ಭಿಕ್ಷುಕರಲ್ಲಿ ಸಂಗೀತ ಶಿಕ್ಷಕಿ, ಪದವೀಧರರು: ಜೈಪುರ ಪೊಲೀಸರು ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗ

Update: 2021-09-12 07:29 GMT
ಸಾಂದರ್ಭಿಕ ಚಿತ್ರ photo: PTI

ಜೈಪುರ: ಶಿಕ್ಷಣ ಹಾಗೂ  ಉತ್ತಮ ಕುಟುಂಬದ ಹಿನ್ನೆಲೆ ಇರುವ ಹೊರತಾಗಿಯೂ ಎಷ್ಟು ಜನರು ನಿರಾಶ್ರಿತರಾಗಿದ್ದಾರೆ ಎಂಬ ಮಾಹಿತಿಯ ಮಹಾಪೂರವನ್ನು ಭಿಕ್ಷುಕರ ಕುರಿತಾಗಿ ನಗರ ಪೊಲೀಸ್  ನಡೆಸಿರುವ ಸಮೀಕ್ಷೆಯೊಂದರಲ್ಲಿ ಕಲೆ ಹಾಕಿದೆ.

ವ್ಯಾಪಕವಾದ ಕ್ಷೇತ್ರ ಸಮೀಕ್ಷೆಯ ಸಮಯದಲ್ಲಿ ಪೊಲೀಸರು ಉತ್ತರ ಪ್ರದೇಶದ ಬನಾರಸ್ ಮೂಲದ ಮಂಜೂ ಮಿಶ್ರಾ (65) ಎಂದು ಗುರುತಿಸಲ್ಪಟ್ಟ ಮಹಿಳೆಯನ್ನು ಪತ್ತೆ ಹಚ್ಚಿದರು. ತನ್ನ ಪತಿ ಸಾಯುವ ಮೊದಲು ಖಾಸಗಿ ಶಾಲೆಗಳಲ್ಲಿ ಸಂಗೀತ ಕಲಿಸುತ್ತಿದ್ದೆ ಎಂದು ಮಂಜೂ ಮಿಶ್ರಾ ಪೊಲೀಸರಿಗೆ ತಿಳಿಸಿದ್ದಾರೆ.

ಪತಿಯ ಸಾವಿನ ನಂತರ ಮಂಜೂ ಮಿಶ್ರಾ ಜೈಪುರಕ್ಕೆ ಬಂದಿದ್ದರು. ಕಳೆದ ಹಲವು ವರ್ಷಗಳಿಂದ ಬೀದಿ ಬದಿ ವಾಸಿಸುತ್ತಿದ್ದಾರೆ ಎಂದು ಪೊಲೀಸರು ಕಂಡುಕೊಂಡರು. ಕೆಲಸ ಮಾಡಲು ಹಾಗೂ  ಜೀವನೋಪಾಯಕ್ಕೆ ಸಿದ್ಧರಾಗಿದ್ದಾರೆ ಎಂದು ಪೊಲೀಸರಿಗೆ ಮಹಿಳೆ ತಿಳಿಸಿದ್ದಾರೆ.

ಶ್ಯಾಮ್ ಲಾಲ್ (70) ಕಳೆದ 16 ವರ್ಷಗಳಿಂದ ಜೈಪುರದಲ್ಲಿ ವಾಸಿಸುತ್ತಿದ್ದಾರೆ. ವಾಣಿಜ್ಯ ಪದವೀಧರರಾಗಿದ್ದ ಅವರನ್ನು ಕುಟುಂಬದವರು  ಕೈಬಿಟ್ಟಿದ್ದರು.

"ಶ್ಯಾಮ್ ಅವರು ಒಬ್ಬ ನುರಿತ ಟೈಲರ್ ಆಗಿದ್ದರು ಹಾಗೂ  ಅವರಿಗೆ ಸಹಾಯ ಒದಗಿಸಿದರೆ ಅವರು ಕೆಲಸ ಮಾಡಲು ಸಿದ್ಧರಿದ್ದಾರೆ" ಎಂದು ಅಧಿಕಾರಿಯೊಬ್ಬರು ಹೇಳಿದರು.

ನಗರದಾದ್ಯಂತ ಸಮೀಕ್ಷೆ ನಡೆಸಿದ ಎಸಿಪಿ ನರೇಂದ್ರ ದೀಮಾ, ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳು, ಮಾದಕ ವ್ಯಸನಗಳು, ನಿರುದ್ಯೋಗ ಹಾಗೂ  ಅನೇಕ ಸಂದರ್ಭಗಳಲ್ಲಿ ಕೌಟುಂಬಿಕ ಸಮಸ್ಯೆಗಳು ಸೇರಿದಂತೆ ಹಲವು ಕಾರಣಗಳಿಂದಾಗಿ ಅನೇಕ ಜನರು ನಿರ್ಗತಿಕರಾಗಿ ಜೀವನವನ್ನು ನಡೆಸುತ್ತಿದ್ದಾರೆ ಎಂದು ಹೇಳಿದರು.

ನಗರದಲ್ಲಿ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿರುವ 2,500 ಭಿಕ್ಷುಕರನ್ನು ಪೊಲೀಸರು ಗುರುತಿಸಿದ್ದಾರೆ. ಇವರಲ್ಲಿ ಸುಮಾರು 50 ಮಂದಿ ಶಾಲಾ ಶಿಕ್ಷಣವನ್ನು ಮುಗಿಸಿದ್ದಾರೆ. ಸುಮಾರು 11 ಮಂದಿ ಪದವೀಧರರಾಗಿದ್ದಾರೆ.

ಸಮೀಕ್ಷೆಯ ತಂಡಗಳು ಕೋಟಾದ 52 ವರ್ಷದ ನಿವಾಸಿಯನ್ನು ಗುರುತಿಸಿದ್ದು, ಅವರು ತಮ್ಮ ಯೌವನದಲ್ಲಿ ಪ್ರಶಸ್ತಿಗಳನ್ನು ಪಡೆದಿದ್ದರು. ಆದರೆ ಕೆಲಸದಿಂದ ವಜಾ ಮಾಡಿದ ನಂತರ ಬೀದಿಗೆ ಬಂದರು.

ವಿದ್ಯಾವಂತ ಭಿಕ್ಷುಕರ ಉಪಸ್ಥಿತಿಯು ನಮಗೆ ಆಘಾತಕಾರಿಯಾಗಿದೆ. ಕೆಲವು ಭಿಕ್ಷುಕರು ತಾವು ಕೆಲವು ಕೆಲಸ ಹುಡುಕಲು ಮತ್ತು ಗೌರವಾನ್ವಿತ ಜೀವನವನ್ನು ನಡೆಸಲು ಬಯಸುತ್ತೇವೆ. ಆದರೆ ಕೆಲವರು ದೈಹಿಕ ನ್ಯೂನತೆಗಳಿಂದಾಗಿ ಕೆಲಸ ಹುಡುಕಲು ಕಷ್ಟಪಡುತ್ತಿದ್ದೇವೆ ಎಂದು ತಿಳಿಸಿದರು ಎಂದು ಪೊಲೀಸರು ಹೇಳಿದರು.

ನಮ್ಮ ಬಳಿ ಈಗ ಎಲ್ಲ ಭಿಕ್ಷುಕರ ಡೇಟಾಬೇಸ್ ಇದೆ ಮತ್ತು ಅವರೆಲ್ಲರಿಗೂ ಪುನರ್ವಸತಿ ಕಲ್ಪಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಅವರಿಗೆ ಸಮರ್ಥ ತರಬೇತಿ ಮತ್ತು ಅಗತ್ಯವಿರುವ ಚಿಕಿತ್ಸೆಯನ್ನು ನೀಡಲಾಗುವುದು. ಇದರಿಂದ ಅವರು ಸುಸ್ಥಿರ ಉದ್ಯೋಗವನ್ನು ಕಂಡುಕೊಳ್ಳಬಹುದು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News