×
Ad

ಅಂಧ ಪಿಎಚ್ಡಿ ವಿದ್ಯಾರ್ಥಿನಿ ಮುಸ್ಕಾನ್ ಗೆ ಚು.ಆಯೋಗದ ‘ಯುವ ಐಕಾನ್’ ಕಿರೀಟ

Update: 2021-09-11 22:53 IST
photo: twitter.com/hpu_shimla

ಹೊಸದಿಲ್ಲಿ,ಸೆ.11: ಮುಂದಿನ ವರ್ಷ ನಡೆಯಲಿರುವ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮತದಾರರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುತ್ತಿರುವ ಸಾಮಾಜಿಕ ಕಾರ್ಯಕರ್ತೆ ಹಾಗೂ ಶಿಮ್ಲಾದ ಹಿಮಾಚಲ ಪ್ರದೇಶ ವಿವಿಯಲ್ಲಿ ಪಿಎಚ್ಡಿ ವ್ಯಾಸಂಗವನ್ನು ಮಾಡುತ್ತಿರುವ ಮುಸ್ಕಾನ್(25) ಅವರನ್ನು ಚುನಾವಣಾ ಆಯೋಗವು ತನ್ನ ‘ಯುವ ಐಕಾನ್ ’ಆಗಿ ಹೆಸರಿಸಿದೆ. ಮುಸ್ಕಾನ್ ಹುಟ್ಟಿನಿಂದಲೇ ದೃಷ್ಟಿವಂಚಿತರಾಗಿದ್ದಾರೆ.

 
‘ನಾನು ಅಂಧಳಾಗಿ ಜನಿಸಿದ್ದೆ. ಬಾಲ್ಯದಲ್ಲಿ ಆಟವಾಡುವ ಮಗುವಾಗಿ ಪ್ರತಿಯೊಬ್ಬರೂ ನನ್ನಂತೆಯೇ ಇದ್ದಾರೆಂದು ಭಾವಿಸಿದ್ದೆ. ಆದರೆ ಅವಿಭಕ್ತ ಕುಟುಂಬದಲ್ಲಿ ನಾನು ಬೆಳೆಯುತ್ತ ಹೋದಂತೆ ನಾನು ವಿಭಿನ್ನ,ಅಂಧೆ ಎನ್ನುವ ವಾಸ್ತವ ನನ್ನ ದೃಷ್ಟಿಹೀನ ಕಣ್ಣುಗಳೆದುರು ಅನಾವರಣಗೊಂಡಿತ್ತು. ಈಗ ನನಗೆ 25 ವರ್ಷವಾಗಿದೆ ಮತ್ತು ಸಂಗೀತದಲ್ಲಿ ಪಿಎಚ್ಡಿ ಮಾಡುತ್ತಿದ್ದೇನೆ. ಕನಸನ್ನು ನನಸಾಗಿಸಿಕೊಂಡ ವಿಭಿನ್ನ ಜ್ಞಾನೋದಯದ ಭಾವನೆ ನನ್ನಲ್ಲುಂಟಾಗಿದೆ. ಓರ್ವ ಸಾಮಾನ್ಯ ವ್ಯಕ್ತಿಯಾಗಿ ನಾನು ಈ ಸಾಧನೆಯನ್ನು ಮಾಡಲು ಖಂಡಿತವಾಗಿಯೂ ಸಾಧ್ಯವಾಗುತ್ತಿರಲಿಲ್ಲ ’ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಮುಸ್ಕಾನ್ ಹೇಳಿದರು.

2019ರ ಲೋಕಸಭಾ ಚುನಾವಣೆಯಲ್ಲಿ ಶೇ.72ರಷ್ಟು ಮತದಾನ ಮತ್ತು 2017ರ ವಿಧಾನಸಭಾ ಚುನಾವಣೆಯಲ್ಲಿ ಶೇ.75.52ರಷ್ಟು ಮತದಾನದ ಮೂಲಕ ಮತದಾರರ ಗರಿಷ್ಠ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸುವಲ್ಲಿ ಹಿಮಾಚಲ ಪ್ರದೇಶವು ಯಶಸ್ಸು ಸಾಧಿಸಿದೆ. ಇದು 1999ರ ಲೋಕಸಭಾ ಚುನಾವಣೆಯಲ್ಲಿ ಶೇ.56.78 ಮತ್ತು 1977ರ ವಿಧಾನಸಭಾ ಚುನಾವಣೆಯಲ್ಲಿ ಶೆ.58.57ರ ಕನಿಷ್ಠ ಮಟ್ಟದಲ್ಲಿತ್ತು.

ಶಿಮ್ಲಾದ ಪರ್ವತಮಯ ಪ್ರದೇಶ ಚಿರಗಾಂವ್ನ ಪುಟ್ಟ ಕುಗ್ರಾಮವೊಂದರಲ್ಲಿ ಜನಿಸಿದ್ದ ಮುಸ್ಕಾನ್ ತನ್ನ ಗಾಯನ ಪ್ರತಿಭೆಗಾಗಿ ಹಲವಾರು ಪ್ರಶಸ್ತಿಗಳು ಮತ್ತು ಗೌರವಗಳನ್ನು ಗೆದ್ದುಕೊಂಡಿದ್ದಾರೆ. ಈ ಹಿಂದೆ 2017ರ ವಿಧಾನಸಭಾ ಮತ್ತು 2019ರ ಲೋಕಸಭಾ ಚುನಾವನೆಗಳಲ್ಲಿಯೂ ಅವರು ಚುನಾವಣಾ ಆಯೋಗದ ‘ಯುವ ಐಕಾನ್’ಆಗಿದ್ದರು. ತನ್ನ ಹುಟ್ಟೂರಿನಲ್ಲಿ ಬೆಳೆಯುತ್ತಿದ್ದಾಗ ತನ್ನ ಜೀವನವು ಹೇಗೆ ರೂಪುಗೊಳ್ಳಿದೆ ಎಂಬ ಬಗ್ಗೆ ಯಾವುದೇ ಕಲ್ಪನೆ ಅವರಲ್ಲಿ ಇರಲಿಲ್ಲ. ಆದರೆ ತನ್ನ ಕುಟುಂಬವು ತನಗೆ ಪ್ರೇರಕ ಶಕ್ತಿಯಾಗಿದೆ ಎಂದು ಅವರು ಹೇಳಿದರು.

‘ನಾನು ಶಾಲೆಗಳು ಮತ್ತು ಸಂಸ್ಥೆಗಳಿಗೆ ಭೇಟಿ ನೀಡುತ್ತಿರುತ್ತೇನೆ. ಮತದಾನದಲ್ಲಿ ಪಾಲ್ಗೊಳುವಿಕೆಯನ್ನು ಹೆಚ್ಚಿಸಲು ಗ್ರಾಮಗಳಲ್ಲಿಯ 

ವಿದ್ಯಾರ್ಥಿಗಳು,ಯುವಜನರು,ಪುರುಷರು ಮತ್ತು ಮಹಿಳೆಯರೊಂದಿಗೆ ಸಂವಾದದಲ್ಲಿ ತೊಡಗಿಕೊಳ್ಳುತ್ತೇನೆ ಮತ್ತು ಮತದ ಶಕ್ತಿಯ ಬಗ್ಗೆ ಅವರಿಗೆ ಬೋಧನೆಯನ್ನೂ ನೀಡುತ್ತೇನೆ. ನನ್ನಂತಹ ಅಂಧ ವ್ಯಕ್ತಿಗೂ ಇಂತಹ ಒಳ್ಳೆಯ ಕಾರ್ಯಕ್ಕಾಗಿ ಅಂಬಾಸಿಡರ್ ಆಗುವ ಅವಕಾಶ ಲಭಿಸಿದೆ. ನನಗೆ ನಿಜಕ್ಕೂ ಎತ್ತರಕ್ಕೇರಿದ ಅನುಭವವಾಗುತ್ತಿದೆ ’ಎಂದು ಮುಸ್ಕಾನ್ ಹೇಳಿದರು.

‘ಅಂಧ ಮಕ್ಕಳಿಗಾಗಿರುವ ಶಾಲೆಯಲ್ಲಿ ವ್ಯಾಸಂಗಕ್ಕಾಗಿ ನನ್ನನ್ನು ಮನೆಯಿಂದ 230 ಕಿ.ಮೀ.ದೂರದಲ್ಲಿರುವ ಕುಲುಗೆ ಕಳುಹಿಸಲಾಗಿತ್ತು.ಅಲ್ಲಿ ನಮ್ಮ ಶಿಕ್ಷಕ ಬೇಲಿರಾಮ ಕೌಂಡಾಲ್ ಅವರು ನನ್ನಲ್ಲಿನ ಗಾಯನ ಪ್ರತಿಭೆಯನ್ನು ಕಂಡುಕೊಂಡಿದ್ದರು ’ಎಂದು ಮುಸ್ಕಾನ ಸ್ಮರಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News