ಮಂಗಳೂರು: ಆಸ್ಕರ್ ಗೆ ಗಣ್ಯರಿಂದ ಅಂತಿಮ ಗೌರವ

Update: 2021-09-15 11:14 GMT

ಮಂಗಳೂರು, ಸೆ.15: ರಾಜ್ಯಸಭಾ ಸದಸ್ಯ, ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಆಸ್ಕರ್ ಫೆರ್ನಾಂಡಿಸ್ ಅವರ ಪಾರ್ಥಿವ ಶರೀರಕ್ಕೆ ನಗರದ ಮಿಲಾಗ್ರಿಸ್ ಚರ್ಚ್ ವಠಾರದಲ್ಲಿಂದು ಗಣ್ಯರ ಸಮ್ಮುಖದಲ್ಲಿ ಅಂತಿಮ ಗೌರವ ಸಲ್ಲಿಸಲಾಯಿತು.

ನನ್ನ ಅರ್ಧ ಜೀವವೇ ಹೋದಂತಾಯಿತು

ಇಂದು ಬೆಳಗ್ಗೆ ಮಾಜಿ ಸಚಿವ, ಕಾಂಗ್ರೆಸ್ ನ ಹಿರಿಯ ನಾಯಕ ಜನಾರ್ದನ ಪೂಜಾರಿಯವರು ಮಿಲಾಗ್ರಿಸ್ ಚರ್ಚ್ ಗೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು, "ಆಸ್ಕರ್ ಫೆರ್ನಾಂಡಿಸ್ ಅವರ ನಿಧನದ ಸುದ್ದಿ ತಿಳಿದು ನನ್ನ ಅರ್ಧ ಜೀವವೇ ಹೋದಂತಾಯಿತು" ಎಂದು ಕಂಬನಿ ಮಿಡಿದಿದ್ದಾರೆ.

ಹಿರಿಯ ಕಾಂಗ್ರೆಸ್ ಮುಖಂಡ ಎಚ್.ಕೆ.ಪಾಟೀಲ್, ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸಿರ್ ಹುಸೈನ್, ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥ್, ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿ ಅಂತಿಮ ನಮನ ಸಲ್ಲಿಸಿದರು.

ಈ ವೇಳೆ ಮಾಜಿ ಸಚಿವ ಬಿ.ರಮಾನಾಥ ರೈ,ಶಾಸಕ ಹಾಗೂ ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಶಾಸಕ ಯು.ಟಿ.ಖಾದರ್, ಮಾಜಿ ಶಾಸಕ ಐವನ್ ಡಿಸೋಜ, ಜೆ.ಆರ್.ಲೋಬೋ, ವಿವಿಧ ಕ್ರೈಸ್ತ ಧರ್ಮಪ್ರಾಂತದ ಧರ್ಮಗುರುಗಳು ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಇಂದು ಸಂಜೆ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ಕೊಂಡೊಯ್ಯಲಾಗುತ್ತದೆ. ಗುರುವಾರ ಬೆಳಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗುತ್ತದೆ. ಬಳಿಕ ಬೆಂಗಳೂರಿನ ಸೈಂಟ್ ಪ್ಯಾಟ್ರಿಕ್ ಚರ್ಚ್‌ನಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News