ಕೇಂದ್ರ ಸರಕಾರವು ತನ್ನ ಹೆಚ್ಚುತ್ತಿರುವ ಆದಾಯವನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳುತ್ತಿಲ್ಲ: ರಘುರಾಮ್ ರಾಜನ್

Update: 2021-09-15 09:10 GMT

ಹೊಸದಿಲ್ಲಿ: ಕೇಂದ್ರ ಸರಕಾರ ತನ್ನ ಹೆಚ್ಚುತ್ತಿರುವ ಆದಾಯವನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳುತ್ತಿಲ್ಲ ಎಂದು ಖ್ಯಾತ ಅರ್ಥಶಾಸ್ತ್ರಜ್ಞ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.

"ರಾಜ್ಯ ಸರಕಾರಗಳ ಆರ್ಥಿಕತೆಗಳು ಚೆನ್ನಾಗಿಲ್ಲ, ಆದರೆ ಕೇಂದ್ರ   ಸರಕಾರವು ಕೇಂದ್ರ ತೆರಿಗೆಗಳ ಮೂಲಕ ಆದಾಯದ ಹೆಚ್ಚಿನ ಪಾಲನ್ನು ಸ್ವಾಹಾ ಮಾಡಿದೆ" ಎಂದು ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದರು.

ಕೇಂದ್ರ ಸರಕಾರವೊಂದರಿಂದಲೇ ನಡೆಸುವುದಕ್ಕೆ ಭಾರತ  ಬಹಳಷ್ಟು ದೊಡ್ಡ ದೇಶವಾಗಿದೆ ಹಾಗೂ ದೇಶದ ಆರ್ಥಿಕ ಸ್ಥಿತಿಗಳಿಗೆ ಸಂಬಂಧಿಸಿದ ನಿರ್ಧಾರಗಳನ್ನು ವಿಳಂಬಿಸಲಾಗುತ್ತಿದೆ ಎಂದು ಅವರು ದೂರಿದರು.

"ಬಹಳಷ್ಟು ಜನರು ಮಾರ್ಗದರ್ಶನಕ್ಕಾಗಿ ಕೇಂದ್ರದತ್ತ ನೋಡುತ್ತಿದ್ದಾರೆ ಹಾಗೂ ಪಡೆಯುತ್ತಿಲ್ಲ, ತನ್ನ ಹೆಚ್ಚುತ್ತಿರುವ ಆದಾಯದ ಹೊರತಾಗಿಯೂ ಸರಕಾರ ಪ್ರಾಯಶಃ  ತನ್ನ ಕ್ರೆಡಿಟ್ ರೇಟಿಂಗ್‍ಗಳನ್ನು ಕಾಪಾಡುವ ಉದ್ದೇಶದಿಂದ ಖರ್ಚು ಮಾಡುತ್ತಿಲ್ಲ, ಆದರೆ ಕ್ರೆಡಿಟ್ ರೇಟಿಂಗ್ ಏಜನ್ಸಿಗಳೇ  ಅಗತ್ಯವಿರುವ ಕ್ಷೇತ್ರಗಳಲ್ಲಿ ಖರ್ಚು ಮಾಡಲು ಶಿಫಾರಸು ಮಾಡುತ್ತಿವೆ" ಎಂದು ಅವರು ಹೇಳಿದರು.

ಭಾರತೀಯರು ಚಿನ್ನ ಅಡಮಾನವಿಟ್ಟು ಸಾಲ ಪಡೆಯುವುದು ಹೆಚ್ಚುತ್ತಿದೆ ಎಂದು ಹೇಳಿದ ರಾಜನ್ "ತಮ್ಮ ಪರಿಸ್ಥಿತಿ ದಯನೀಯವಾದಾಗ ಮಾತ್ರ ಭಾರತೀಯರು ತಮ್ಮ ಕುಟುಂಬದ ಚಿನ್ನವನ್ನು ಮಾರಾಟ ಮಾಡುತ್ತಾರೆ" ಎಂದರಲ್ಲದೆ ಪರಿಸ್ಥಿತಿಯನ್ನು ಸುಧಾರಿಸಲು ನಗದು ಹಸ್ತಾಂತರಿಸುವ ಅಗತ್ಯವಿದೆ ಎಂದರು.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಮಾದರಿಯಲ್ಲಿಯೇ ನಗರ ಪ್ರದೇಶಗಳಲ್ಲಿ ಕೆಲಸ ಅರಸಿಕೊಂಡು ಬರುವವರಿಗೆ ಯೋಜನೆ ರೂಪಿಸಬೇಕು ಎಂದು ಅವರು ಹೇಳಿದರು.

"ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವ ನಗರ ಪ್ರದೇಶಗಳ ಜನರಿಗೆ  ಬೆಂಬಲ ದೊರೆಯದೇ ಇರುವುದರಿಂದ ಅವರು ಮರಳಿ ಹಳ್ಳಿಗಳಿಗೆ ಹೋಗುತ್ತಾರೆ, ಇದರಿಂದಾಗಿ ಕಾರ್ಮಿಕರ ಕೊರತೆ ಎದುರಾಗುತ್ತದೆ ಹಳ್ಳಿಗಳಿಗೆ ವಾಪಸಾದ ಜನರಿಗೆ ಅವರ ಸ್ಥಿತಿ ಉತ್ತಮಗೊಳ್ಳಲಿದೆ ಎಂಬ ಭರವಸೆ ನೀಡಿ ಮರಳಿ ಕರೆಸಿಕೊಳ್ಳುವುದು ಕಷ್ಟಕರ" ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News