ಈ ರಾಜ್ಯದ ಸರ್ಕಾರಿ ಉದ್ಯೋಗದಲ್ಲಿ ಮಹಿಳೆಯರಿಗೆ ಶೇ.40 ಮೀಸಲು

Update: 2021-09-14 05:06 GMT
ಪಳನಿವೇಲ್ ತ್ಯಾಗರಾಜನ್

ಚೆನ್ನೈ: ಸರ್ಕಾರಿ ಉದ್ಯೋಗದಲ್ಲಿ ಮಹಿಳೆಯರಿಗೆ ನೀಡುತ್ತಿದ್ದ ಮೀಸಲಾತಿಯನ್ನು ಶೇಕಡ 30 ರಿಂದ 40ಕ್ಕೆ ಹೆಚ್ಚಿಸಲು ತಮಿಳುನಾಡು ಸರ್ಕಾರ ನಿರ್ಧರಿಸಿದೆ. ಸೋಮವಾರ ವಿಧಾನಸಭೆಯಲ್ಲಿ ಈ ಘೋಷಣೆ ಮಾಡಿದ ರಾಜ್ಯ ಹಣಕಾಸು ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವ ಪಳನಿವೇಲ್ ತ್ಯಾಗರಾಜನ್, ಬದಲಾವಣೆಯನ್ನು ತಲುಪುವಲ್ಲಿ ಲಿಂಗಸಮಾನತೆ ಪ್ರಮುಖ ಪಾತ್ರ ವಹಿಸಲಿದೆ. ಮಹಿಳಾ ಮೀಸಲಾತಿಯನ್ನು ಹೆಚ್ಚಿಸುವ ಸಂಬಂಧ ಸರ್ಕಾರ ಕಾಯ್ದೆಗೆ ಅಗತ್ಯ ತಿದ್ದುಪಡಿ ತರಲಿದೆ ಎಂದು ಅವರು ಪ್ರಕಟಿಸಿದರು.

ಉದ್ಯೋಗ ಮತ್ತು ತರಬೇತಿ ಇಲಾಖೆ ಒದಗಿಸಿದ 2017-18ರ ಅಂಕಿ ಅಂಶಗಳ ಪ್ರಕಾರ, ರಾಜ್ಯ ಸರ್ಕಾರ, ರಾಜ್ಯ ಸರ್ಕಾರದ ಅಧೀನ ಸಂಸ್ಥೆಗಳು ಮತ್ತು ಸ್ಥಳೀಯ ಸಂಸ್ಥೆಗಳ ಒಟ್ಟು 8.8 ಲಕ್ಷ ಉದ್ಯೋಗಿಗಳ ಪೈಕಿ 2.92 ಲಕ್ಷ ಮಂದಿ ಮಹಿಳೆಯರು. ಸರ್ಕಾರಿ ಉದ್ಯೋಗಿಗಳ ಪೈಕಿ ಮಹಿಳೆಯರ ಪ್ರಮಾಣ ಶೇಕಡ 33 ಎಂದು ಅವರು ವಿವರಿಸಿದರು.

"ಪ್ರಸ್ತುತ ಹಂತದಲ್ಲಿ ಮಹಿಳೆಯರು ಸರ್ಕಾರಿ ಸೇವೆಯಲ್ಲಿ ಉತ್ತಮ ಸಂಖ್ಯೆಯಲ್ಲಿದ್ದಾರೆ. ಕೋಟಾ ವ್ಯವಸ್ಥೆ ಎಂದರೆ ಅದು ನೇರವಾಗಿ ಸಂಖ್ಯೆಯಾಗಿ ಪರಿವರ್ತನೆಯಾಗುತ್ತದೆ ಎಂಬ ಅರ್ಥವಲ್ಲ" ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಉನ್ನತ ಅಧಿಕಾರಿಯೊಬ್ಬರು ಹೇಳಿದರು.

ಮಹಿಳೆಯರು ಮೀಸಲಾತಿಯಡಿ ಹಾಗೂ ಪ್ರತಿಭೆ ಆಧಾರದಲ್ಲಿ ಸೇವೆಗೆ ಆಯ್ಕೆಯಾಗುತ್ತಾರೆ. ಅಂಗನವಾಡಿ ಸಿಬ್ಬಂದಿಯಿಂದ ಹಿಡಿದು ಮಧ್ಯಾಹ್ನದೂಟ ಕೇಂದ್ರಗಳ ಉದ್ಯೋಗಿಗಳು, ಶಿಕ್ಷಕರು, ಸಹಾಯಕರು, ಹಿರಿಯ ಅಧಿಕಾರಿಗಳು, ಮುಖ್ಯ ಎಂಜಿನಿಯರ್‌ಗಳು ಹಾಗೂ ಹೆಚ್ಚುವರಿ ಕಾರ್ಯದರ್ಶಿಗಳು ಹೀಗೆ ವಿವಿಧ ಹುದ್ದೆಗಳನ್ನು ಮಹಿಳೆಯರು ನಿಭಾಯಿಸುತ್ತಿದ್ದರೆ ಎಂದು ಸ್ಪಷ್ಟಪಡಿಸಿದರು.

ಮಾನವ ಸಂಪನ್ಮೂಲ ನಿರ್ವಹಣೆ ಇಲಾಖೆಯ ಅನುದಾನ ಬೇಡಿಕೆ ಕುರಿತ ಚರ್ಚೆಗೆ ಉತ್ತರಿಸಿದ ಸಚಿವರು, ಕೋವಿಡ್-19ನಿಂದ ಪೋಷಕರನ್ನು ಕಳೆದುಕೊಂಡ ಅನಾಥರು, ಮೊದಲ ಪೀಳಿಗೆಯ ಪದವೀಧರರು ಮತ್ತು ಸರ್ಕಾರಿ ಶಾಲೆಗಳ ತಮಿಳು ಮಾಧ್ಯಮ ವಿದ್ಯಾರ್ಥಿಗಳಿಗೆ ಸರ್ಕಾರಿ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವ ವೇಳೆ ಆದ್ಯತೆ ನೀಡುವುದಾಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News