ಭಾರತದಲ್ಲಿ ಪತ್ರಕರ್ತರ ಮೇಲೆ ಒತ್ತಡ, ಯುಎಪಿಎ ಬಳಕೆಯನ್ನು ಖಂಡಿಸಿದ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಆಯುಕ್ತೆ

Update: 2021-09-15 12:19 GMT

ಹೊಸದಿಲ್ಲಿ:  ಜಮ್ಮು ಕಾಶ್ಮೀರದಲ್ಲಿ ಪತ್ರಕರ್ತರ ಮೇಲೆ ಹೇರಲಾಗುತ್ತಿರುವ ಒತ್ತಡ, ಯುಎಪಿಎ ಬಳಕೆ ಮತ್ತು ಆಗಾಗ ತಾತ್ಕಾಲಿಕ ಇಂಟರ್ನೆಟ್ ಸ್ಥಗಿತದಂತಹ ಕ್ರಮಗಳನ್ನು ಕೈಗೊಳ್ಳುತ್ತಿರುವುದಕ್ಕೆ  ಭಾರತ ಸರಕಾರವನ್ನು ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಆಯುಕ್ತೆ ಮಿಶೆಲ್ ಬಾಶೆಲೇ  ಖಂಡಿಸಿದ್ದಾರೆ.

"ಭಾರತದಲ್ಲಿ ಯುಎಪಿಎ ಬಳಕೆ ಆತಂಕಕಾರಿ ಹಾಗೂ ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಚಲಾಯಿಸಿದ್ದಕ್ಕೆ ಭಾರತದಲ್ಲಿ ನೂರಾರು ಜನರು ಜೈಲಿನಲ್ಲಿದ್ದಾರೆ" ಎಂದು ಅವರು ಹೇಳಿದ್ದಾರೆ.

ಜಿನೇವಾದಲ್ಲಿ ನಡೆದ  ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ 48ನೇ ಅಧಿವೇಶನದಲ್ಲಿನ ತಮ್ಮ ಆರಂಭಿಕ ಹೇಳಿಕೆಯಲ್ಲಿ ಮಿಶೆಲ್ ಮೇಲಿನಂತೆ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರವಾದವನ್ನು ಮಟ್ಟ ಹಾಕಲು ಹಾಗೂ ಅಲ್ಲಿ ಅಭಿವೃದ್ಧಿಗೆ ಪ್ರೋತ್ಸಾಹಿಸಲು ಭಾರತ ಸರಕಾರದ ಕ್ರಮಗಳನ್ನು ಶ್ಲಾಘಿಸಿದ ಅವರು ಅದೇ ಸಮಯ "ನಿರ್ಬಂಧಕಾರಿ ಕ್ರಮಗಳು ಮಾನವ ಹಕ್ಕುಗಳ ಉಲ್ಲಂಘನೆಗಳು ಹಾಗೂ ಇನ್ನಷ್ಟು ಉದ್ವಿಗ್ನತೆ ಮತ್ತು ಅಸಮಾಧಾನಕ್ಕೆ ಕಾರಣವಾಗಬಹುದು" ಎಂದಿದ್ದಾರೆ.

"ಭಾರತದಾದ್ಯಂತ ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯಿದೆಯ ಬಳಕೆ ಹಾಗೂ ಈ ನಿಟ್ಟಿನಲ್ಲಿ ಜಮ್ಮು ಕಾಶ್ಮೀರದಲ್ಲಿ ಅತ್ಯಧಿಕ ಪ್ರಕರಣಗಳಿರುವುದು ಆತಂಕಕಾರಿ" ಎಂದು ಅವರು ಹೇಳಿದ್ದಾರೆ.

ಆಕೆಯ ಹೇಳಿಕೆಗಳ ಕುರಿತು ಭಾರತ ಇನ್ನೂ ಪ್ರತಿಕ್ರಿಯಿಸಿಲ್ಲ ಆದರೆ ಈ ಹಿಂದೆ ಆಕೆ ಜಮ್ಮು ಮತ್ತು ಕಾಶ್ಮೀರ ಕುರಿತು ಮಾಡಿದ್ದ ಹಲವಾರು ಟೀಕೆಗಳನ್ನು ಭಾರತ ಸರ್ಕಾರ ಕಟು ಶಬ್ದಗಳಲ್ಲಿ ಖಂಡಿಸಿತ್ತು ಎಂಬುದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News