ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಪರವಾಗಿ ನೀಟ್ ಪರೀಕ್ಷೆಗೆ ಹಾಜರಾದ ಆರು ಮಂದಿಯ ಬಂಧನ

Update: 2021-09-15 11:30 GMT

ಜೈಪುರ: ಬಾಲಿವುಡ್ ಚಲನಚಿತ್ರ 'ಮುನ್ನಾ ಭಾಯ್ ಎಂಬಿಬಿಎಸ್' ಅನ್ನು ನೆನಪಿಸುವ ಒಂದು ಆಘಾತಕಾರಿ ಪ್ರಕರಣದಲ್ಲಿ ಜೈಪುರ ಪೊಲೀಸರು ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಪರವಾಗಿ ನೀಟ್ ಪರೀಕ್ಷೆಗೆ ಹಾಜರಾದ ಆರು ವೈದ್ಯಕೀಯ ವಿದ್ಯಾರ್ಥಿ ಗಳನ್ನು ಬಂಧಿಸಿದ್ದಾರೆ ಎಂದು The New Indian Express ವರದಿ ಮಾಡಿದೆ.

ರವಿವಾರ ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು, ಹಿರಿಯ ವೈದ್ಯಕೀಯ ವಿದ್ಯಾರ್ಥಿಗಳು ಶ್ರೀಮಂತ ಕುಟುಂಬಗಳ ಓದಿನಲ್ಲಿ ಹಿಂದುಳಿದ ಅಭ್ಯರ್ಥಿಗಳ ಪರವಾಗಿ ಪರೀಕ್ಷೆ ಬರೆದು ಲಕ್ಷಾಂತರ ರೂಪಾಯಿಗಳನ್ನು ಪಡೆಯುತ್ತಿರುವ ವಿಚಾರವನ್ನು  ಪೊಲೀಸರು ಬಹಿರಂಗಪಡಿಸಿದ್ದಾರೆ.

ವೈದ್ಯಕೀಯ ಪ್ರವೇಶಕ್ಕಾಗಿ ನಡೆದ ನೀಟ್ ಪರೀಕ್ಷೆಯಲ್ಲಿ ವಂಚನೆಯ ಜಾಲವೊಂದನ್ನು ಪೊಲೀಸರು ಬಹಿರಂಗಪಡಿಸಿದ್ದು ಈ ಘಟನೆಯು ರಾಜಸ್ಥಾನವನ್ನು ಬೆಚ್ಚಿಬೀಳಿಸಿದೆ. ಜಾಲವನ್ನು ಭೇದಿಸಿದ ನಂತರ ಪೊಲೀಸರು 9 ಜನರನ್ನು ಬಂಧಿಸಿದ್ದಾರೆ.  ಅದರಲ್ಲಿ 6 ವೈದ್ಯಕೀಯ ವಿದ್ಯಾರ್ಥಿಗಳು ಸೇರಿದ್ದಾರೆ. ಅವರು ವೈದ್ಯರಾಗುವ ಬದಲು ಈಗ ಅಪರಾಧಿಗಳಾಗಿ ಮಾರ್ಪಟ್ಟಿದ್ದಾರೆ.

ವಂಚನೆ ಗ್ಯಾಂಗಿನ  ಪ್ರಮುಖ ಸದಸ್ಯ ರಾಜನ್ ರಾಜಗುರು. ಈತ  2010 ರಲ್ಲಿ ರಾಜಸ್ಥಾನ ಪೂರ್ವ ವೈದ್ಯಕೀಯ ಪರೀಕ್ಷೆಯಲ್ಲಿ ಎರಡನೇ ಅಗ್ರಸ್ಥಾನಿಯಾಗಿದ್ದ ಹಾಗೂ ಚಿತ್ತೋರ್ಗಡ ಜಿಲ್ಲೆಯಲ್ಲಿ ವೈದ್ಯಕೀಯ ಅಧಿಕಾರಿ ಹುದ್ದೆಯಲ್ಲೂ ಕೆಲಸ ಮಾಡಿದ್ದ.

 ಪೊಲೀಸರ ಪ್ರಕಾರ ಗ್ಯಾಂಗ್ ಪ್ರತಿ ಕಲಿಕೆಯಲ್ಲಿ ಹಿಂದುಳಿದಿರುವ  ವೈದ್ಯಕೀಯ ವಿದ್ಯಾರ್ಥಿಗಳಿಂದ 20 ರಿಂದ 25 ಲಕ್ಷ ರೂ. ಶುಲ್ಕ ವಿಧಿಸುತ್ತಿತ್ತು. ಅವರ ಪರವಾಗಿ ನೀಟ್ ಪರೀಕ್ಷೆಯನ್ನು ತೆಗೆದುಕೊಳ್ಳಲು ಉತ್ತಮ ಅರ್ಹ ವೈದ್ಯಕೀಯ ವಿದ್ಯಾರ್ಥಿಗಳನ್ನು ಕಳುಹಿಸುತ್ತಿತ್ತು.

ರಾಜಗುರು ವಿವಿಧ ಕೋಚಿಂಗ್ ಸೆಂಟರ್‌ಗಳಲ್ಲಿರುವ ಶ್ರೀಮಂತ ಕುಟುಂಬಗಳ ಮಕ್ಕಳನ್ನು ಗುರುತಿಸುತ್ತಾನೆ ಹಾಗೂ  ವೈದ್ಯಕೀಯ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗುವಂತೆ ವ್ಯವಸ್ಥೆ ಮಾಡುತ್ತಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆತ ತನ್ನ ಜಾಲವನ್ನು ದೇಶದಾದ್ಯಂತ ಹರಡಿದ್ದ ಎನ್ನಲಾಗಿದೆ.

ಅಜ್ಮೀರ್ ರೇಂಜ್ ನ ಐಜಿ ಎಸ್. ಸೆಂಗತಿರ್ ನೇತೃತ್ವದ  ವಿಶೇಷ ತಂಡವು ಜಾಲವನ್ನು ಭೇದಿಸಲು ಕಾರ್ಯಾಚರಣೆ ನಡೆಸಿತು. ಈ ತಂಡವು ಜೈಪುರ, ದಿಲ್ಲಿ ಹಾಗೂ ಕೋಟದಿಂದ ಒಟ್ಟು 13 ಜನರನ್ನು ಬಂಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News