ಅಂದು ಇಂದಿರಾ ಗಾಂಧಿಯನ್ನು ಅನರ್ಹಗೊಳಿಸಿದ್ದು ʼಮಹಾ ಧೈರ್ಯʼದ ತೀರ್ಪಾಗಿತ್ತು: ಸುಪ್ರೀಂಕೋರ್ಟ್‌ ಸಿಜೆಐ ಎನ್.ವಿ ರಮಣ

Update: 2021-09-11 14:34 GMT

ಹೊಸದಿಲ್ಲಿ: 1975ರ ಸಂದರ್ಭದಲ್ಲಿ ಅಂದು ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರನ್ನು ಅನರ್ಹಗೊಳಿಸಿ ನೀಡಿದ್ದ ತೀರ್ಪು ಮಹಾ ಧೈರ್ಯದ ತೀರ್ಪಾಗಿತ್ತು ಎಂದು ಅಲಹಾಬಾದ್‌ ಹೈಕೋರ್ಟ್‌ ನ ನೂತನ ಕಟ್ಟಡ ಸಂಕೀರ್ಣದ ಶಿಲಾನ್ಯಾಸದ ಸಂದರ್ಭದಲ್ಲಿ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ಹೇಳಿದರು. ಇದೇ ಕಾರ್ಯಕ್ರಮದಲ್ಲಿ ಉತ್ತರಪ್ರದೇಶದ ಪ್ರಯಾಗರಾಜದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಹೊಸ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಶಿಲಾನ್ಯಾಸವನ್ನೂ ನೆರವೇರಿಸಲಾಯಿತು.

"ಅಲಹಾಬಾದ್‌ ಹೈಕೋರ್ಟ್‌ 150ಕ್ಕೂ ಹೆಚ್ಚು ವರ್ಷಗಳ ಇತಿಹಾಸವನ್ನು ಹೊಂದಿದೆ. 1975ರಲ್ಲಿ ಪ್ರಧಾನಿ ಇಂದಿರಾ ಗಾಂಧಿಯವರನ್ನು ಅನರ್ಹಗೊಳಿಸಿ ನ್ಯಾಯಮೂರ್ತಿ ಜಗ ಮೋಹನ್‌ ಲಾಲ್‌ ನೀಡಿದ್ದ ತೀರ್ಪು ರಾಷ್ಟ್ರವನ್ನೇ ಬೆಚ್ಚಿ ಬೀಳಿಸಿತ್ತು" ಎಂದು ಅವರು ಹೇಳಿದರು. ಇದು ಹೆಚ್ಚಿನ ಧೈರ್ಯದ ತೀರ್ಪು, ಇದುವೇ ತುರ್ತುಪರಿಸ್ಥಿತಿ ಘೋಷಣೆಗೆ ನೇರ ಕಾರಣವಾಗಿದೆ ಎಂದು ಹೇಳಬಹುದು. ಅದರ ಪರಿಣಾಮಗಳನ್ನು ನಾನು ಈಗ ವಿವರಿಸಲು ಬಯಸುವುದಿಲ್ಲ." ಎಂದರು.

ಅಲಹಾಬಾದ್ ಹೈಕೋರ್ಟ್ ಇಂದಿರಾ ಗಾಂಧಿ ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿ ತಪ್ಪಿತಸ್ಥೆ ಎಂದು ತೀರ್ಪು ನೀಡಿ, ಅವರನ್ನು ಆರು ವರ್ಷಗಳ ಕಾಲ ಸಾರ್ವಜನಿಕ ಹುದ್ದೆಯಿಂದ ಅನರ್ಹಗೊಳಿಸಿತ್ತು. ಇದು ಎರಡು ವರ್ಷಗಳ ಕಾಲ ದೇಶದಲ್ಲಿ ತುರ್ತುಪರಿಸ್ಥಿತಿ ಹೇರಲು ಕಾರಣವಾಗಿತ್ತು. ಮುಖ್ಯ ನ್ಯಾಯಮೂರ್ತಿ ರಮಣ ಅವರು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಶಿಲಾನ್ಯಾಸ ನೆರವೇರಿಸಿದ ರಾಷ್ಟ್ರಪತಿ ಕೋವಿಂದ್ ಅವರಿಗೆ ಕೃತಜ್ಞತೆ ಮತ್ತು ಗೌರವವನ್ನೂ ಸಲ್ಲಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News