ನಟ ಸೋನು ಸೂದ್‌ ರ ಮುಂಬೈ ಕಚೇರಿಯಲ್ಲಿ ಆದಾಯ ತೆರಿಗೆ ಇಲಾಖೆಯಿಂದ ʼಸಮೀಕ್ಷೆʼ

Update: 2021-09-15 18:28 GMT

ಹೊಸದಿಲ್ಲಿ, ಸೆ.16: ಬಾಲಿವುಡ್ ನಟ ಸೋನು ಸೂದ್ ಜೊತೆ ನಂಟಿರುವ ಮುಂಬೈನ ಆರು ಸ್ಥಳಗಳನ್ನು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಬುಧವಾರ ತಪಾಸಣೆ ನಡೆಸಿದ್ದಾರೆಂದು ಮೂಲಗಳು ತಿಳಿಸಿವೆ.

ದಿಲ್ಲಿಯ ಆಮ್ ಆದ್ಮಿ ಸರಕಾರವು ಶಾಲಾ ವಿದ್ಯಾರ್ಥಿಗಳಿಗಾಗಿ ಪ್ರಾಯೋಜಿಸಿರುವ ‘ಮಾರ್ಗದರ್ಶನ’ ಕಾರ್ಯಕ್ರಮದಲ್ಲಿ ಸೋನ್ ಸೂದ್ ಅವರು ಪ್ರಚಾರ ರಾಯಭಾರಿಯಾಗಿ ಆಯ್ಕೆಯಾದ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆ ಈ ಸಮೀಕ್ಷೆಯನ್ನು ನಡೆಸಿದೆ. ಪ್ರಚಾರ ರಾಯಭಾರಿಯಾಗಿ ಆಯ್ಕೆಯನ್ನು ಘೋಷಿಸಿದ ಬಳಿಕ ನಡೆದ ಪತ್ರಿಕಾಗೋಷ್ಛಿಯಲ್ಲಿ ಮಾತನಾಡಿದ ಸೋನು ಸೂದ್ ಅವರನ್ನು ಆಪ್ ಅಥವಾ ಇತರ ಯಾವುದೇ ರಾಜಕೀಯ ಸೇರುವ ಸಾಧ್ಯತೆಯ ಬಗ್ಗೆ ಪ್ರಶ್ನಿಸಿದಾಗ ಅವರು ಉತ್ತರಿಸಲು ನಿರಾಕರಿಸಿದರು.

48 ವರ್ಷದ ಸೋನು ಸೂದ್ ಅವರು ಕಳೆ ದ ವರ್ಷ ಕೋವಿಡ್ ಸಾಂಕ್ರಾಮಿಕದ ಹಾವಳಿಯ ಸಂದರ್ಭ ತನ್ನ ಸೇವಾಕಾರ್ಯಗಳಿಂದಾಗಿ ದೇಶಾದ್ಯಂತ ಗಮನಸೆಳೆದಿದ್ದಾರೆ. ಕಳೆದ ವರ್ಷ ಕೇಂದ್ರ ಸರಕಾರ ಲಾಕ್ಡೌನ್ ಘೋಷಿಸಿದಾಗ ಉದ್ಯೋಗವಿಲ್ಲದೆ ನಗರಗಳಲ್ಲಿ ಸಿಲುಕಿಕೊಂಡಿದ್ದ ವಲಸಿಗರಿಗೆ ವಿಮಾನಗಳ ಮೂಲಕ ಅವರ ಊರುಗಳನ್ನು ತಲುಪಲು ಅವರು ನೆರವಾಗಿದ್ದರು. ಸೋನು ಸೂದ್ ಅವರು ತನ್ನ ಮಾನವೀಯ ಕಾರ್ಯಗಳಿಂದಾಗಿ ಅವರಿಗೆ ಅಭಿಮಾನಿಗಳ ದೊಡ್ಡ ಬಳಗವೇ ಸೃಷ್ಟಿಯಾಗಿದೆ. ಪ್ರತಿ ದಿನವೂ ಹಣವೂ ಸೇರಿದಂತೆ ವಿವಿಧ ರೀತಿಯ ನೆರವನ್ನು ಕೋರಿ ಮನವಿಗಳ ಮಹಾಪೂರವೇ ಹರಿದುಬರುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News