ಪೌರತ್ವ ಪ್ರಮುಖ ಹಕ್ಕು: ವ್ಯಕ್ತಿಯನ್ನು ವಿದೇಶಿ ಎಂದು ಘೋಷಿಸಿದ್ದ ಆದೇಶವನ್ನು ತಳ್ಳಿಹಾಕಿದ ಗುವಾಹಟಿ ಹೈಕೋರ್ಟ್

Update: 2021-09-14 15:09 GMT

ಗುವಾಹಟಿ, ಸೆ.14: ಅಸ್ಸಾಮಿನ ಮೋರಿಗಾಂವ್ ಜಿಲ್ಲೆಯ ನಿವಾಸಿಯನ್ನು ವಿದೇಶಿ ಎಂದು ಘೋಷಿಸಿದ್ದ ವಿದೇಶಿಯರ ನ್ಯಾಯಾಧಿಕರಣದ ಏಕಪಕ್ಷೀಯ ಆದೇಶವನ್ನು ತಳ್ಳಿಹಾಕಿರುವ ಗುವಾಹಟಿ ಉಚ್ಚ ನ್ಯಾಯಾಲಯವು, ಪೌರತ್ವವು ವ್ಯಕ್ತಿಯ ಪ್ರಮುಖ ಹಕ್ಕು ಆಗಿದೆ ಎಂದು ಎತ್ತಿಹಿಡಿದಿದೆ.

ಏಕಪಕ್ಷೀಯ ಆದೇಶವು ಪ್ರಕರಣದಲ್ಲಿಯ ಎಲ್ಲ ಕಕ್ಷಿಗಳ ಅಹವಾಲುಗಳನ್ನು ಆಲಿಸದೆ ಹೊರಡಿಸುವ ಆದೇಶವಾಗಿದೆ. ತನ್ನ ಅನುಪಸ್ಥಿತಿಯಲ್ಲಿ ನಡೆದಿದ್ದ ವಿಚಾರಣೆಯಲ್ಲಿ ತನ್ನನ್ನು ವಿದೇಶಿ ಎಂದು ಘೋಷಿಸಿದ್ದ ಆದೇಶವನ್ನು ಪ್ರಶ್ನಿಸಿ ಮೋರಿಗಾಂವ್ ನಿವಾಸಿ ಅಸೂರುದ್ದೀನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಕೈಗೆತ್ತಿಕೊಂಡಿತ್ತು. ತನ್ನ ಕಕ್ಷಿದಾರರು ಸೌಲಭ್ಯವಂಚಿತರಾಗಿದ್ದಾರೆ ಮತ್ತು ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಲು ಅಥವಾ ತನ್ನ ವಕೀಲರನ್ನು ಸಂಪರ್ಕಿಸಲು ಅವರಿಗೆ ಸಾಧ್ಯವಾಗಿರಲಿಲ್ಲ ಎಂದು ಅಸೂರುದ್ದೀನ್ ಪರ ವಕೀಲ ಎಂ.ಎ.ಶೇಖ್ ಅವರು ನ್ಯಾಯಾಲಯಕ್ಕೆ ತಿಳಿಸಿದರು.

ತನ್ನ ಜೀವನೋಪಾಯಕ್ಕಾಗಿ ತಾನು ಅಸ್ಸಾಂ ತೊರೆದು ಕೇರಳಕ್ಕೆ ತೆರಳುವಂತಾಗಿತ್ತು ಎಂದೂ ಅರ್ಜಿದಾರರು ತಿಳಿಸಿದರು. ಅಸೂರುದ್ದೀನ್ ಗೈರು ಹಾಜರಿಯಿಂದಾಗಿ ನ್ಯಾಯಾಧಿಕರಣಕ್ಕೆ ತನ್ನ ಏಕಪಕ್ಷೀಯ ಆದೇಶದಲ್ಲಿ ಅವರನ್ನು ವಿದೇಶಿ ಎಂದು ಘೋಷಿಸುವುದನ್ನು ಬಿಟ್ಟು ಬೇರೆ ದಾರಿಯಿರಲಿಲ್ಲ ಎಂದು ವಿದೇಶಿಯರ ನ್ಯಾಯಾಲಯದ ಪರ ವಕೀಲರು ವಾದಿಸಿದರು.

ಪೌರತ್ವಕ್ಕೆ ಸಂಬಂಧಿಸಿದ ವಿಷಯಗಳನ್ನು ಸಾಮಾನ್ಯವಾಗಿ ಪೂರ್ವ ನಿಯೋಜಿತ ರೀತಿಯ ಬದಲು ಪ್ರಕರಣದ ಅರ್ಹತೆಯ ಆಧಾರದ ಮೇಲೆ ನಿರ್ಧರಿಸಬೇಕು ಎಂದು ಹೇಳಿದ ನ್ಯಾ.ಮನೀಷ ಚೌಧರಿ ನೇತೃತ್ವದ ಪೀಠವು,ಅರ್ಜಿದಾರರು 1965,1970 ಮತ್ತು 1971ರ ಮತದಾರರ ಪಟ್ಟಿಗಳನ್ನು ತನ್ನ ಗಮನಕ್ಕೆ ತಂದಿದ್ದಾರೆ ಮತ್ತು ಅವುಗಳಲ್ಲಿ ಅರ್ಜಿದಾರರು,ಅವರ ಹೆತ್ತವರು ಮತ್ತು ಅಜ್ಜ-ಅಜ್ಜಿ ಹೆಸರುಗಳನ್ನು ಉಲ್ಲೇಖಿಸಲಾಗಿದೆ. 

ಇವೆಲ್ಲ ನ್ಯಾಯಾಧಿಕರಣವು ಪರಿಗಣಿಸಬೇಕಾದ ವಾಸ್ತವಿಕ ಅಂಶಗಳಾಗಿವೆ ಎಂದು ಹೇಳಿತು.
ಆದಾಗ್ಯೂ ಅರ್ಜಿದಾರರಿಗೆ ಮೇಲ್ಕಂಡ ದಾಖಲೆಗಳನ್ನು ಸಾಬೀತುಗೊಳಿಸಲು ಸಾಧ್ಯವಾದರೆ ಖಂಡಿತವಾಗಿಯೂ ಅವರು ತಾನೋರ್ವ ಭಾರತೀಯ ಪ್ರಜೆ ಮತ್ತು ವಿದೇಶಿಯನಲ್ಲ ಎಂಬ ನ್ಯಾಯಯುತ ಹಕ್ಕುಸಾಧನೆ ಮಾಡಬಹುದು ಎಂದು ನ್ಯಾಯಾಲಯವು ಆದೇಶದಲ್ಲಿ ತಿಳಿಸಿದೆ.

ಹೊಸದಾಗಿ ಕಲಾಪಗಳಿಗಾಗಿ ನ.8ರಂದು ಅಥವಾ ಅದಕ್ಕೆ ಮೊದಲು ನ್ಯಾಯಾಧಿಕರಣದ ಮುಂದೆ ಹಾಜರಾಗುವಂತೆ ಉಚ್ಚ ನ್ಯಾಯಾಲಯವು ಅಸೂರುದ್ದೀನ್ಗೆ ನಿರ್ದೇಶವನ್ನು ನೀಡಿತು. ಆದರೆ ಅವರ ಪೌರತ್ವವು ಸಂಶಯದ ಸುಳಿಯಲ್ಲಿರುವುದರಿಂದ ನ್ಯಾಯಾಧಿಕರಣದ ಕಲಾಪಗಳ ಅವಧಿಯಲ್ಲಿ ಜಾಮೀನಿನಲ್ಲಿ ಇರಬೇಕಾಗುತ್ತದೆ ಎಂದು ಹೇಳಿತು.

15 ದಿನಗಳಲ್ಲಿ ಮೋರಿಗಾಂವ್ ಜಿಲ್ಲಾ ಪೊಲೀಸ್ ಅಧೀಕ್ಷಕರ ಮುಂದೆ ಹಾಜರಾಗಿ 5,000 ರೂ.ಗಳ ಜಾಮೀನು ಬಾಂಡ್ ಅನ್ನು ಸಲ್ಲಿಸುವಂತೆ ಅರ್ಜಿದಾರರಿಗೆ ನಿರ್ದೇಶ ನೀಡಿದ ನ್ಯಾಯಾಲಯವು,5,000 ರೂ.ಗಳ ಪ್ರತ್ಯೇಕ ವೆಚ್ಚವನ್ನು ವಿಧಿಸಿ ಅದನ್ನು ನ್ಯಾಯಾಧಿಕರಣಕ್ಕೆ ಪಾವತಿಸುವಂತೆ ಸೂಚಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News