ಪಾಕ್ ಸಂಘಟಿತ ಭಯೋತ್ಪಾದಕ ಘಟಕದ ಸಂಪರ್ಕ ಶಂಕೆಯಲ್ಲಿ ಬಂಧಿತ ಇಬ್ಬರ ಬಿಡುಗಡೆ
ಹೊಸದಿಲ್ಲಿ: ಪಾಕ್ ಸಂಘಟಿತ ಭಯೋತ್ಪಾದಕ ಘಟಕದೊಂದಿಗೆ ಸಂಪರ್ಕ ಹೊಂದಿದ್ದ ಶಂಕೆಯ ಮೇರೆಗೆ ಬಂಧನಕ್ಕೊಳಗಾಗಿದ್ದ ಇಬ್ಬರನ್ನು ದಿಲ್ಲಿ ಪೊಲೀಸ್ ವಿಶೇಷ ಸೆಲ್ ಬುಧವಾರ ಬಿಡುಗಡೆ ಮಾಡಿದೆ.
ಪ್ರಾಥಮಿಕ ವಿಚಾರಣೆಯ ವೇಳೆ ಅವರ ವಿರುದ್ಧ ಯಾವುದೇ ಪುರಾವೆಗಳು ಕಂಡುಬಂದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ANI ವರದಿ ಮಾಡಿದೆ.
ಶಂಕಿತರಾದ ಇಮ್ತಿಯಾಝ್ ಹಾಗೂ ಮುಹಮ್ಮದ್ ಜಲೀಲ್ ಅವರಿಂದ ನಮಗೆ ಯಾವುದೇ ಮಾಹಿತಿ ಲಭಿಸಿಲ್ಲ. ಹಾಗಾಗಿ, ನಾವು ಅವರನ್ನು ಇಂದು ಬಿಡುಗಡೆ ಮಾಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ಇನ್ನೊಬ್ಬ ಶಂಕಿತನಾದ ತಾಹಿರ್ ನನ್ನು ಪೋಲಿಸರು ಪತ್ತೆ ಹಚ್ಚಿಲ್ಲ ಎಂದು ವರದಿಯಾಗಿದೆ.
ಮಂಗಳವಾರ, ದಿಲ್ಲಿ ಪೋಲಿಸ್ ಸ್ಪೆಷಲ್ ಸೆಲ್ ಪಾಕಿಸ್ತಾನ ಸಂಘಟಿತ ಭಯೋತ್ಪಾದನಾ ಘಟಕವನ್ನು ಭೇದಿಸಿತ್ತು ಹಾಗೂ ಇಬ್ಬರು ಪಾಕಿಸ್ತಾನದಿಂದ ತರಬೇತಿ ಪಡೆದ ಭಯೋತ್ಪಾದಕರು ಸೇರಿದಂತೆ ಆರು ಮಂದಿ ಆರೋಪಿಗಳನ್ನು ಬಂಧಿಸಿತ್ತು ಎಂದು ವರದಿಯಾಗಿತ್ತು.
ಬಂಧಿತ ಶಂಕಿತರು ದೇಶಾದ್ಯಂತ ಉದ್ದೇಶಿತ ಹತ್ಯೆಗಳು ಹಾಗೂ ಸ್ಫೋಟಗಳನ್ನು ನಡೆಸಲು ಯೋಜಿಸುತ್ತಿದ್ದರು. ಹೆಚ್ಚುವರಿಯಾಗಿ, ಬಹುರಾಜ್ಯ ಕಾರ್ಯಾಚರಣೆಯಲ್ಲಿ ಬಂಧಿತರಿಂದ ಸ್ಫೋಟಕಗಳು ಹಾಗೂ ಬಂದೂಕುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ANI ಗೆ ಮಾಹಿತಿ ನೀಡಿದರು.