ಕೋವಿಡ್ ಸಂಶೋಧನಾ ವರದಿಯನ್ನು ಪ್ರಧಾನಿ ಮೋದಿ ಇಚ್ಛಿಸಿದಂತೆ ಸಿದ್ಧಪಡಿಸಿದ್ದ ಐಸಿಎಂಆರ್: ನ್ಯೂಯಾರ್ಕ್‌ ಟೈಮ್ಸ್‌ ವರದಿ

Update: 2021-09-15 12:13 GMT
ಬಲರಾಂ ಭಾರ್ಗವ್‌ Photo: ICMR/Facebook

ಹೊಸದಿಲ್ಲಿ,ಸೆ.15: ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಯ ಉನ್ನತ ನಾಯಕತ್ವವು ಕೋವಿಡ್ ಹರಡುವಿಕೆ ಮತ್ತು ಅದರ ಸಂಭವನೀಯ ಪಥದ ಕುರಿತು ಸಂಶೋಧನಾ ವರದಿಯನ್ನು ಪ್ರಧಾನಿ ನರೇಂದ್ರ ಮೋದಿಯವರ ಅಜೆಂಡಾಕ್ಕೆ ಅನುಗುಣವಾಗಿ ಸಿದ್ಧಗೊಳಿಸಿತ್ತು ಮತ್ತು ಸಾಂಕ್ರಾಮಿಕವು ಒಡ್ಡಿದ ಬೆದರಿಕೆಯನ್ನು ಕಡೆಗಣಿಸುವಂತೆ ವಿಜ್ಞಾನಿಗಳ ಮೇಲೆ ಒತ್ತಡ ಹೇರಿತ್ತು ಎಂದು ಸ್ಫೋಟಕ ವರದಿಯೊಂದರಲ್ಲಿ ನ್ಯೂಯಾರ್ಕ್ ಟೈಮ್ಸ್ (ಎನ್ವೈಟಿ) ಬಹಿರಂಗಗೊಳಿಸಿದೆ.

ಐಸಿಎಂಆರ್ ವಿಜ್ಞಾನ ಮತ್ತು ಪುರಾವೆಗಳಿಗಿಂತ ಮಿಗಿಲಾಗಿ ಸರಕಾರದ ರಾಜಕೀಯ ಗುರಿಗಳಿಗೆ ಹೆಚ್ಚಿನ ಆದ್ಯತೆ ನೀಡಿತ್ತು ಎನ್ನುವುದಕ್ಕೆ ಎನ್ವೈಟಿ ಹೆಚ್ಚಿನ ಸಾಕ್ಷಾಧಾರಗಳನ್ನು ಒದಗಿಸಿದೆ. ಕೋವಿಡ್ ಸಾಂಕ್ರಾಮಿಕ ಆರಂಭಗೊಂಡ ಕೆಲವೇ ತಿಂಗಳುಗಳಲ್ಲಿ ತನ್ನ ಹಲವಾರು ತಪ್ಪುಹೆಜ್ಜೆಗಳಿಗಾಗಿ ಐಸಿಎಂಆರ್ ತೀವ್ರ ಟೀಕೆಗಳಿಗೆ ಗುರಿಯಾಗಿತ್ತು.

ತಾವು ಮೇಲಧಿಕಾರಿಗಳನ್ನು ಪ್ರಶ್ನಿಸಿದರೆ ತಾವು ಅವಕಾಶಗಳನ್ನು ಕಳೆದುಕೊಳ್ಳುತ್ತೇವೆ ಎನ್ನುವ ಚಿಂತೆ ಸಂಶೋಧಕರಲ್ಲಿ ಮನೆ ಮಾಡಿದ್ದು,ಐಸಿಎಂಆರ್ನಲ್ಲಿ ‘ಮೌನ ಸಂಸ್ಕೃತಿ ’ಇದೆ ಎಂದು ವಿಜ್ಞಾನಿಗಳು ಬಣ್ಣಿಸಿದ್ದಾರೆ.

ನ್ಯೂಯಾರ್ಕ್‌ ಟೈಮ್ಸ್ ವರದಿಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಪ್ರಯತ್ನವಾಗಿ ಸುದ್ದಿ ಜಾಲತಾಣ ‘ದಿ ವೈರ್’ ಐಸಿಎಂಆರ್ ನ ಮಾಜಿ ವಿಜ್ಞಾನಿ ಅನೂಪ್ ಅಗರವಾಲ್ ಅವರನ್ನು ಸಂಪರ್ಕಿಸಿತ್ತು. ಭಾರತದಲ್ಲಿ ಕೋವಿಡ್ ಹೇಗೆ ವಿಕಸನಗೊಳ್ಳಬಹುದು ಎನ್ನುವುದನ್ನು ತಿಳಿದುಕೊಳ್ಳಲು ಗಣಿತೀಯ ಮಾದರಿಯಾದ ‘ಸೂಪರ್ ಮಾಡೆಲ್’ ಕುರಿತು ತನ್ನ ಕಳವಳವನ್ನು ಐಸಿಎಂಆರ್ ನ ಮಹಾ ನಿರ್ದೇಶಕ ಬಲರಾಮ ಭಾರ್ಗವ ಅವರ ಬಳಿ ತಾನು ಪ್ರಸ್ತಾಪಿಸಿದಾಗ ‘ಈ ಬಗ್ಗೆ ನೀವು ಕಾಳಜಿ ಪಡಬೇಕಿಲ್ಲ ’ಎಂದು ಅವರು ತನಗೆ ಹೇಳಿದ್ದರೆಂದು ಅನೂಪ್ ಅಗರವಾಲ್ ಅವರನ್ನು ಉಲ್ಲೇಖಿಸಿ ದಿ ವೈರ್ ತನ್ನ ವರದಿಯಲ್ಲಿ ತಿಳಿಸಿದೆ.

2020 ಅಕ್ಟೋಬರ್ನಲ್ಲಿ ಐಸಿಎಂಆರ್ ನ ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರೀಸರ್ಚ್ನಲ್ಲಿ ಪ್ರಕಟಗೊಂಡಿದ್ದ ಸೂಪರ್ ಮಾಡೆಲ್,ಭಾರತದಲ್ಲಿ ಸಾಂಕ್ರಾಮಿಕವು 2020 ಸೆಪ್ಟೆಂಬರ್ ನಲ್ಲಿಯೇ ಉತ್ತುಂಗವನ್ನು ದಾಟಿದೆ ಮತ್ತು ಈಗಾಗಲೇ ಅಸ್ತಿತ್ವದಲ್ಲಿರುವ ಸುರಕ್ಷತಾ ಶಿಷ್ಟಾಚಾರಗಳನ್ನು ಪಾಲಿಸಿದರೆ 2021,ಫೆಬ್ರವರಿ ವೇಳೆಗೆ ವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ಭಾರತಕ್ಕೆ ಸಾಧ್ಯವಾಗಲಿದೆ ಎಂದು ಹೇಳಿತ್ತು.

ಸ್ವತಂತ್ರ ತಜ್ಞರು ನಂತರ ಈ ಅಧ್ಯಯನ ವರದಿಯನ್ನು ಟೀಕಿಸಿದ್ದರೂ,ಆರ್ಥಿಕತೆಯನ್ನು ಪುನರಾರಂಭಿಸಲು ಮತ್ತು ಬಿಹಾರದಲ್ಲಿ ಚುನಾವಣಾ ಅಭಿಯಾನವನ್ನು ಆರಂಭಿಸಲು ಮೋದಿಯವರ ಉತ್ಸುಕತೆಯನ್ನು ಬೆಂಬಲಿಸಲು ಐಸಿಎಂಆರ್ ವರದಿಯನ್ನು ತ್ವರಿತವಾಗಿ ಸಿದ್ಧಗೊಳಿಸಿತ್ತು ಎಂದು ಎನ್ವೈಟಿ ತನ್ನ ವರದಿಯಲ್ಲಿ ಹೇಳಿದೆ.

ಮೋದಿ ಸೇರಿದಂತೆ ಹಿರಿಯ ಸರಕಾರಿ ಅಧಿಕಾರಿಗಳು ಸೂಪರ್ ಮಾಡೆಲ್ ನೀಡಿದ್ದ ಆಶಾದಾಯಕ ಚಿತ್ರಣದ ಬಗ್ಗೆ ಹೇಳಿಕೊಂಡಿದ್ದರು. ಕೋವಿಡ್ ವಿರುದ್ಧದ ಭಾರತದ ಹೋರಾಟ ಇಡೀ ವಿಶ್ವಕ್ಕೆ ಸ್ಫೂರ್ತಿ ನೀಡಿದೆ ಎಂದು ಮೋದಿ 2021 ಫೆಬ್ರವರಿಯಲ್ಲಿ ಹೇಳಿದ್ದರು. ಆದರೆ ಎರಡೇ ತಿಂಗಳುಗಳಲ್ಲಿ ವಿನಾಶಕಾರಿ ಎರಡನೇ ಅಲೆಯ ನಡುವೆ ಭಾರತವು ದಾಖಲೆಯ ಸಂಖ್ಯೆಯಲ್ಲಿ ಕೋವಿಡ್ ಪ್ರಕರಣಗಳನ್ನು ವರದಿ ಮಾಡಿತ್ತು. ಲಕ್ಷಾಂತರ ಜನರು ಬಲಿಯಾಗಿದ್ದು,ಹಲವಾರು ಜನರು ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು. 

ಭಾರತದಾದ್ಯಂತ ಕೋವಿಡ್ ಹರಡುವಿಕೆಗೆ ದಿಲ್ಲಿಯಲ್ಲಿ ನಡೆದಿದ್ದ ತಬ್ಲಿಘಿ ಜಮಾಅತ್ ಸಮಾವೇಶ ಮುಖ್ಯ ಕಾರಣವಾಗಿತ್ತು ಎಂದು ಸರಕಾರವು ಆರೋಪಿಸುವುದರೊಂದಿಗೆ ಐಸಿಎಂಆರ್ ವಿಧಾನದ ಮೇಲೆ ರಾಜಕೀಯ ಪ್ರಭಾವವು ಕಳೆದ ವರ್ಷದ ಶುರುವಿನಲ್ಲಿಯೇ ಆರಂಭಗೊಂಡಿತ್ತು ಎಂದು ಎನ್ವೈಟಿ ಬೆಟ್ಟು ಮಾಡಿದೆ.
 
ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಸರಕಾರದ ಹೇಳಿಕೆಗಳ ಬಗ್ಗೆ ತಾನು ನೋವನ್ನು ವ್ಯಕ್ತಪಡಿಸಿದ್ದೆ ಎಂದು ಆಗ ಐಸಿಎಂಆರ್ನಲ್ಲಿ ಮುಖ್ಯ ವಿಜ್ಞಾನಿಯಾಗಿದ್ದ ರಮಣ ಗಂಗಾಖೇಡ್ಕರ್ ಅವರು ಎನ್ವೈಟಿಗೆ ತಿಳಿಸಿದ್ದಾರೆ. ಆದಾಗ್ಯೂ ‘ನೀವು ಈ ವಿಷಯದಲ್ಲಿ ಕಳವಳ ಪಡಬಾರದು ’ಎಂದು ಭಾರ್ಗವ ತನಗೆ ಹೇಳಿದ್ದರು ಎಂದೂ ಅವರು ಬಯಲುಗೊಳಿಸಿದ್ದಾರೆ.

ಸರಕಾರದ ಆಶಾವಾದಕ್ಕೆ ವ್ಯತಿರಿಕ್ತವಾಗಿದ್ದ ಮತ್ತು ಎರಡನೇ ಅಲೆಯ ಬಗ್ಗೆ ಎಚ್ಚರಿಕೆ ನೀಡಿದ್ದ ಮೂರು ಅಧ್ಯಯನಗಳನ್ನು ಐಸಿಎಂಆರ್ನ ಉನ್ನತ ನಾಯಕತ್ವವು ಸಂಸ್ಥೆಯಿಂದ ಪ್ರತ್ಯೇಕಗೊಳಿಸಿದ್ದ ಮೂರು ನಿದರ್ಶನಗಳನ್ನೂ ಎನ್ವೈಟಿ ವರದಿ ಉಲ್ಲೇಖಿಸಿದೆ.

ಹಲವಾರು ನಗರಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿದೆ ಎಂದು ತೋರಿಸಿದ್ದ ದೇಶದ ಮೊದಲ ಸೆರೊಪ್ರಿವೇಲನ್ಸ್ ದತ್ತಾಂಶಗಳನ್ನು ತಡೆಹಿಡಿಯುವಂತೆಯೂ ಭಾರ್ಗವ ಅವರು 2020ರ ಕೊನೆಯ ಭಾಗದಲ್ಲಿ ವಿಜ್ಞಾನಿಗಳಿಗೆ ನಿರ್ದೇಶ ನೀಡಿದ್ದರು ಎನ್ನುವುದನ್ನು ವರದಿಯು ಬೆಟ್ಟು ಮಾಡಿದೆ.

ಪ್ಲಾಸ್ಮಾ ಥೆರಪಿ ಮತ್ತು ಹೈಡ್ರಾಕ್ಸಿಕ್ಲೋರೊಕ್ವಿನ್ ಬಳಕೆಯಂತಹ ಪರಿಣಾಮಕಾರಿಯಲ್ಲದ ಕೋವಿಡ್ ಚಿಕಿತ್ಸೆಗಳಿಗೆ ಐಸಿಎಂಆರ್ನ ಶಿಫಾರಸುಗಳ ವಿರುದ್ಧ ತಾವು ಧ್ವನಿಯೆತ್ತಿರಲಿಲ್ಲ,ಏಕೆಂದರೆ ಇವೆಲ್ಲ ಮಾರ್ಗಗಳು ರಾಜಕೀಯ ರಕ್ಷಣೆಯನ್ನು ಹೊಂದಿದ್ದವು ಎಂದು ತಾವು ಪರಿಗಣಿಸಿದ್ದೆವು ಎಂದು ಹಾಲಿ ಮತ್ತು ಮಾಜಿ ಐಸಿಎಂಆರ್ ವಿಜ್ಞಾನಿಗಳು ಎನ್ಟಿವೈಗೆ ತಿಳಿಸಿದ್ದಾರೆ.

ಕೃಪೆ: thewire.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News