ಕೋಲ್ಕತ್ತದ ಫ್ಲೈ ಓವರ್‌ ಚಿತ್ರದೊಂದಿಗೆ ಜಾಹೀರಾತು ನೀಡಿ ನಗೆಪಾಟಲಿಗೀಡಾದ ಉತ್ತರಪ್ರದೇಶ ಸಿಎಂ ಆದಿತ್ಯನಾಥ್‌

Update: 2021-09-12 08:04 GMT

ಹೊಸದಿಲ್ಲಿ: ದೇಶದಾದ್ಯಂತ ದಿನಪತ್ರಿಕೆಗಳ ಪ್ರಥಮ ಪುಟದಲ್ಲಿ ಉತ್ತರಪ್ರದೇಶವನ್ನು ಮುಖ್ಯಮಂತ್ರಿ ಆದಿತ್ಯನಾಥ್‌ ಬದಲಾಯಿಸಿದ್ದಾರೆಂಬ ತಲೆಬರಹದ ಜಾಹೀರಾತುಗಳು ರಾರಾಜಿಸುತ್ತಿವೆ. ಆದರೆ ಆದಿತ್ಯನಾಥ್‌ ಕೈ ಬೀಸುವ ಫೋಟೊದೊಂದಿಗೆ ಕೋಲ್ಕತ್ತದ ಮಾ ಫ್ಲೈ ಓವರ್‌ ನ ಫೋಟೊ ಹಾಕಿದ್ದು ಸದ್ಯ ನಗೆಪಾಟಲಿಗೀಡಾಗಿದೆ. ಈ ಬಗ್ಗೆ ಆರ್ಟಿಐ ಕಾರ್ಯಕರ್ತ ಹಾಗೂ ಟಿಎಂಸಿ ಮುಖಂಡ ಸಾಕೇತ್‌ ಗೋಖಲೆ ತಮ್ಮ ಸಾಮಾಜಿಕ ತಾಣ ಖಾತೆಯಲ್ಲಿ ಪ್ರಕಟಿಸಿದ್ದಾರೆ.

"ಇದು ಕೋಲ್ಕತ್ತದ ಮಾ ಫ್ಲೈ ಓವರ್‌ ಆಗಿದೆ. ಝೂಮ್‌ ಮಾಡಿ ನೋಡಿದರೆ ಕೋಲ್ಕತ್ತದ ಐಕಾನಿಕ್‌ ಹಳದಿ ಬಣ್ಣದ ಟ್ಯಾಕ್ಸಿಯನ್ನೂ ನಿಮಗೆ ಕಾಣಬಹುದು. ಉತ್ತರಪ್ರದೇಶವನ್ನು ಬದಲಾಯಿಸುವುದು ಎಂದರೆ ಕೋಲ್ಕತ್ತದ ಅಭಿವೃದ್ಧಿಯ ಫೋಟೊಗಳನ್ನು ಕದ್ದು ಮಿಲಿಯನ್‌ ಗಟ್ಟಲೆ ಹಣವನ್ನು ದಿನಪತ್ರಿಕೆಗಳ ಜಾಹೀರಾತಿಗೆ ಬಳಸುವುದೇ?" ಎಂದು ಅವರು ಪ್ರಶ್ನಿಸಿದ್ದಾರೆ.

ಉತ್ತರಪ್ರದೇಶದ ಮುಖ್ಯಮಂತ್ರಿ ಅಜಯ್‌ ಬಿಶ್ತ್‌ ರವರು ದಿನಪಪತ್ರಿಕೆಗಳಿಗೆ ಕೋಟ್ಯಂತರ ರೂ. ವ್ಯಯಿಸುವ ಮೂಲಕ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಆದರೆ ತನ್ನ ಗುರು ನರೇಂದ್ರನಂತೆ ಈ ಕೆಲಸವನ್ನು ತನ್ನದೇ ಎಂಬಂತೆ ತೋರ್ಪಡಿಸಿ, ಅಭಿವೃದ್ಧಿ ಮಾಡಿದವರಿಗೆ ಕ್ರೆಡಿಟ್‌ ನೀಡಿಲ್ಲ. ಅಜಯ್‌ ಬಿಶ್ತನ ತೊಂದರೆಗಳನ್ನು ಅರ್ಥೈಸಲೂ ಸಾಧ್ಯವಾಗುತ್ತಿಲ್ಲ. ಆತ ಒಂದು ವೇಳೆ ಉತ್ತರಪ್ರದೇಶದ ಅಭಿವೃದ್ಧಿ ಕಾರ್ಯಗಳನ್ನು ತೋರಿಸಿದರೆ ಅದು ಅಖಿಲೇಶ್‌ ಯಾದವ್‌ ಮಾಡಿದ್ದಾಗಿರುತ್ತದೆ. ಬಿಶ್ತ್‌ ಪಶ್ಚಿಮ ಬಂಗಾಳದಿಂದ ಕಲಿಯುವುದು ತುಂಬಾ ಇದೆ" ಎಂದು ಅವರು ಪೋಸ್ಟ್‌ ಮಾಡಿದ್ದಾರೆ. ಟಿಎಂಸಿ ಮುಖಂಡರಾದ ಅಭಿಷೇಕ್‌ ಬ್ಯಾನರ್ಜಿ ಹಾಗೂ ಮುಕುಲ್‌ ರಾಯ್‌ ಕೂಡಾ ಈ ಕುರಿತು ವ್ಯಂಗ್ಯವಾಡಿದ್ದಾರೆ.

"ಇದೊಂದು ಸರಿಯಾದ ಜಾಹೀರಾತು, ಅವರು ಪಶ್ಚಿಮ ಬಂಗಾಳದ ಹೆಸರನ್ನು ಉತ್ತರಪ್ರದೇಶವೆಂದು ಬದಲಾಯಿಸಿರಬೇಕು" ಎಂದು ಬಳಕೆದಾರರೋರ್ವರು ಕಮೆಂಟ್‌ ಮಾಡಿದರೆ, "ಹಿಂದೂರಾಷ್ಟ್ರದ ಮ್ಯಾಪ್‌ ಪ್ರಕಾರ ಪಶ್ಚಿಮ ಬಂಗಾಳ ಉತ್ತರಪ್ರದೇಶಕ್ಕೆ ಸೇರುತ್ತದೆ" ಎಂದು ಕಟಕಿಯಾಡಿದ್ದಾರೆ.

ಇನ್ನು ಈ ಕುರಿತು indianexpress ಸ್ಪಷ್ಟೀಕರಣ ನೀಡಿದ್ದು, ಇದು ನಮ್ಮ ಮಾರ್ಕೆಟಿಂಗ್‌ ವಿಭಾಗದ ಕಣ್ತಪ್ಪಿನಿಂದ ಸಂಭವಿಸಿದೆ. ಈ ಜಾಹೀರಾತನ್ನು ಎಲ್ಲಾ ಡಿಜಿಟಲ್‌ ಮಾಧ್ಯಮಗಳಿಂದ ತೆರವುಗೊಳಿಸಲಾಗಿದೆ ಎಂದು ಟ್ವಿಟರ್‌ ನಲ್ಲಿ ಪೋಸ್ಟ್‌ ಮಾಡಿದ್ದಾರೆ.

Full View Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News