×
Ad

ಗುಜರಾತ್‌ನಲ್ಲಿ ಇಂದು ಶಾಸಕಾಂಗ ಸಭೆ: ವಿಜಯ್ ರೂಪಾನಿ ಉತ್ತರಾಧಿಕಾರಿ ಆಯ್ಕೆ ಸಾಧ್ಯತೆ

Update: 2021-09-12 11:04 IST
photo: PTI

ಗಾಂಧಿನಗರ: ವಿಜಯ್ ರೂಪಾನಿ ರಾಜೀನಾಮೆಯಿಂದ ತೆರವಾಗಿರುವ ಗುಜರಾತ್ ಮುಖ್ಯಮಂತ್ರಿಯಾಗಿ ಯಾರು ಅಧಿಕಾರ ವಹಿಸಿಕೊಳ್ಳುತ್ತಾರೆ ಎಂಬ ಬಗ್ಗೆ ರವಿವಾರ ನಡೆಯಲಿರುವ ಬಿಜೆಪಿ ಶಾಸಕಾಂಗ ಸಭೆಯ ನಂತರ ತೀರ್ಮಾನವಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸಭೆಯಲ್ಲಿ ಭಾಗವಹಿಸಲಿರುವ ಕೇಂದ್ರ ವೀಕ್ಷಕ ನರೇಂದ್ರ ಸಿಂಗ್ ತೋಮರ್ ಅವರು ರವಿವಾರ ಬೆಳಿಗ್ಗೆ ರಾಜ್ಯ ಬಿಜೆಪಿ ಅಧ್ಯಕ್ಷ ಸಿ.ಆರ್. ಪಾಟೀಲ್ ಅವರನ್ನು ಭೇಟಿ ಮಾಡಿದರು.

ಹೊಸ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಶಾಸಕಾಂಗ ಪಕ್ಷದ ಸಭೆಗೆ ವೀಕ್ಷಕರಾಗಿ ಕೇಂದ್ರ ಸಚಿವರಾದ ತೋಮರ್ ಹಾಗೂ ಪ್ರಹ್ಲಾದ್ ಜೋಶಿ ಅವರನ್ನು ಬಿಜೆಪಿ ನೇಮಿಸಿದೆ.

"ನಾವು ಈ ವಿಷಯದ ಕುರಿತು (ಹೊಸ ಮುಖ್ಯಮಂತ್ರಿ) ಹೆಚ್ಚಿನ ಚರ್ಚೆಗಳನ್ನು ನಡೆಸಲು ಇಲ್ಲಿಗೆ ಬಂದಿದ್ದೇವೆ. ನಾವು ರಾಜ್ಯ ಬಿಜೆಪಿ ನಾಯಕರೊಂದಿಗೆ ಚರ್ಚಿಸುತ್ತೇವೆ" ಎಂದು ತೋಮರ್ ವಿಮಾನ ನಿಲ್ದಾಣದಲ್ಲಿ ಹೇಳಿದರು.

"ನಾನು ಗುಜರಾತ್ ನಾಯಕರೊಂದಿಗೆ ಸಮಾಲೋಚನೆ ನಡೆಸುತ್ತೇನೆ. ನಂತರ ಕೇಂದ್ರ ನಾಯಕತ್ವ ನಿರ್ಧಾರ ತೆಗೆದುಕೊಳ್ಳುತ್ತದೆ" ಎಂದು ಜೋಶಿ ಹೇಳಿದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ತರುಣ್ ಚಾಗ್ ಕೂಡ ಅಹಮದಾಬಾದ್ ತಲುಪಿದ್ದಾರೆ.

ಲಕ್ಷದ್ವೀಪ ಹಾಗೂ  ದಾದ್ರಾ ಮತ್ತು ನಾಗರ್ ಹವೇಲಿ ಮತ್ತು ದಮನ್ ಮತ್ತು ದಿಯು ಕೇಂದ್ರಾಡಳಿತ ಪ್ರದೇಶಗಳ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದಾರೆ ಎಂಬ ಚರ್ಚೆ ಇದೆ.

ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಹಾಗೂ  ಅವರ ಸಂಪುಟ ನಿರ್ಗಮಿಸಿದ ಒಂದು ದಿನದ ನಂತರ ಅವರ ಉತ್ತರಾಧಿಕಾರಿಯ ಕುರಿತು ಚರ್ಚಿಸಲು ರಾಜ್ಯ ಬಿಜೆಪಿ ಶಾಸಕರು ಇಂದು ಭೇಟಿಯಾಗುತ್ತಿದ್ದಾರೆ.

ರೂಪಾನಿ ಯಾವುದೇ ಕಾರಣವನ್ನು ನೀಡದೆ ಶನಿವಾರ ಪದತ್ಯಾಗ ಮಾಡಿದ್ದರು. ರಾಜ್ಯದ ಅಭಿವೃದ್ಧಿಯು 'ಹೊಸ ನಾಯಕತ್ವ' ಹಾಗೂ  ಪ್ರಧಾನಿ ನರೇಂದ್ರ ಮೋದಿಯವರ 'ಮಾರ್ಗದರ್ಶನ' ಅಡಿಯಲ್ಲಿ ಮುಂದುವರಿಯಬೇಕು ಎಂದು ಅವರು ಹೇಳಿದರು.

65 ರ ಹರೆಯದ ರೂಪಾನಿ ಶನಿವಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ 15 ತಿಂಗಳು ಬಾಕಿ ಇರುವಾಗ ಈ ಬೆಳವಣಿಗೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News