×
Ad

ವರದಿ ಸಲ್ಲಿಸುವಂತೆ 4 ರಾಜ್ಯಗಳು, ಕೇಂದ್ರ ಸರಕಾರಕ್ಕೆ ಎನ್ಎಚ್ಆರ್‌ಸಿ ನಿರ್ದೇಶ

Update: 2021-09-14 23:16 IST

ಹೊಸದಿಲ್ಲಿ, ಸೆ. 14:  ರೈತರ ಪ್ರತಿಭಟನೆಗಳು ಕೈಗಾರಿಕೆ ಘಟಕಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡುತ್ತಿದೆ ಎಂಬ ಆರೋಪಗಳ ನಡುವೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್ಎಚ್ಆರ್ಸಿ) ದಿಲ್ಲಿ, ರಾಜಸ್ಥಾನ, ಹರ್ಯಾಣ, ಉತ್ತರಪ್ರದೇಶ ಸರಕಾರ ಹಾಗೂ ಕೇಂದ್ರ ಸರಕಾರಕ್ಕೆ ಸೋಮವಾರ ನೋಟಿಸು ಜಾರಿ ಮಾಡಿದೆ.

ಪ್ರತಿಭಟನೆಯಿಂದ 9,000ಕ್ಕೂ ಅಧಿಕ ಅತಿಸೂಕ್ಷ್ಮ, ಮಧ್ಯಮ ಹಾಗೂ ಬೃಹತ್ ಕಂಪೆನಿಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ ಎಂಬ ಆರೋಪವನ್ನು ಎನ್ಎಚ್ಆರ್ಸಿ ಸೋಮವಾರ ಉಲ್ಲೇಖಿಸಿದೆ. ಅಲ್ಲದೆ, ರೈತರ ಪ್ರತಿಭಟನೆ ಸಾರಿಗೆ ಮೇಲೆ ದುಷ್ಪರಿಣಾಮ ಉಂಟು ಮಾಡಿದೆ. ಇದರಿಂದ ಪ್ರಯಾಣಿಕರು, ರೋಗಿಗಳು, ಅಂಗವಿಕಲ ವ್ಯಕ್ತಿಗಳು ಹಾಗೂ ಹಿರಿಯ ನಾಗರಿಕರಿಗೆ ಅನಾನುಕೂಲ ಉಂಟಾಯಿತು ಎಂದು ಆಯೋಗ ಹೇಳಿದೆ.

ರೈತರ ಪ್ರತಿಭಟನೆಯಿಂದ ವಿವಿಧ ವಿಷಯಗಳ ಮೇಲೆ ಉಂಟಾದ ಪರಿಣಾಮ ಹಾಗೂ ಪ್ರತಿಭಟನಾ ಸ್ಥಳದಲ್ಲಿ ಕೋವಿಡ್ ನಿಯಮಾವಳಿಗಳ ಅನುಸರಣೆ ಕುರಿತು ವರದಿ ಸಲ್ಲಿಸುವಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಕೇಂದ್ರ ಗೃಹ ವ್ಯವಹಾರ ಹಾಗೂ ಆರೋಗ್ಯ ಸಚಿವರಿಗೆ ಎನ್ಎಚ್ಆರ್ಸಿ ನಿರ್ದೇಶಿಸಿದೆ.

ಪ್ರತಿಭಟನೆಯಿಂದ ಕೈಗಾರಿಕೆ, ವಾಣಿಜ್ಯ ಚಟುವಟಿಕೆಗಳು ಹಾಗೂ ಸಾರಿಗೆ ಮೇಲಾದ ಪರಿಣಾಮವನ್ನು ಅಂದಾಜಿಸುವಂತೆ ದಿಲ್ಲಿಯಲ್ಲಿರುವ ‘ಇನ್ಸ್ಟಿಟ್ಯೂಟ್ ಆಫ್ ಇಕಾನಾಮಿಕ್ ಗ್ರೋತ್’ಗೆ ಎನ್ಎಚ್ಆರ್ಸಿ ನಿರ್ದೇಶಿಸಿತ್ತು. ಅಕ್ಟೋಬರ್ 10ರ ಒಳಗೆ ಸಮಗ್ರ ವರದಿ ಸಲ್ಲಿಸುವಂತೆ ಕೂಡ ಸಂಸ್ಥೆಗೆ ಎನ್ಎಚ್ಆರ್ಸಿ ಸೂಚಿಸಿದೆ.

ಕೃಷಿ ಕಾಯ್ದೆಗಳ ವಿರುದ್ಧದ ಪ್ರತಿಭಟನೆಯಿಂದ ಜೀವನಾಧಾರಕ್ಕೆ ಉಂಟಾದ ಅಡ್ಡಿ ಹಾಗೂ ವೃದ್ಧರು, ಅಶಕ್ತ ವ್ಯಕ್ತಿಗಳ ಮೇಲಾದ ಪರಿಣಾಮದ ಬಗ್ಗೆ ಸಮೀಕ್ಷೆ ನಡೆಸಲು ತಂಡವೊಂದನ್ನು ನಿಯೋಜಿಸಲು ಎನ್ಎಚ್ಆರ್ಸಿ ದಿಲ್ಲಿ ಸ್ಕೂಲ್ ಆಫ್ ಸೋಷಿಯಲ್ ವರ್ಕ್ ಗೆ ಸೂಚಿಸಿದೆ.

ಪ್ರತಿಭಟನಾ ಸ್ಥಳದಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಮಾನವ ಹಕ್ಕುಗಳ ಹೋರಾಟಗಾರ್ತಿಯ ಸಂಬಂಧಿಕರಿಗೆ ಪರಿಹಾರ ಪಾವತಿಸುವ ಕುರಿತು ವರದಿ ಸಲ್ಲಿಸುವಂತೆ ಕೂಡ ಎನ್ಎಚ್ಆರ್ಸಿ ಝಝ್ಝೆರ್ ಜಿಲ್ಲಾ ದಂಡಾಧಿಕಾರಿಯವರಿಗೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News