುರಿಸಿರುವ ಉಪಕುಲಪತಿ, ಪಠ್ಯಕ್ರಮದಲ್ಲಿ ಸಾರ್ವರ್ಕರ್, ಗೋಲ್ವಾಲ್ಕರ್ ಸೇರ್ಪಡೆ ತಪ್ಪಲ್ಲ" ಎಂದು ಹೇಳಿದರು.

ರಾಜ್ಯದ ಉನ್ನತ ಶಿಕ್ಷಣ ಸಚಿವೆ ಆರ್ ಬಿಂದು ಅವರು ಈ ವಿವಾದ ಕುರಿತಂತೆ ಸ್ಪಷ್ಟೀಕರಣ ಕೇಳಿರುವ ಬಗ್ಗೆ ಅವರ ಗಮನ ಸೆಳೆದಾಗ ಈಗಾಗಲೇ ಉತ್ತರಿಸಿರುವುದಾಗಿ ಅವರು ತಿಳಿಸಿದರು.

ಶೈಕ್ಷಣಿಕ ಪಠ್ಯಕ್ರಮದಲ್ಲಿ ಮತೀಯ ಶಕ್ತಿಗಳು ಜಾಗ ಪಡೆಯುತ್ತಿರುವುದು ಅಪಾಯಕಾರಿ ಎಂದು ಸಚಿವೆ ಈ ಹಿಂದೆ ಸುದ್ದಿಗಾರರ ಜತೆ ಮಾತನಾಡುತ್ತಾ ಹೇಳಿದರು.

ವಿವಾದಿತ ಪಠ್ಯಕ್ರಮ ವಾಪಸ್ ಪಡೆಯುವಂತೆ ಆಗ್ರಹಿಸಿ ಇಂದು ಯುವ ಕಾಂಗ್ರೆಸ್ ಕಾರ್ಯಕರ್ತರು ಉಪಕುಲಪತಿಗಳ ಕಾರಿಗೆ ಮುತ್ತಿಗೆ ಹಾಕಿದ ಘಟನೆಯೂ ನಡೆದಿದೆ. ಪಠ್ಯಕ್ರಮ ಪರಿಶೀಲನೆಗೆ ಬಾಹ್ಯ ಸಮಿತಿ ರಚಿಸಲಾಗುವುದೆಂಬ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಕೈಬಿಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News