ಇರಾಕ್ ಅರ್ಬಿಲ್ ವಿಮಾನ ನಿಲ್ದಾಣದ ಮೇಲೆ ಸಶಸ್ತ್ರ ಡ್ರೋನ್ ದಾಳಿ
ಅರ್ಬಿಲ್: ಇರಾಕ್‌ನ ಅಮೆರಿಕ ಕಾನ್ಸುಲೇಟ್ ಬಳಿಯ ಅರ್ಬಿಲ್ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಸಶಸ್ತ್ರ ಡ್ರೋನ್ ದಾಳಿ ನಡೆದಿದೆ ಎಂದು ಕುರ್ದಿಶ್ ಭದ್ರತಾ ಪಡೆಗಳು ಹೇಳಿಕೆ ನೀಡಿವೆ.
ನಿಲ್ದಾಣದ ಮೇಲೆ ನಡೆದ ಎರಡು ಸಶಸ್ತ್ರ ಡ್ರೋನ್ ದಾಳಿಗಳಲ್ಲಿ ಯಾರಿಗೂ ಗಾಯಗಳಾಗಿಲ್ಲ, ವಿಮಾನ ನಿಲ್ದಾಣಕ್ಕೆ ಯಾವುದೇ ಧಕ್ಕೆಯಾಗಿಲ್ಲ ಎಂದು ನಿರ್ದೇಶಕ ಅಹ್ಮದ್ ಹೊಶಿಯಾರ್ ಹೇಳಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಎರಡು ಸ್ಫೋಟಗಳು ಕೇಳಿಬಂತು. ಬಳಿಕ ಆಗಸದಲ್ಲಿ ದಟ್ಟಹೊಗೆ ವ್ಯಾಪಿಸಿತು ಹಾಗೂ ಅಮೆರಿಕ ಕಾನ್ಸುಲೇಟ್ ಸಮೀಪ ಸೈರನ್ ಮೊಳಗುವುದು ಕೇಳಿಬಂತು ಎಂದು ಎಎಫ್‌ಪಿ ಅಧಿಕಾರಿಗಳು ತಿಳಿಸಿದ್ದಾರೆ. ಭದ್ರತಾ ಪಡೆಗಳು ವಿಮಾನ ನಿಲ್ದಾಣ ಪ್ರವೇಶವನ್ನು ನಿರ್ಬಂಧಿಸಿವೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಅಮೆರಿಕದ ಪಡೆಗಳನ್ನು ಅಥವಾ ಅಮೆರಿಕದ ಇರಾಕ್ ಹಿತಾಸಕ್ತಿಯ ಮೇಲೆ ಇಂಥ ದಾಳಿಗಳು ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವುದು ಸಾಮಾನ್ಯವಾಗಿದೆ. ಈ ದಾಳಿಯ ಹೊಣೆಯನ್ನು ಯಾವುದೇ ಸಂಘಟನೆಗಳನ್ನು ಹೊತ್ತಿಲ್ಲವಾದರೂ, ಇರಾಕ್‌ನಲ್ಲಿರುವ ಇರಾನ್ ಪರ ಪಡೆಗಳು ದಾಳಿ ನಡೆಸಿದ್ದಾಗಿ ಅಮೆರಿಕ ಆಪಾದಿಸಿದೆ.
ಸಶಸ್ತ್ರ ಡ್ರೋನ್ ಗಳ ಬಳಕೆ ಇತ್ತೀಚಿನ ಬೆಳವಣಿಗೆಯಾಗಿದ್ದು, ಅಮೆರಿಕ ನೇತೃತ್ವದ ಮಿತ್ರ ಪಡೆಗಳಿಗೆ ಇದು ಹೊಸ ಸವಾಲಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ಸಿ-ರ್ಯಾಮ್ ಕ್ಷಿಪಣಿ ವಿರೋಧಿ ರಕ್ಷಣಾ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ.