ಬೆದರಿಕೆಯ ತಂತ್ರಗಳು ನನ್ನ ಪರಿಹಾರ ಕಾರ್ಯಗಳನ್ನು ನಿಲ್ಲಿಸಲು ಅವಕಾಶ ನೀಡುವುದಿಲ್ಲ: ರಾಣಾ ಅಯ್ಯೂಬ್
ಹೊಸದಿಲ್ಲಿ,ಸೆ.12: ಕೋವಿಡ್-19 ಮತ್ತು ನೆರೆ ಪರಿಹಾರ ಕಾರ್ಯಗಳಿಗಾಗಿ ನಿಧಿಸಂಗ್ರಹ ಅಭಿಯಾನಕ್ಕಾಗಿ ತನ್ನ ವಿರುದ್ಧ ಉತ್ತರ ಪ್ರದೇಶದಲ್ಲಿ ದಾಖಲಾಗಿರುವ ಎಫ್ಐಆರ್ ಆಧಾರರಹಿತ ಮತ್ತು ದುರುದ್ದೇಶಪೂರ್ವಕವಾಗಿದೆ ಎಂದು ಪತ್ರಕರ್ತೆ ರಾಣಾ ಅಯ್ಯೂಬ್ ಹೇಳಿದ್ದಾರೆ.
ಪರಿಹಾರ ಕಾರ್ಯಗಳು ಇಂದು ಅತ್ಯಗತ್ಯವಾಗಿವೆ ಮತ್ತು ಅವುಗಳನ್ನು ತಾನು ಮಾಡುವುದನ್ನು ನಿಲ್ಲಿಸಲು ಬೆದರಿಕೆ ತಂತ್ರಗಳಿಗೆ ತಾನು ಅವಕಾಶ ನೀಡುವುದಿಲ್ಲ ಎಂದರು.
ಮಂಗಳವಾರ ಹಿಂದು ಐಟಿ ಸೆಲ್ ಹೆಸರಿನ ಹಿಂದುತ್ವ ಗುಂಪೊಂದು ರಾಣಾ ಲೋಕೋಪಕಾರದ ಹೆಸರಿನಲ್ಲಿ ಆನ್ಲೈನ್ ಕ್ರೌಡ್ಫಂಡಿಂಗ್ ಪ್ಲಾಟ್ಫಾರ್ಮ್ ಮೂಲಕ ಕಾನೂನುಬಾಹಿರವಾಗಿ ಹಣ ಸಂಗ್ರಹಿಸುತ್ತಿದ್ದಾರೆ ಎಂದು ಆರೋಪಿಸಿ ಘಾಝಿಯಾಬಾದ್ನಲ್ಲಿ ಪೊಲೀಸರಿಗೆ ದೂರನ್ನ ನೀಡಲಾಗಿತ್ತು. ರಾಣಾ ಸರಕಾರದ ಅನುಮತಿಯಿಲ್ಲದೆ ವಿದೇಶಿ ದೇಣಿಗೆಗಳನ್ನು ಸ್ವೀಕರಿಸುತ್ತಿದ್ದಾರೆ ಎಂದೂ ಅದು ಆರೋಪಿಸಿತ್ತು. ಈ ದೂರಿನ ಆಧಾರದಲ್ಲಿ ಐಪಿಸಿ,ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ರಾಣಾ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ.
ಈ ಆರೋಪಗಳನ್ನು ತಳ್ಳಿಹಾಕಿರುವ ರಾಣಾ,ದೇಣಿಗೆಗಳ ಮೂಲಕ ಸಂಗ್ರಹಿಸಲಾದ ಒಂದೇ ಒಂದು ಪೈಸೆಯೂ ದುರುಪಯೋಗವಾಗಿಲ್ಲ ಮತ್ತು ದೇಣಿಗೆಗಳು ಯಾವುದೇ ಕಾನೂನನ್ನು ಉಲ್ಲಂಘಿಸಿಲ್ಲ ಎಂದಿದ್ದಾರೆ.
‘ಪರಿಹಾರ ಕಾರ್ಯಗಳಿಗೆ ಹೆಚ್ಚು ಹಣವನ್ನು ಬಳಸಲಾಗುವಂತೆ ದೇಣಿಗೆಗಳ ಮೇಲೆ ತೆರಿಗೆಯನ್ನು ವಿಧಿಸುವಂತಿಲ್ಲ ಎಂದು ನಾನು ನಂಬಿದ್ದೇನಾದರೂ ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯ ನಿರ್ದೇಶದಂತೆ ದೇಣಿಗೆಗಳ ಮೇಲೆ ಭಾರೀ ಮೊತ್ತದ ತೆರಿಗೆಯನ್ನು ನಾನು ಪಾವತಿಸಿದ್ದೇನೆ ’ ಎಂದ ರಾಣಾ,‘ಆದಾಯ ತೆರಿಗೆ ಇಲಾಖೆಯು ನನ್ನ ಖಾತೆಗಳನ್ನು ಮತ್ತು ದೇಣಿಗೆಗಳನ್ನು ಪರಿಶೀಲಿಸಿದೆ. ನ್ಯಾಯಯುತ ತನಿಖೆಯು ಎಲ್ಲ ಸತ್ಯವನ್ನು ಬಹಿರಂಗಗೊಳಿಸುತ್ತದೆ ’ಎಂದರು.