ಮಸೀದಿಯ ಜಾಗದಲ್ಲಿ ನಂದಿಯ ಮೂರ್ತಿ ಪತ್ತೆ: ವೈರಲ್‌ ಸುದ್ದಿಯ ಸತ್ಯಾಂಶವೇನು?

Update: 2021-09-13 13:05 GMT

ಹೊಸದಿಲ್ಲಿ:  ಹಿಂದುಗಳು ಆರಾಧಿಸುವ ನಂದಿಯ ಮೂರ್ತಿಯೊಂದು ಮಸೀದಿಯ ಕಟ್ಟಡವಿದ್ದ ಜಾಗದಲ್ಲಿ ಮಣ್ಣಿನಡಿಯಲ್ಲಿ ಪತ್ತೆಯಾಗಿದೆ ಎಂದು ಹೇಳಿಕೊಂಡು ಒಂದು ಫೋಟೋವನ್ನು ಟ್ವಿಟ್ಟರಿನಲ್ಲಿ ವ್ಯಕ್ತಿಯೊಬ್ಬರು ಕೆಲ ದಿನಗಳ ಹಿಂದೆ ಪೋಸ್ಟ್ ಮಾಡಿದ್ದರಲ್ಲದೆ ಇದೇ ಪೋಸ್ಟ್ ಅನ್ನು ಹಲವರು ರಿಟ್ವೀಟ್ ಮಾಡಿದ್ದರು. ಸಾಮಾಜಿಕ ತಾಣದಾದ್ಯಂತ ಈ ಚಿತ್ರ ವೈರಲ್‌ ಆಗಿತ್ತು. ಆದರೆ ಇದು ಮಸೀದಿಯ ಜಾಗದಿಂದ ದೊರೆತ ನಂದಿಯ ವಿಗ್ರಹವಲ್ಲ ಎಂಬುವುದಾಗಿ altnews.in ವರದಿ ಮಾಡಿದೆ.

 ಈ ಚಿತ್ರವನ್ನು ಬಳಸಿ ʼರಿವರ್ಸ್ ಇಮೇಜ್ʼ ಸರ್ಚ್ ಮಾಡಿದ ಆಲ್ಟ್ ನ್ಯೂಸ್ ಗೆ ವಾಸ್ತವಾಂಶ ತಿಳಿದು ಬಂದಿತ್ತು. ಈ ಚಿತ್ರವನ್ನು ಮೂಲತಃ ಲಾಸ್ಟ್ ಟೆಂಪಲ್ಸ್ ಎಂಬ ಟ್ವಿಟ್ಟರ್ ಹ್ಯಾಂಡಲ್ ಪೋಸ್ಟ್ ಮಾಡಿತ್ತಲ್ಲದೆ  ತಮಿಳುನಾಡಿನ ನಮಕ್ಕಲ್ ಜಿಲ್ಲೆಯ ಮೊಹನೂರ್ ಎಂಬಲ್ಲಿನ ಸೆಲ್ಲಂದಿಯಮ್ಮನ್ ದೇವಸ್ಥಾನದಲ್ಲಿ ನಡೆದ ಉತ್ಖನನದ ವೇಳೆ ಈ ಮೂರ್ತಿ ಪತ್ತೆಯಾಗಿತ್ತು ಎಂದು ಅದರಲ್ಲಿ ಬರೆಯಲಾಗಿತ್ತು.

ಇದೇ ವಿಚಾರ ಕುರಿತಂತೆ ದಿನಮಲರ್ ಎಂಬ ತಮಿಳು ಪತ್ರಿಕೆಯಲ್ಲಿ ಸೆಪ್ಟೆಂಬರ್ 2ರಂದು ಲೇಖನವೊಂದೂ ಪ್ರಕಟಗೊಂಡಿತ್ತಲ್ಲದೆ ದೇವಳದ ಸುತ್ತಲಿನ ಜಾಗದಲ್ಲಿ ಉತ್ಖನನ ನಡೆಸಿದಾಗ ಈ ಮೂರ್ತಿ ಪತ್ತೆಯಾಗಿತ್ತು ಹಾಗೂ ಕಂದಾಯ ಇಲಾಖೆ ಹಾಗೂ ಸಂಬಂಧಿತ ಅಧಿಕಾರಿಗಳ ಈ ಮೂರ್ತಿಯನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ. ಮೂರ್ತಿಯನ್ನು ಸೇಲಂ ಮ್ಯೂಸಿಯಂನಲ್ಲಿಡಲಾಗಿದ್ದು ಹಾಗೂ ಪುರಾತತ್ವ ಇಲಾಖೆ ಅದನ್ನು ಪರಿಶೀಲಿಸುತ್ತಿದೆ ಎಂದೂ ಅದರಲ್ಲಿ ಬರೆಯಲಾಗಿದೆ

ತಮಿಳು ಸುದ್ದಿ ತಾಣ ವಿಕಟನ್ ಕೂಡ ಇದೇ ವಿಚಾರದ ವರದಿ ಪ್ರಕಟಿಸಿದೆ. ಆದರೆ ಸಾಮಾಜಿಕ ತಾಣದಾದ್ಯಂತ ಈ ಫೋಟೊವನ್ನು ಬಳಸಿ ದ್ವೇಷ ಹರಡಲಾಗಿತ್ತು. ದೇಶದ ಪ್ರತಿಯೊಂದು ಮಸೀದಿಯನ್ನು ಅಗೆದರೆ ಇಂತಹಾ ಮೂರ್ತಿಗಳು ಸಿಗುತ್ತವೆ ಎಂಬ ಹಲವಾರು ಬರಹಗಳು ಹರಿದಾಡಿತ್ತು.

ಕೃಪೆ: altnews.in

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News