ದಿಲ್ಲಿಯ ಮಾಜಿ ಕೌನ್ಸಿಲರ್ ತಾಹಿರ್ ಹುಸೈನ್ ಪ್ರಕರಣದ ವಿಚಾರಣೆ ಮುಂದೂಡಿಕೆ ಕೋರಿಕೆಯನ್ನು ತಿರಸ್ಕರಿಸಿದ ಕೋರ್ಟ್

Update: 2021-09-16 07:59 GMT
ತಾಹಿರ್ ಹುಸೈನ್ (Twitter | @tahirhussainaap)

ಹೊಸದಿಲ್ಲಿ: ಈಶಾನ್ಯ ದಿಲ್ಲಿ ಹಿಂಸಾಚಾರ ಪ್ರಕರಣದಲ್ಲಿ ಆರೋಪಿಯೆಂದು ಹೆಸರಿಸಲಾಗಿರುವ ಮಾಜಿ ಆಪ್ ಕೌನ್ಸಿಲರ್ ತಾಹಿರ್ ಹುಸೈನ್ ವಿರುದ್ಧದ ಆರೋಪಗಳ ಕುರಿತಾದ ವಾದ ಮಂಡನೆಯನ್ನು ಮುಂದೂಡುವಂತೆ ಪ್ರಾಸಿಕ್ಯೂಶನ್ ಅಪೀಲನ್ನು ತಿರಸ್ಕರಿಸಿದ ದಿಲ್ಲಿಯ ನ್ಯಾಯಾಲಯ "ಸತ್ಯ ಕೊನೆಗೆ ಹೊರಬರಲಿದೆ,'' ಎಂದು ಹೇಳಿದೆ ಎಂದು indianexpress.com ವರದಿ ಮಾಡಿದೆ.

ಪೂರಕ ಚಾರ್ಜ್‍ಶೀಟ್ ಸಲ್ಲಿಸಬೇಕಿದೆ ಎಂಬ ಕಾರಣ ಮುಂದೊಡ್ಡಿ ಪ್ರಾಸಿಕ್ಯೂಶನ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ವಿನೋದ್ ಯಾದವ್, “ತಮ್ಮ ಕಕ್ಷಿಗಾರರು ಒಂದು ವರ್ಷಕ್ಕೂ ಹೆಚ್ಚು ಸಮಯ ಜೈಲಿನಲ್ಲಿದ್ದಾರೆ ಹಾಗೂ ಕಷ್ಟ ಅನುಭವಿಸುತ್ತಿದ್ದಾರೆ ಎಂದು ಪ್ರತಿವಾದಿ ವಕೀಲರು ಹೇಳಿದ್ದಾರೆ,'' ಎಂದು ಹೇಳಿದರು.

ಫೆಬ್ರವರಿ 25, 2020ರಂದು ಹುಸೈನ್ ಅವರ ಮನೆಯ ಟೆರೇಸಿನಲ್ಲಿದ್ದ ಗುಂಪೊಂದು ಕಲ್ಲು ತೂರಾಟ ನಡೆಸಿ ಪೆಟ್ರೋಲ್ ಬಾಂಬ್‍ಗಳನ್ನು ಎಸೆದಿದ್ದರಿಂದ ತನಗೆ ಗಾಯಗಳಾಗಿದ್ದವು ಎಂದು ಹೇಳಿಕೊಂಡು ಅಜಯ್ ಕುಮಾರ್ ಝಾ ಎಂಬ ವ್ಯಕ್ತಿ ದಾಖಲಿಸಿದ್ದ ದೂರಿನ ಆಧಾರದ ಮೇಲೆ ತಾಹಿರ್ ಹುಸೈನ್ ವಿರುದ್ಧ ಪ್ರಕರಣ ದಾಖಲಾಗಿತ್ತು.

“ಪೂರಕ ಚಾರ್ಜ್‍ಶೀಟ್ ಸಲ್ಲಿಸಬೇಕಿದೆ ಎಂದು ಹೇಳಿಕೊಂಡು ವಾದ ಮಂಡನೆ ಮುಂದೂಡಿಕೆಗೆ ಮನವಿ ಸಲ್ಲಿಸುವುದು ಸರಿಯಲ್ಲ,'' ಎಂದು ನ್ಯಾಯಾಧೀಶಕರು ಹೇಳಿದರು. ಇದಕ್ಕೂ ಮುಂಚೆ ವಿಚಾರಣೆಯನ್ನು 30 ದಿನಗಳ ಕಾಲ ಮುಂದೂಡಿಕೆಗೆ ವಿಶೇಷ ಸಾರ್ವಜನಿಕ ಅಭಿಯೋಜಕ ಡಿ ಕೆ ಭಾಟಿಯಾ ಕೋರಿದ್ದರು. ಆದರೆ ಈಗಾಗಲೇ ಸಲ್ಲಿಸಲಾಗಿರುವ ಚಾರ್ಜ್‍ಶೀಟ್ ಆಧಾರದಲ್ಲಿಯೇ ವಾದ ಮಂಡನೆ ಆರಂಭಿಸುವಂತೆ ನ್ಯಾಯಾಲಯ ಅವರಿಗೆ ಹೇಳಿ ಅವರ ಅಪೀಲನ್ನು ತಿರಸ್ಕರಿಸಿ ತಾಹಿರ್ ಅವರ ವಕೀಲ ರಿಝ್ವಾನ್ ಅವರಿಗೆ ತಮ್ಮ ವಾದ ಮಂಡನೆ ಮುಂದುವರಿಸುವಂತೆ ಸೂಚಿಸಿತು.

“ಘಟನೆ ನಡೆದ ದಿನ ಪ್ರದೇಶದಲ್ಲಿ ಪೊಲೀಸರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದರು ಹಾಗೂ ಎಲ್ಲಾ ಅಂಗಡಿಗಳೂ ಬಂದ್ ಆಗಿದ್ದವು. ಆದರೂ ಸಾಕ್ಷಿಗಳು ತಾವು ಹಾಲು ಖರೀದಿಸಲು ಬಂದಿದ್ದಾಗಿ ಹೇಳಿದ್ದರು. ಗಾಯಗೊಂಡಿದ್ದಾನೆನ್ನಲಾದ ದೂರುದಾರ ಘಟನೆ ನಡೆದ ಎರಡು ಗಂಟೆಗಳಲ್ಲಿಯೇ ದೂರು ನೀಡಿದ್ದ ಹಾಗೂ ತನಗೆ ಗುಂಡಿಕ್ಕಿದವನನ್ನು ಗುರುತಿಸಿ ಆತ ತಾಹಿರ್ ಅಣತಿಯಂತೆ ನಡೆದುಕೊಂಡಿದ್ದ ಎಂದು ಹೇಳಿದ್ದ,'' ಎಂದು ರಿಝ್ವಾನ್ ಹೇಳಿದರು.

"ನನ್ನ ಕಕ್ಷಿಗಾರ ದಿಲ್ಲಿ ಚುನಾವಣೆ ಸಂದರ್ಭ ಪಿಸ್ತೂಲನ್ನು ಪೊಲೀಸರಿಗೆ ಸಲ್ಲಿಸಿದ್ದರು. ನಂತರ ಕಾನೂನಿನ ಪ್ರಕಾರ ವಾಪಸ್ ಪಡೆದುಕೊಂಡಿದ್ದರು. ಆದರೆ ಅದಕ್ಕೂ ಮುನ್ನ ಪಿಸ್ತೂಲ್ ವಾಪಸ್ ತೆಗೆದುಕೊಂಡು ಹೋಗುವಂತೆ ಪೊಲೀಸರಿಂದ ಕರೆಗಳು ಬಂದಿದ್ದವು. ಚುನಾವಣೆ ಫಲಿತಾಂಶಗಳು ಹೊರಬಿದ್ದ 12 ದಿನಗಳ ನಂತರ ಹಿಂಸೆ ನಡೆದಿತ್ತು,'' ಎಂದು ಅವರು ಹೇಳಿದಾಗ "ಸತ್ಯ ಅಂತಿಮವಾಗಿ ಹೊರಬರಲಿದೆ,'' ಎಂದು ನ್ಯಾಯಾಧೀಶರು ಹೇಳಿದರು ಎಂದು indianexpress.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News