3 ತಿಂಗಳ ಬಳಿಕ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಯತ್ತ ಹೊರಟ ಚೀನಾ ಗಗನಯಾತ್ರಿಗಳು

Update: 2021-09-16 17:23 GMT
photo: twitter.com/spaceanswers

ಬೀಜಿಂಗ್, ಸೆ.16: ಚೀನಾದ 3 ಗಗನಯಾತ್ರಿಗಳು ದೇಶದ ಅತ್ಯಂತ ಸುದೀರ್ಘ ಸಿಬಂದಿ ಸಹಿತ ಗಗನಯಾನದ ಕಾರ್ಯಕ್ರಮ ಪೂರ್ಣಗೊಳಿಸಿದ್ದು 90 ದಿನದ ಬಳಿಕ ಗುರುವಾರ ತಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣದಿಂದ ತಮ್ಮ ದೇಶದತ್ತ ಮರುಪ್ರಯಾಣ ಬೆಳೆಸಿದ್ದಾರೆ ಎಂದು ಚೀನಾದ ಸರಕಾರಿ ಸ್ವಾಮ್ಯದ ಮಾಧ್ಯಮ ವರದಿ ಮಾಡಿದೆ.

ಬಾಹ್ಯಾಕಾಶ ನಡಿಗೆ, ವೈಜ್ಞಾನಿಕ ಸಂಶೋಧನೆ ಒಳಗೊಂಡಿದ್ದ ಗಗನಯಾನ ಕಾರ್ಯಕ್ರಮ ಯಶಸ್ವಿಯಾಗಿ ಪೂರ್ಣಗೊಳಿಸಿದ ಗಗನಯಾತ್ರಿಗಳು ಶೆನ್‌ಶಾ-12 ಗಗನನೌಕೆಯ ಮೂಲಕ ಸ್ವದೇಶದತ್ತ ಪ್ರಯಾಣ ಬೆಳೆಸಿದ್ದು ಶುಕ್ರವಾರ ಭೂಮಿಗೆ ಹಿಂತಿರುಗುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ.

ಬಾಹ್ಯಾಕಾಶ ನಿಲ್ದಾಣದಲ್ಲಿ ಈ ಮೂವರು ಗಗನಯಾತ್ರಿಗಳಿಗೆ ಪ್ರತ್ಯೇಕ ವಾಸಸ್ಥಾನ, ದೈಹಿಕ ವ್ಯಾಯಾಮ ನಡೆಸುವ ಸಾಧನ, ಭೂಮಿಯಲ್ಲಿರುವ ನಿಯಂತ್ರಣ ಕಚೇರಿ ಜತೆ ಸಂಪರ್ಕ ಸಾಧಿಸಲು, ಇ-ಮೇಲ್ ಹಾಗೂ ವೀಡಿಯೊ ಕರೆ ಮಾಡಲು ಸಂವಹನ ಕೇಂದ್ರವನ್ನು ಹೊಂದಿತ್ತು ಎಂದು ಚೀನಾ ಏರೋಸ್ಪೇಸ್ ನ್ಯೂಸ್ ವರದಿ ಮಾಡಿದೆ. ಚೀನಾದ ಸೇನೆಯ ಅನುಭವಿ ಪೈಲಟ್ ನೀ ಹೈಶೆಂಗ್, ಲಿಯು ಬೋಮಿಂಗ್ ಮತ್ತು ಟ್ಯಾಂಗ್ ಹೊಂಗ್‌ಬೊ ಬಾಹ್ಕಾಕಾಶ ಕೇಂದ್ರದಲ್ಲಿದ್ದರು. ಮುಂದಿನ ವರ್ಷದ ಅಂತ್ಯದೊಳಗೆ 11 ಬಾಹ್ಯಾಕಾಶ ಪ್ರಯಾಣ ನಡೆಸುವ ಗುರಿಯನ್ನು ಚೀನಾದ ಬಾಹ್ಯಾಕಾಶ ಸಂಸ್ಥೆ ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News