ಶೇ 50ರಷ್ಟು ಕೃಷಿ ಕುಟುಂಬಗಳು ಸಾಲದ ಹೊರೆಯಲ್ಲಿ: ಎನ್‍ಎಸ್‍ಇ ಸಮೀಕ್ಷೆ ವರದಿ
ಹೊಸದಿಲ್ಲಿ: ದೇಶದಲ್ಲಿ ತಲಾ ಕುಟುಂಬದ ಕೃಷಿ ಸಾಲ ಪ್ರಮಾಣ 2013 ಗೆ ಹೋಲಿಸಿದಾಗ 2018ರಲ್ಲಿ ಶೇ 57.7ಗೆ ಏರಿಕೆಯಾಗಿದೆ ಎಂದು ನ್ಯಾಷನಲ್ ಸ್ಟೆಟಿಸ್ಟಿಕಲ್ ಆಫೀಸ್ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ.
ದೇಶದ ಶೇ 50ರಷ್ಟು ಕೃಷಿ ಕುಟುಂಬಗಳು ಸಾಲದಲ್ಲಿದ್ದು ಸರಾಸರಿ ಬಾಕಿ ಸಾಲ ಮೊತ್ತ 2018ರಲ್ಲಿ ರೂ 74,121 ಆಗಿದೆ, ಈ ಮೊತ್ತ 2013ರಲ್ಲಿ ರೂ 47,000 ಆಗಿತ್ತು ಎಂದು ಸಮೀಕ್ಷೆ ತಿಳಿಸಿದೆ.
ಕೃಷಿ ಕುಟುಂಬಗಳ ತಲಾ ಸಾಲದ ಪ್ರಮಾಣ ಆಂಧ್ರಪ್ರದೇಶದಲ್ಲಿ ಗರಿಷ್ಠ ರೂ 2.45 ಲಕ್ಷ ಆಗಿದ್ದರೆ ನಾಗಾಲ್ಯಾಂಡ್‍ನಲ್ಲಿ ಕನಿಷ್ಠ ರೂ 1,750 ಆಗಿದೆ. ಕೃಷಿ ಕುಟುಂಬಗಳು ಪಡೆದ ಸಾಲದ ಪೈಕಿ ಶೇ 69.6ರಷ್ಟಿ ಸಾಲ ಮಾತ್ರ ಬ್ಯಾಂಕುಗಳು, ಸಹಕಾರಿ ಸೊಸೈಟಿಗಳು ಮತ್ತು ಸರಕಾರಿ ಏಜನ್ಸಿಗಳಿಂದ ಪಡೆಯಲಾಗಿದ್ದರೆ ಶೇ 20.5ರಷ್ಟು ಸಾಲವನ್ನು ಇತರ ಲೇವಾದೇವಿಗಾರರಿಂದ ಪಡೆಯಲಾಗಿತ್ತು ಎಂದು ಸಮೀಕ್ಷೆ ಕಂಡುಕೊಂಡಿದೆ.
ಒಟ್ಟು ಸಾಲ ಪ್ರಮಾಣದ ಪೈಕಿ ಶೇ 57.5ರಷ್ಟು ಮಾತ್ರ ಕೃಷಿ ಉದ್ದೇಶಗಳಿಗೆ ಪಡೆದುಕೊಳ್ಳಲಾಗಿತ್ತು ಎಂದು ಸಮೀಕ್ಷೆ ತಿಳಿಸಿದೆ.
ಕೇಂದ್ರ ಕಾರ್ಯಕ್ರಮ ಜಾರಿ ಮತ್ತು ಅಂಕಿಅಂಶಗಳ ಸಚಿವಾಲಯ ವರದಿಯನ್ನು ಶುಕ್ರವಾರ ಬಿಡುಗಡೆಗೊಳಿಸಿದೆ.