ಚೆನ್ನೈ:ಕಾರು ಢಿಕ್ಕಿಯಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ವ್ಯಕ್ತಿಯ ಬ್ಯಾಗ್ ಎಗರಿಸಿದ ಪಾದಚಾರಿ

Update: 2021-09-16 15:12 GMT

ಚೆನ್ನೈ: ತಮಿಳುನಾಡಿನ ತಂಬರಂನಲ್ಲಿನ  ಜಿಎಸ್‌ಟಿ ರಸ್ತೆಯಲ್ಲಿ ಬುಧವಾರ ಬೆಳಗ್ಗಿನ ಜಾವ ವೇಗವಾಗಿ ಬಂದ ಕಾರೊಂದು ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯ ಮೇಲೆ ಹರಿದಿದ್ದು,ಈ ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ನಡೆದುಕೊಂಡು ಹೋಗುತ್ತಿದ್ದ ಇನ್ನೊಬ್ಬ ವ್ಯಕ್ತಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಂತ್ರಸ್ತನ ಸಹಾಯಕ್ಕೆ ಧಾವಿಸದೆ ಆತನ ಬ್ಯಾಗ್ ಅನ್ನು ಕದ್ದೊಯ್ದಿರುವ ಆಘಾತಕಾರಿ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸಿಸಿಟಿವಿ ಕ್ಯಾಮೆರಾ ತುಣುಕಿನ ಸಹಾಯದಿಂದ ಆ ವ್ಯಕ್ತಿಯನ್ನು ಸೆರೆ ಹಿಡಿಯುವ ನಿರೀಕ್ಷೆಯಿದೆ ಎಂದು ಪೊಲೀಸರು ಹೇಳಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ವ್ಯಕ್ತಿಯ ಬ್ಯಾಗ್ ಅನ್ನು ಕದ್ದೊಯ್ದ ವ್ಯಕ್ತಿ ಪಂಚೆ ಧರಿಸಿದ್ದು ತಡರಾತ್ರಿಯಲ್ಲಿ ಕಾಲ್ನಡಿಗೆಯಲ್ಲಿ ಹೋಗಿದ್ದರಿಂದ ಆತನು  ಸ್ಥಳೀಯನಾಗಿರಬಹುದೆಂದು ಶಂಕಿಸಲಾಗಿದೆ.

ಅಪಘಾತಕ್ಕೀಡಾದ ಅರ್ಜುನ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ತಾಂಬರಂ ಸಮೀಪದ ಆಚರಪಾಕ್ಕಂ ನಿವಾಸಿಯಾಗಿದ್ದರು. ಅರ್ಜುನ್  ಖಾಸಗಿ ಕಂಪನಿಯಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಬೆಳಗಿನ ಜಾವ 2.40 ರ ಸುಮಾರಿಗೆ ರಭಸದಿಂದ ಬಂದ ಕಾರೊಂದು ಹಿಂದಿನಿಂದ ಢಿಕ್ಕಿ ಹೊಡೆದಿದೆ. ಪರಿಣಾಮವಾಗಿ ಅರ್ಜುನ್ ಕಾರಿನ ಚಕ್ರದಡಿ ಸಿಲುಕಿ ಸಾವನ್ನಪ್ಪಿದ್ದಾರೆ.  

ಘಟನೆಗೆ ಸಂಬಂಧಿಸಿ ಪೆರುಂಗಲತ್ತೂರಿನ ಜಯಕುಮಾರ್ ಎಂಬ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಅಪಘಾತದ ಸಿಸಿಟಿವಿ ಕ್ಯಾಮೆರಾ ತುಣುಕನ್ನು ಪೊಲೀಸರು ಸ್ಕ್ಯಾನ್ ಮಾಡುತ್ತಿದ್ದಾಗ ವ್ಯಕ್ತಿಯೊಬ್ಬ ಬಲಿಪಶುವಿನ ಬ್ಯಾಗ್ ಅನ್ನು ಕದ್ದು ಹೋಗುತ್ತಿರುವುದನ್ನು ಗಮನಿಸಿದರು.

ಆತ ಪಾದಚಾರಿಯಂತೆ ಕಾಣುತ್ತಿದ್ದ. ಇತರರು ಅಪಘಾತಕ್ಕೀಡಾದವನನ್ನು ಗುರುತಿಸುವ ಮೊದಲೇ ದಾರಿಹೋಕ ಬ್ಯಾಗ್ ಎಗರಿಸಿಕೊಂಡು ಹೋಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News