ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ಸುಳ್ಯ ನ್ಯಾಯಾಲಯದಿಂದ ವಾರಂಟ್ ಜಾರಿ

Update: 2021-09-15 05:14 GMT

ಸುಳ್ಯ, ಸೆ.15: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂಧನ ಸಚಿವರಾಗಿದ್ದ ವೇಳೆ ವಿದ್ಯುತ್ ಸಮಸ್ಯೆ ಬಗ್ಗೆ ಹೇಳಲು ಕರೆ ಮಾಡಿದ್ದ ಬೆಳ್ಳಾರೆಯ ವ್ಯಕ್ತಿಯೊಬ್ಬರ ನಡುವೆ ಉಂಟಾಗಿದ್ದ ವಾಗ್ವಾದಕ್ಕೆ ಸಂಬಂಧಿಸಿ ಹಲವು ಬಾರಿ ಸಮನ್ಸ್‌ ಜಾರಿ ಮಾಡಿದ ಬಳಿಕವೂ ನ್ಯಾಯಾಲಯಕ್ಕೆ ಸಾಕ್ಷ್ಯ ನುಡಿಯಲು ಗೈರು ಹಾಜರಾದ ಡಿಕೆಶಿ ವಿರುದ್ಧ ಸುಳ್ಯ ನ್ಯಾಯಾಲಯವು ವಾರಂಟ್ ಜಾರಿ ಮಾಡಿದೆ.

ನ್ಯಾಯಾಲಯಕ್ಕೆ ಹಾಜರಾಗದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಧೀಶರು ಡಿ.ಕೆ.ಶಿವಕುಮಾರ್‌ ಅವರನ್ನ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಐಜಿಪಿ ಮತ್ತು ಡಿಐಜಿಗೆ ಕೂಡಾ ನೋಟಿಸ್ ಮಾಡುವಂತೆ ಆದೇಶಿಸಿದ್ದಾರೆ ಎಂದು ತಿಳಿದು ಬಂದಿದೆ. ಸೆ.29ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.

ಏನಿದು ಪ್ರಕರಣ?: ಸ್ಥಳೀಯವಾಗಿ ನಿರಂತರವಾಗಿ ಕಾಡುತ್ತಿದ್ದ ವಿದ್ಯುತ್ ಸಮಸ್ಯೆಯ ಬಗ್ಗೆ ಬೆಳ್ಳಾರೆಯ ವರ್ತಕರ ಸಂಘದ ಮಾಜಿ ಅಧ್ಯಕ್ಷ ಸಾಯಿ ಗಿರಿಧರ ರೈ ಎಂಬವರು 2016ರ ಫೆಬ್ರವರಿ 28ರಂದು ಅಂದು ಇಂಧನ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್‌ರಿಗೆ ಫೋನ್ ಮಾಡಿ ತಿಳಿಸಿದ್ದರು. ಈ ವೇಳೆ ಅವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಅವಾಚ್ಯ ಶಬ್ದಗಳ ಬಳಕೆ ಕೂಡ ಆಗಿತ್ತು  ಎಂದು ಹೇಳಲಾಗಿತ್ತು. ಈ ಸಂಬಂಧ ಸಚಿವ ಡಿಕೆಶಿಯವರು ಮೆಸ್ಕಾಂ ಎಂ.ಡಿ. ಮೂಲಕ ಆಗಿನ ಸುಳ್ಯ ಮೆಸ್ಕಾಂ ಪ್ರಭಾರ ಎ.ಇ.ಇ. ಹರೀಶ್ ನಾಯ್ಕ್ ರಿಂದ ಸಾಯಿ ಗಿರಿಧರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಕೇಸು ದಾಖಲಿಸಿಕೊಂಡಿದ್ದ ಪೊಲೀಸರು ಗಿರಿಧರ ರೈಯವರನ್ನು ಬಂಧಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿ ಡಿ.ಕೆ.ಶಿವಕುಮಾರ್ ಸಾಕ್ಷಿಯಾಗಿದ್ದು, ಸಾಕ್ಷ್ಯ ನುಡಿಯಲು ಅವರು ಸುಳ್ಯ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಅದಕ್ಕಾಗಿ ಅವರಿಗೆ 3 ಬಾರಿ ಸಮನ್ಸ್ ಮತ್ತು ಒಂದು ಬಾರಿ ವಾರಂಟ್ ಆಗಿತ್ತು. ಆದರೆ ಅವರು ನ್ಯಾಯಲಯಕ್ಕೆ ಹಾಜರಾಗಿರಲಿಲ್ಲ. ಇದೀಗ ಬಂದಿರುವ ಹೊಸ ನ್ಯಾಯಾಧೀಶರು ಡಿ.ಕೆ.ಶಿವಕುಮಾರ್‌ ಹಾಜರಾತಿಗಾಗಿ ಮತ್ತೊಮ್ಮೆ ಆದೇಶ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News